ಮುಂಬಯಿ : ಭಾರತ ತಂಡದ ವೇಗದ ಬೌಲಿಂಗ್ ವಿಭಾಗದ ಪ್ರಧಾನ ಅಸ್ತ್ರವೆನಿಸಿಕೊಂಡಿರುವ ಜಸ್ಪ್ರಿತ್ ಬುಮ್ರಾ ಅವರು ಜನವರಿ 10ರಂದು ಆರಂಭಗೊಳ್ಳಲಿರುವ ಶ್ರೀಲಂಕಾ ವಿರುದ್ಧದ ಏಕ ದಿನ ಸರಣಿಗೆ ಅಲಭ್ಯರಾಗಿದ್ದಾರೆ. ಇದೇ ವೇಳೆ ಅವರು ಮಂಬರುವ ಆಸ್ಟ್ರೇಲಿಯಾ ವಿರುದ್ಧದ ತವರಿನ ಟೆಸ್ಟ್ ಸರಣಿ ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲೂ (Border Gavaskar Trophy 2023) ಪಾಲ್ಗೊಳ್ಳುವುದು ಅನುಮಾನ ಎನಿಸಿದೆ. ಒಂದು ವೇಳೆ ಈ ಲೆಕ್ಕಾಚಾರ ಸರಿಯಾಗಿದ್ದರೆ ಭಾರತ ತಂಡಕ್ಕೆ ದೊಡ್ಡ ಹಿನ್ನಡೆಯಾಗಲಿದೆ.
ಫೆಬ್ರವರಿ ಹಾಗೂ ಮಾರ್ಚ್ ತಿಂಗಳಲ್ಲಿ ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ ಸರಣಿ ನಡೆಯಲಿದೆ. ಬುಮ್ರಾ ಅವರು ಬೆನ್ನು ನೋವಿನ ಸಮಸ್ಯೆ ನಿವಾರಣೆಗೆ ಇನ್ನೂ ಒಂದು ತಿಂಗಳ ಕಾಲ ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಳ್ಳಬೇಕಾಗಿದೆ. ಹೀಗಾಗಿ ಸರಣಿಗೆ ಅವರು ಅಲಭ್ಯರಾಗುವ ಸಾಧ್ಯತೆ ಇದೆ ಎಂದು ಕ್ರಿಕ್ ಇನ್ಫೋ ವರದಿ ಮಾಡಿದೆ.
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಅಂಕ ಪಟ್ಟಿಯಲ್ಲಿ ಆಸ್ಟ್ರೇಲಿಯಾ, ಭಾರತ ಹಾಗೂ ದಕ್ಷಿಣ ಆಫ್ರಿಕಾ ಕ್ರಮವಾಗಿ ಮೊದಲ ಮೂರು ಸ್ಥಾನಗಳಲ್ಲಿವೆ. ಮೊದಲೆರಡು ಸ್ಥಾನ ಪಡೆದ ತಂಡಗಳು ಫೈನಲ್ಗೆ ಅರ್ಹತೆ ಗಿಟ್ಟಿಸಿಕೊಳ್ಳಲಿವೆ. ಆಸ್ಟ್ರೇಲಿಯಾ ತಂಡ ಈಗಾಗಲೇ ಅವಕಾಶ ಪಡೆದುಕೊಂಡಿದ್ದು, ದಕ್ಷಿಣ ಆಫ್ರಿಕಾ ಮತ್ತು ಭಾರತ ನಡುವೆ ಎರಡನೇ ಸ್ಥಾನಕ್ಕೆ ಪೈಪೋಟಿಯಿದೆ. ಹೀಗಾಗಿ ಈ ಸರಣಿ ಭಾರತ ತಂಡಕ್ಕೆ ಪ್ರಮುಖ ಎನಿಸಿದೆ. ಬುಮ್ರಾ ತಂಡದಲ್ಲಿದ್ದರೆ ಭಾರತ ತಂಡಕ್ಕೆ ಈ ಸರಣಿ ಗೆಲ್ಲಲು ಅನುಕೂಲವಾಗುತ್ತಿತ್ತು. ಆದರೆ, ಅವರ ಅಲಭ್ಯತೆ ತಂಡವನ್ನು ಕಾಡಲಿದೆ.
ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಮೊದಲು ಭಾರತ ತಂಡ ಪ್ರವಾಸಿ ನ್ಯೂಜಿಲೆಂಡ್ ವಿರುದ್ಧದ ಚುಟುಕು ಕ್ರಿಕೆಟ್ ಪಂದ್ಯಗಳ ಸರಣಿಯಲ್ಲೂ ಪಾಲ್ಗೊಳ್ಳಬೇಕಾಗಿದೆ.
ಇದನ್ನೂ ಓದಿ | Jasprit Bumrah | ಜಸ್ಪ್ರಿತ್ ಬುಮ್ರಾ ಅಲಭ್ಯತೆಗೆ ಕಾರಣ ತಿಳಿಸಿದ ಬಿಸಿಸಿಐ; ಏನಾಗಿದೆ ಅವರಿಗೆ?