ಕೊಲೊಂಬೊ: ಭಾರತ ಹಾಗೂ ಪಾಕಿಸ್ತಾನ ಕ್ರಿಕೆಟ್ ಪಂದ್ಯ ಎಂದರೆ ಯಾವಾಗಲೂ ಹೈವೋಲ್ಟೇಜ್‌ನಿಂದ ಕೂಡಿರುತ್ತದೆ. ಅದರಲ್ಲೂ, ವಿಶ್ವಕಪ್, ಏಷ್ಯಾಕಪ್ ಸೇರಿ ಯಾವುದೇ ಪ್ರಮುಖ ಟೂರ್ನಿಗಳಲ್ಲಿ ಉಭಯ ದೇಶಗಳ ನಡುವಿನ ಪಂದ್ಯ ಎಂದರೆ ಹೈವೋಲ್ಟೇಜ್ ದುಪ್ಪಟ್ಟಾಗಿರುತ್ತದೆ. ಅದರಂತೆ, ಏಷ್ಯಾ ಕಪ್ (Asia Cup 2023) ಟೂರ್ನಿಯ ಹಿನ್ನೆಲೆಯಲ್ಲಿ ಶ್ರೀಲಂಕಾದಲ್ಲಿ ಸೆಪ್ಟೆಂಬರ್ 2ರಂದು ಭಾರತ ಹಾಗೂ ಪಾಕಿಸ್ತಾನ ಪಂದ್ಯ ನಡೆಯಲಿದ್ದು, ಪಂದ್ಯಕ್ಕಾಗಿ ಎರಡೂ ದೇಶಗಳ ಜನ ಕುತೂಹಲದಿಂದ ಕಾಯುತ್ತಿದ್ದಾರೆ. ಇನ್ನು ಪಂದ್ಯದಲ್ಲಿ ಯಾವ ಆಟಗಾರನಿಗೆ ಎದುರಾಳಿಯ ಯಾವ ಆಟಗಾರ ಸವಾಲೊಡ್ಡಬಹುದು, ಯಾವ ಬೌಲರ್‌ಗೆ ಯಾವ ಬ್ಯಾಟ್ಸ್‌ಮನ್ ಚಚ್ಚಬಹುದು ಎಂಬ ಲೆಕ್ಕಾಚಾರವೂ ಶುರುವಾಗಿದೆ.
ಶಹೀನ್ ಅಫ್ರಿದಿ ವರ್ಸಸ್ ರೋಹಿತ್ ಶರ್ಮಾ
ಪಾಕಿಸ್ತಾನದ ಶಹೀನ್ ಅಫ್ರಿದಿಯು ಮಾರಕ ದಾಳಿಗೆ ಹೆಸರಾಗಿದ್ದರೆ, ಭಾರತ ತಂಡದ ರೋಹಿತ್ ಶರ್ಮಾ ಆರಂಭದಿಂದಲೇ ಆಕ್ರಮಣಕಾರಿ ಬ್ಯಾಟಿಂಗ್‌ಗೆ ಹೆಸರಾಗಿದ್ದಾರೆ. ಮೊದಲ ಓವರ್‌ನಲ್ಲಿಯೇ ಶರ್ಮಾ ಸಿಕ್ಸರ್ ಬಾರಿಸುವ ಛಾತಿ ಹೊಂದಿದ್ದರೆ, ಮೊದಲ ಓವರ್‌ನಲ್ಲಿಯೇ ವಿಕೆಟ್ ಕಿತ್ತು ಛಲವನ್ನು ಅಫ್ರಿದಿ ಹೊಂದಿದ್ದಾರೆ. ಹಾಗಾಗಿ, ಇವರಿಬ್ಬರ ನಡುವಿನ ಕದನವು ಕುತೂಹಲ ಕೆರಳಿಸಿದೆ.
ವಿರಾಟ್ ಕೊಹ್ಲಿ ವರ್ಸ್ ಹ್ಯಾರಿಸ್ ರೌಫ್
ಕಳೆದ ವರ್ಷ ನಡೆದ ಟಿ-20 ವಿಶ್ವಕಪ್ ವೇಳೆ ಪಾಕ್ ವೇಗಿ ಹ್ಯಾರಿಸ್ ರೌಫ್ ಬೌಲಿಂಗ್‌ಗೆ ವಿರಾಟ್ ಕೊಹ್ಲಿ ಲೀಲಾಜಾಲವಾಗಿ ಸಿಕ್ಸರ್ ಬಾರಿಸಿದ್ದನ್ನು ಯಾವ ಭಾರತೀಯನೂ ಮರೆತಿರಲಿಕ್ಕಿಲ್ಲ. ಈ ಬಾರಿಯೂ ರೌಫ್ ಎಸೆತಕ್ಕೆ ವಿರಾಟ್ ಕೊಹ್ಲಿ ಯಾವ ರೀತಿ ಉತ್ತರಿಸಲಿದ್ದಾರೆ? ಕಳೆದ ಬಾರಿಯ ಹಿನ್ನಡೆಯ ಸೇಡನ್ನು ಈ ಬಾರಿ ರೌಫ್ ತೀರಿಸಿಕೊಳ್ಳಲಿದ್ದಾರಾ ಎಂಬ ಪ್ರಶ್ನೆ ಅಭಿಮಾನಿಗಳನ್ನು ಕಾಡುತ್ತಿದೆ.
ಜಸ್‌ಪ್ರಿತ್ ಬುಮ್ರಾ ವರ್ಸಸ್ ಬಾಬರ್ ಅಜಂ
ಏಷ್ಯಾ ಕಪ್ ಟೂರ್ನಿಯ ಮೊದಲ ಪಂದ್ಯದಲ್ಲೇ ನೇಪಾಳ ವಿರುದ್ಧ ಶತಕ ಸಿಡಿಸಿರುವ ಬಾಬರ್ ಅಜಂ ಅವರನ್ನು ಜಸ್‌ಪ್ರಿತ್ ಬುಮ್ರಾ ಕಟ್ಟಿಹಾಕಲಿದ್ದಾರಾ? ಯಾರ್ಕರ್ ಎಸೆದು ಅವರನ್ನು ಪೆವಿಲಿಯನ್‌ಗೆ ಕಳುಹಿಸಲಿದ್ದಾರಾ ಎಂಬ ಕುತೂಹಲ ಹೆಚ್ಚಾಗಿದೆ. ಜಾಗತಿಕವಾಗಿ ಅದ್ಭುತ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾಗಿರುವ ಬಾಬರ್ ಅಜಂ ಒಳ್ಳೆಯ ಫಾರ್ಮ್‌ನಲ್ಲಿದ್ದಾರೆ. ಇತ್ತ ಗಾಯದ ಸಮಸ್ಯೆಯಿಂದ ಬಳಲಿ, ಮತ್ತೆ ತಂಡ ಸೇರಿರುವ ಬುಮ್ರಾ ಯಾವ ಮ್ಯಾಜಿಕ್ ಮಾಡಲಿದ್ದಾರೆ ಎಂಬುದನ್ನು ಕಾದುನೋಡಬೇಕಿದೆ.
ಇದನ್ನೂ ಓದಿ: Asia Cup 2023: ಪಾಕಿಸ್ತಾನದಲ್ಲೂ ಪಂದ್ಯ ಆಡಲಿದೆ ಟೀಮ್ ಇಂಡಿಯಾ!
ಸ್ಟಾರ್ ಆಟಗಾರರ ಜತೆಗೆ ಕುಲದೀಪ್ ಯಾದವ್ ಅವರು ಇಫ್ತಿಕರ್ ಅಹ್ಮದ್ ಅವರನ್ನು ಹೇಗೆ ಕಟ್ಟಿಹಾಕಲಿದ್ದಾರೆ? ಭಾರತದ ಬೌಲರ್‌ಗಳು ಹೇಗೆ ಫಖಾರ್ ಜಮಾನ್ ಅವರನ್ನು ಕಾಡಲಿದ್ದಾರೆ? ಪಾಕ್ ವೇಗಿಗಳು ಭಾರತದ ಬ್ಯಾಟ್ಸ್‌ಮನ್‌ಗಳನ್ನು ಎಷ್ಟರಮಟ್ಟಿಗೆ ಗೋಳುಹೊಯ್ದುಕೊಳ್ಳಲಿದ್ದಾರೆ ಎಂಬುದಕ್ಕೆ ಸೆಪ್ಟೆಂಬರ್ 2ರವರೆಗೆ ಕಾಯಲೇಬೇಕಾಗಿದೆ. ಇಷ್ಟೆಲ್ಲ ಕಾರಣಗಳಿಂದಾಗಿಯೇ ಪಂದ್ಯವು ಹೈವೋಲ್ಟೇಜ್ ಎನಿಸಿದೆ.