ಡಬ್ಲಿನ್: ಐರ್ಲೆಂಡ್(India tour of Ireland, 2023) ವಿರುದ್ಧದ ಮೂರು ಪಂದ್ಯಗಳ ಟಿ20 ಪಂದ್ಯವನ್ನಾಡಲು ಟೀಮ್ ಇಂಡಿಯಾ ಈಗಾಗಲೇ ಡಬ್ಲಿನ್ ತಲುಪಿದೆ. ಉಭಯ ತಂಡಗಳ ಮೊದಲ ಟಿ20 ಪಂದ್ಯ(
Ireland vs India, 1st T20I) ಆಗಸ್ಟ್ 18(ಶುಕ್ರವಾರ) ರಿಂದ ಆರಂಭಗೊಳ್ಳಲಿದೆ. ಬುಧವಾರ ಟೀಮ್ ಇಂಡಿಯಾ ಆಟಗಾರರು ಬ್ಯಾಟಿಂಗ್ ಮತ್ತು ಬೌಲಿಂಗ್ ಅಭ್ಯಾಸ ನಡೆಸಿರುವ ವಿಡಿಯೊವನ್ನು ಬಿಸಿಸಿಐ ತನ್ನ ಅಧಿಕೃತ ಟ್ವಿಟರ್‌ನಲ್ಲಿ ಹಂಚಿಕೊಂಡಿದೆ.
ತೀವ್ರ ಸ್ವರೂಪದ ಬೆನ್ನು ನೋವಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಮಾಡಿಸಿ 11 ತಿಂಗಳುಗಳ ಬಳಿಕ ಭಾರತ ಕ್ರಿಕೆಟ್ ತಂಡದ ಪರ ಆಡಲಿರುವ ಜಸ್‌ಪ್ರೀತ್ ಬುಮ್ರಾ(Jasprit Bumrah) ಅವರು ನೆಟ್ಸ್‌ನಲ್ಲಿ ಘಾತಕ ಬೌಲಿಂಗ್ ದಾಳಿ ನಡೆಸಿದ್ದಾರೆ. ಅವರ ಯಾರ್ಕರ್ ಮತ್ತು ಬೌನ್ಸರ್ ದಾಳಿಗೆ ಬ್ಯಾಟ್ ಬೀಸಲು ಯುವ ಆಟಗಾರರು ಭಯ ಬೀತರಾಗಿದ್ದಾರೆ. ಬುಮ್ರಾ ಅವರ ಈ ಬೌಲಿಂಗ್ ದಾಳಿಯ ವಿಡಿಯೊವನ್ನು ಹಂಚಿಕೊಂಡಿರುವ ಬಿಸಿಸಿಐ “ನಿಮ್ಮ ಈ ಪ್ರದರ್ಶನಕ್ಕೆ ಹಲವು ದಿನಗಳಿಂದ ಎದುರು ನೋಡುತ್ತಿದ್ದೇವೆ” ಎಂದು ಬರೆದುಕೊಂಡಿದೆ.
ನಿಟ್ಟುಸಿರು ಬಿಟ್ಟ ಬಿಸಿಸಿಐ
ಬುಮ್ರಾ ಅವರ ಅನುಪಸ್ಥಿಯಲ್ಲಿ ಭಾರತ ಕಳೆದ ವರ್ಷ ಏಷ್ಯಾ ಕಪ್, ಟಿ20 ವಿಶ್ವಕಪ್ ಮತ್ತು ಈ ವರ್ಷ ನಡೆದ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಹಿನ್ನಡೆ ಅನುಭವಿಸಿತ್ತು. ಇದೇ ಅಕ್ಟೋಬರ್ 5ರಿಂದ ಭಾರತದಲ್ಲೇ ನಡೆಯುವ ಏಕದಿನ ವಿಶ್ವಕಪ್‌ನಲ್ಲಿ ಅವರ ಉಪಸ್ಥಿತಿಗಾಗಿ ಬಿಸಿಸಿಐ ಕಾದು ಕುಳಿತಿದೆ. ಏಷ್ಯಾ ಕಪ್‌ನಲ್ಲಿಯೂ ಅವರನ್ನು ಕಣಕ್ಕಿಳಿಸುವ ಯೋಜನೆಯಲ್ಲಿದೆ. ಇದೀಗ ಐರ್ಲೆಂಡ್ ಸರಣಿಗೂ ಮುನ್ನವೇ ಅವರು ನೆಟ್ಸ್‌ನಲ್ಲಿ ಬೆಂಕಿ ಚೆಂಡುಗಳನ್ನು ಎಸೆದಿರುವುದನ್ನು ಕಂಡ ಬಿಸಿಸಿಐ ನಿಟ್ಟುಸಿರು ಬಿಟ್ಟಿದೆ. ಇನ್ನು ಈ ಸರಣಿಯಲ್ಲಿ ಬುಮ್ರಾ ಅವರೇ ನಾಯಕತ್ವ ವಹಿಸಿಕೊಂಡಿದ್ದಾರೆ.
ಬುಮ್ರಾ ಭವಿಷ್ಯ ನಿರ್ಧಾರ
ಏಷ್ಯಾಕಪ್ ಮತ್ತು ವಿಶ್ವಕಪ್ಗೆ ಆಯ್ಕೆ ಮಾಡಲು ಬುಮ್ರಾ ಅವರಿಗೆ ಈ ಸರಣಿ ಅಗ್ನಿಪರೀಕ್ಷೆಯಾಗಿದೆ. ಒಂದೊಮ್ಮೆ ಅವರು ಮತ್ತೆ ಗಾಯಕ್ಕೆ ತುತ್ತಾದರೆ ಭಾರತ ತಂಡಕ್ಕೆ ವಿಶ್ವಕಪ್‌ನಲ್ಲಿ ಹಿನ್ನಡೆಯಾಗುವುದ ಜತೆಗೆ ಬುಮ್ರಾ ಅವರ ಕ್ರಿಕೆಟ್ ಬಾಳ್ವೆಯೂ ಅಂತ್ಯ ಕಾಣುವು ಸಾಧ್ಯತೆ ಅಧಿಕವಾಗಿದೆ. ಈ ಸರಣಿಯಿಂದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ರವೀಂದ್ರ ಜಡೇಜಾ, ಹಾರ್ದಿಕ್ ಪಾಂಡ್ಯ ಸೇರಿ ಎಲ್ಲ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ. ಬುಮ್ರಾ ಹೊರತು ಪಡಿಸಿ ಉಳಿದ ಎಲ್ಲ ಆಟಗಾರರು ಕೂಡ ಐಪಿಎಲ್ ಸ್ಟಾರ್ಗಳಾಗಿದ್ದಾರೆ.
ಇದನ್ನೂ ಓದಿ Jasprit Bumrah : ಬುಮ್ರಾ ಫುಲ್ ಫಿಟ್, ಐರ್ಲೆಂಡ್ ಪ್ರವಾಸದ ಭಾರತ ತಂಡಕ್ಕೆ ಆಯ್ಕೆ, ಅವರೇ ನಾಯಕ
ಉಭಯ ತಂಡಗಳು
ಐರ್ಲೆಂಡ್ ತಂಡ: ಪಾಲ್ ಸ್ಟಿರ್ಲಿಂಗ್ (ನಾಯಕ), ಆಂಡ್ರ್ಯೂ ಬಾಲ್ಬಿರ್ನಿ, ಮಾರ್ಕ್ ಅಡೈರ್, ರಾಸ್ ಅಡೈರ್, ಕರ್ಟಿಸ್ ಕ್ಯಾಂಫರ್, ಗೆರಾತ್ ಡೆಲಾನಿ, ಜಾರ್ಜ್ ಡಾಕ್ರೆಲ್, ಫಿಯಾನ್ ಹ್ಯಾಂಡ್, ಜೋಶ್ ಲಿಟಲ್, ಬ್ಯಾರಿ ಮೆಕಾರ್ಥಿ, ಹ್ಯಾರಿ ಟೆಕ್ಟರ್, ಲೋರ್ಕನ್ ಟಕರ್, ಥಿಯೋ ವ್ಯಾನ್ ವೋರ್ಕಾಮ್, ಬೆನ್ ವೈಟ್, ಕ್ರೇಗ್ ಯಂಗ್.
ಭಾರತ ತಂಡ: ಜಸ್‌ಪ್ರೀತ್ ಬುಮ್ರಾ (ನಾಯಕ), ರುತುರಾಜ್ ಗಾಯಕ್ವಾಡ್, ಯಶಸ್ವಿ ಜೈಸ್ವಾಲ್, ತಿಲಕ್ ವರ್ಮ, ರಿಂಕು ಸಿಂಗ್, ಸಂಜು ಸ್ಯಾಮ್ಸನ್, ಜಿತೇಶ್ ಶರ್ಮ, ಶಿವಂ ದುಬೆ, ವಾಷಿಂಗ್ಟನ್ ಸುಂದರ್, ಶಾಬಾಜ್ ಅಹ್ಮದ್, ರವಿ ಬಿಷ್ಣೋಯಿ, ಪ್ರಸಿದ್ಧ್ ಕೃಷ್ಣ, ಅರ್ಶದೀಪ್ ಸಿಂಗ್, ಮುಕೇಶ್ ಕುಮಾರ್, ಆವೇಶ್ ಖಾನ್.