Site icon Vistara News

Team India : ಶೂಗಳ ಚಿತ್ರ ಹಾಕಿ ಹೊಸ ಸಂದೇಶ ರವಾನಿಸಿದ ಬುಮ್ರಾ; ಏನಿದರ ಅರ್ಥ?

jasprit bumrah shoes

#image_title

ಮುಂಬಯಿ: ಭಾರತ ತಂಡದ ವೇಗದ ಬೌಲರ್​ ಜಸ್​ಪ್ರಿತ್​ ಕಳೆದ 10 ತಿಂಗಳಿಂದ ಆಡುತ್ತಿಲ್ಲ. ಬೆನ್ನು ನೋವಿನ ಸಮಸ್ಯೆಗೆ ಒಳಗಾಗಿರುವ ಅವರು ಎರಡು ಐಸಿಸಿ ಟೂರ್ನಿ, ತವರಿನ ಹಾಗೂ ವಿದೇಶದ ಪ್ರವಾಸದ ಸರಣಿಗಳನ್ನು ನಷ್ಟ ಮಾಡಿಕೊಂಡಿದ್ದಾರೆ. ಹಾಲಿ ಆವೃತ್ತಿಯ ಐಪಿಎಲ್​ನಲ್ಲಿ ಆಡಿಲ್ಲ. ಏತನ್ಮಧ್ಯೆ ಅವರಿಗೆ ಕಳೆದ ಮಾರ್ಚ್​ನಲ್ಲಿ ನ್ಯೂಜಿಲ್ಯಾಂಡ್​ನಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಇದೀಗ ಅವರು ಮತ್ತೆ ಆಟದ ಕಣಕ್ಕೆ ಇಳಿಯುವ ಸೂಚನೆ ಕೊಟ್ಟಿದ್ದಾರೆ. ಅವರು ಇನ್​ಸ್ಟಾಗ್ರಾಮ್​ ಅಕೌಂಟ್​ನಲ್ಲಿ ತಮ್ಮ ಬೌಲಿಂಗ್ ಸ್ಪೈಕ್​ಗಳ ಚಿತ್ರಗಳನ್ನು ಹಾಕಿದ್ದಾರೆ. ಅದಕ್ಕವರು ಹಲೊ ಸ್ನೇಹಿತರೇ ಮತ್ತೆ ಭೇಟಿಯಾಗಲಿದ್ದೇವೆ ಎಂದು ಶೀರ್ಷಿಕೆ ಕೊಟ್ಟಿದ್ದಾರೆ.

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಪತ್ರಿಕಾ ಪ್ರಕಟಣೆಯಲ್ಲಿ ಖಚಿತಪಡಿಸಿದಂತೆ 29 ವರ್ಷದ ಬೌಳರ್​​ ಕಳೆದ ಏಪ್ರಿಲ್​​ನಲ್ಲಿ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಪುನಶ್ಚೇತನ ಕಾರ್ಯಕ್ಕೆ ಒಳಗಾಗಿದ್ದರು. ಹೀಗಾಗಿ ಮುಂಬೈ ಇಂಡಿಯನ್ಸ್ ಪರ ಐಪಿಎಲ್ 2023 ರಲ್ಲಿ ಭಾಗವಹಿಸಿರಲಿಲ್ಲ. ಇದೀಗ ಅವರು ಸಂಪೂರ್ಣ ಸುಧಾರಿಸಿಕೊಂಡಿರುವ ಸಾಧ್ಯತೆಗಳಿವೆ. ಹೀಗಾಗಿ ಚಿತ್ರವನ್ನು ಪೋಸ್ಟ್​ ಮಾಡುವ ಮೂಲಕ ತಂಡಕ್ಕೆ ಮರಳುವ ಸೂಚನೆ ಕೊಟ್ಟಿದ್ದಾರೆ. ಮುಂಬರುವ ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್​ನ ಫೈನಲ್ ಪಂದ್ಯಕ್ಕೆ ಅವರು ಆಯ್ಕೆಯಾಗಿಲ್ಲ. ನಂತರದಲ್ಲಿ ಅವರು ತಂಡಕ್ಕೆ ಮರಳುವ ಸಾಧ್ಯತೆಗಳಿವೆ.

ಹಿನ್ನಡೆ ಅನುಭವಿಸಿದ್ದ ಮುಂಬೈ ಇಂಡಿಯನ್ಸ್

ಜಸ್​ಪ್ರಿತ್​ ಬುಮ್ರಾ ಅವರ ಅಲಭ್ಯತೆಯಿಂದಾಗಿ ಐದು ಬಾರಿಯ ಚಾಂಪಿಯನ್​ ಮುಂಬಯಿ ಇಂಡಿಯನ್ಸ್ ತಂಡ ಹಾಲಿ ಆವೃತ್ತಿಯ ಐಪಿಎಲ್​ನಲ್ಲಿ ಹೊಡ್ಡ ಮಟ್ಟದ ಹಿನ್ನಡೆ ಅನುಭವಿಸಿತ್ತು ಅವರ ಅನುಪಸ್ಥಿತಿಯು ಮುಂಬೈನ ಬೌಲಿಂಗ್ ದಾಳಿ ದುರ್ಬಲಗೊಂಡಿತ್ತು. ಇಂಗ್ಲೆಂಡ್​ನ ವೇಗದ ಬೌಲರ್ ಜೋಫ್ರಾ ಆರ್ಚರ್ ಅವರ ಮೇಲೆ ಮುಂಬೈ ಭರವಸೆ ಇಟ್ಟಿತ್ತು. ಆದರೆ ಮೊಣಕೈ ಸಮಸ್ಯೆಯು ಪುನರಾವರ್ತನೆಗೊಂಡ ಕಾರಣ ಅವರ ಸೇವೆಯು ತಂಡಕ್ಕೆ ಲಭಿಸಲಿಲ್ಲ. ಹೀಗಾಗಿ ರೋಹಿತ್ ಶರ್ಮಾ ನೇತೃತ್ವದ ತಂಡದ ಬೌಲಿಂಗ್ ವಿಭಾಗ ಒತ್ತಡ ಎದುರಿಸಿತ್ತು.

ಆರ್ಚರ್ ಐಪಿಎಲ್​ 2023ರಲ್ಲಿ ಮುಂಬೈ ಪರ ಐದು ಬಾರಿ ಮೈದಾನಕ್ಕೆ ಇಳಿದಿದ್ದರೂ ಸಂಪೂರ್ಣ ವೈಫಲ್ಯ ಎದುರಿಸಿದ್ದರು. 9.5 ಎಕಾನಮಿಯಲ್ಲಿ ರನ್​ ನೀಡಿದ್ದ ಅವರು ಕೇವಲ ಎರಡು ಉರುಳಿಸಲು ಸಫಲಗೊಂಡಿದ್ದರು. ಹೀಗಾಗಿ 28 ವರ್ಷದ ವೇಗಿ ಕೊನೇ ಹಂತದಲ್ಲಿ ಆಡಿರಲಿಲ್ಲ. ಶಸ್ತ್ರಚಿಕಿತ್ಸೆಗೆ ಒಳಗಾಗಲು ಬೆಲ್ಜಿಯಂಗೆ ಹೋಗಿದ್ದಾರೆ ಎಂದು ವರದಿಯಾಗಿದ್ದವು.

ಮುಂಬಯಿ ತಂಡದಲ್ಲಿ ಉಂಟಾದ ಗಾಯದ ಸಮಸ್ಯೆ ಜೇಸನ್ ಬೆಹ್ರೆನ್ಡಾರ್ಫ್ ಮತ್ತು ಆಕಾಶ್ ಮಧ್ವಾಲ್ ಅವರಿಗೆ ಸುವರ್ಣಾವಕಾಶಗಳನ್ನು ನೀಡಿತು. ಇಬ್ಬರೂ ವೈಯಕ್ತಿಕ ಅತ್ಯುತ್ತಮ ಪ್ರದರ್ಶನವನ್ನು ನೀಡಿದ್ದರು. ಆದರೆ, ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಗುಜರಾತ್​ ತಂಡವನ್ನು ಕಟ್ಟಿ ಹಾಕಲು ಈ ಬೌಲರ್​ಗಳಿಗೆ ಸಾಧ್ಯವಾಗಿರಲಿಲ್ಲ.

ರೋಹಿತ್ ಶರ್ಮಾ ನೇತೃತ್ವದ ತಂಡದಲ್ಲಿ ಬೆಹ್ರೆನ್ಡಾರ್ಫ್ 12 ಪಂದ್ಯಗಳಲ್ಲಿ 9.21 ಎಕಾನಮಿಯಂತೆ 14 ವಿಕೆಟ್​ಗಳನ್ನು ಉರುಳಿಸಿದ್ದಾರೆ. ಇನ್ನು ಮಧ್ವಾಲ್​ ಆಡಿದ ಎಂಟು ಪಂದ್ಯಗಳಲ್ಲಿ 8.59 ಎಕಾನಮಿಯಂತೆ 14 ವಿಕೆಟ್​ ಕಬಳಿಸಿದ್ದಾರೆ. ಇನ್ನು ಮೇ 24 ರಂದು ಕೃಣಾಲ್ ಪಾಂಡ್ಯ ನೇತೃತ್ವದ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಎಲಿಮಿನೇಟರ್ ಪಂದ್ಯದಲ್ಲಿ ಮಧ್ವಾಲ್ 3.3 ಓವರ್ಗಳಲ್ಲಿ 5 ರನ್​​ಗಳಿಗೆ 5 ವಿಕೆಟ್ ಉರುಳಿಸಿದ್ದರು.

Exit mobile version