ಅಡಿಲೇಡ್ : ಭಾರತ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ (IND vs ENG) ತಂಡ ೧೦ ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿದೆ. ಈ ಗೆಲುವಿನ ಮೂಲಕ ಆಂಗ್ಲರ ಪಡೆ ಪಾಕಿಸ್ತಾನ ವಿರುದ್ಧದ ವಿಶ್ವ ಕಪ್ ಫೈನಲ್ ಪಂದ್ಯಕ್ಕೆ ವೇದಿಕೆ ಸಿದ್ಧಪಡಿಸಿಕೊಂಡಿದೆ. ಇವೆಲ್ಲದರ ನಡುವೆ ಇಂಗ್ಲೆಂಡ್ ತಂಡದ ಆರಂಭಿಕ ಬ್ಯಾಟರ್‌ಗಳಾದ ಅಲೆಕ್ಸ್ ಹೇಲ್ಸ್ ಹಾಗೂ ಜೋಸ್ ಬಟ್ಲರ್ ಟಿ೨೦ ವಿಶ್ವ ಕಪ್‌ನಲ್ಲಿ ಗರಿಷ್ಠ ರನ್‌ಗಳ ಆರಂಭಿಕ ವಿಕೆಟ್ ಜತೆಯಾಟ ನೀಡಿದ ದಾಖಲೆ ಸೃಷ್ಟಿಸಿದ್ದಾರೆ.
ಭಾರತ ತಂಡ ನೀಡಿದ್ದ ೧೬೯ ರನ್‌ಗಳ ಗುರಿಗೆ ಪ್ರತಿಯಾಗಿ ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡದ ಆರಂಭಿಕ ಬ್ಯಾಟರ್‌ಗಳಾದ ಅಲೆಕ್ಸ್ ಹೇಲ್ಸ್ ಹಾಗೂ ಬಟ್ಲರ್ ೧೬ ಓವರ್‌ಗಳಲ್ಲಿ ೧೭೦ ರನ್ ಬಾರಿಸಿ ಸುಲಭ ವಿಜಯ ತಂದುಕೊಟ್ಟರು. ಹೇಲ್ಸ್ ೪೭ ಎಸೆತಗಳಲ್ಲಿ ೮೯ ರನ್ ಬಾರಿಸಿದ್ದರೆ, ಬಟ್ಲರ್ ೪೯ ಎಸೆತಗಳಲ್ಲಿ ೮೦ ರನ್ ಬಾರಿಸಿದ್ದಾರೆ. ಈ ಮೂಲಕ ಈ ಜೋಡಿ ಟಿ೨೦ ವಿಶ್ವ ಕಪ್‌ನಲ್ಲಿ ಗರಿಷ್ಠ ಜತೆಯಾಟ ನೀಡಿದ ವಿಶ್ವ ದಾಖಲೆ ಮಾಡಿದರು. ಅಲ್ಲದೆ ಎರಡು ವಾರದ ಹಿಂದೆ ದಕ್ಷಿಣ ಆಫ್ರಿಕಾದ ಬ್ಯಾಟರ್‌ಗಳಾದ ಕ್ವಿಂಟನ್ ಡಿ ಕಾಕ್ ಹಾಗೂ ರೀಲಿ ರೊಸ್ಸೊ ಸೃಷ್ಟಿಸಿದ್ದ ೧೬೮ ರನ್‌ಗಳ ಜತೆಯಾಟದ ದಾಖಲೆ ಮುರಿದರು.
ಕ್ವಿಂಟನ್ ಡಿ ಕಾಕ್ ಹಾಗೂ ರೊಸ್ಸೊ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ೧೬೮ ರನ್ ಬಾರಿಸಿದ್ದರು. ಅದಕ್ಕಿಂತ ಮೊದಲು ಶ್ರೀಲಂಕಾ ತಂಡದ ಮಹೇಲಾ ಜಯವರ್ಧನೆ ಹಾಗೂ ಕುಮಾರ ಸಂಗಕ್ಕಾರ ೨೦೧೦ರಲ್ಲಿ ಸೃಷ್ಟಿಸಿದ್ದ ೧೬೬ ರನ್‌ಗಳನ್ನು ಬಾರಿಸುವ ಮೂಲಕ ಈ ವಿಶ್ವ ದಾಖಲೆ ತಮ್ಮೆಸರಿಗೆ ಬರೆಸಿಕೊಂಡಿದ್ದರು. ಪಾಕಿಸ್ತಾನದ ಮೊಹಮ್ಮದ್ ರಿಜ್ವಾನ್ ಹಾಗೂ ಬಾಬರ್ ಅಜಮ್ (ಅಜೇಯ ೧೫೨ ರನ್) ಭಾರತದ ವಿರುದ್ಧವೇ ಗರಿಷ್ಠ ರನ್‌ಗಳ ಜತೆಯಾಟ ನೀಡಿದ್ದರು. ೨೦೨೧ರಲ್ಲಿ ಯುಎಇನಲ್ಲಿ ನಡೆದಿದ್ದ ವಿಶ್ವ ಕಪ್‌ನಲ್ಲಿ ಅವರು ಈ ಸಾಧನೆ ಮಾಡಿದ್ದರು. ಇಂಗ್ಲೆಂಡ್‌ನವರೇ ಆದ ಅಲೆಕ್ಸ್ ಹೇಲ್ಸ್ ಹಾಗೂ ಇಯಾನ್ ಮಾರ್ಗನ್ (೧೫೨ ರನ್) ಪಟ್ಟಿಯಲ್ಲಿ ಐದನೇ ಸ್ಥಾನ ಪಡೆದುಕೊಂಡಿದ್ದಾರೆ. ಅವರು ೨೦೧೪ರಲ್ಲಿ ಈ ದಾಖಲೆ ಮಾಡಿದ್ದರು.
ಬಟ್ಲರ್ ಹಾಗೂ ಹೇಲ್ಸ್ ಅವರ ಈ ಜತೆಯಾಟ ಟಿ೨೦ ವಿಶ್ವ ಕಪ್‌ನಲ್ಲಿ ಯಾವುದೇ ವಿಕೆಟ್‌ಗೆ ಬ್ಯಾಟರ್‌ಗಳು ದಾಖಲಿಸಿದ ಗರಿಷ್ಠ ರನ್‌ಗಳ ದಾಖಲೆಯಾಗಿದೆ.
ಆರಂಭಿಕ ಗರಿಷ್ಠ ರನ್‌ಗಳ ದಾಖಲೆ ಇಂತಿದೆ
ರನ್ | ಬ್ಯಾಟರ್ | ವಿರುದ್ಧ | ವರ್ಷ |
170* | ಅಲೆಕ್ಸ್ ಹೇಲ್ಸ್& ಜೋಸ್ ಬಟ್ಲರ್ | ಭಾರತ | 2022 |
168* | ಕ್ವಿಂಟನ್ ಡಿ ಕಾಕ್ & ರೀಲಿ ರೊಸ್ಸೊ | ಬಾಂಗ್ಲಾದೇಶ | 2022 |
166 | ಮಹೇಲ ಜಯವರ್ಧನೆ & ಸಂಗಕ್ಕಾರ | ವೆಸ್ಟ್ ಇಂಡೀಸ್ | 2010 |
152* | ಮೊಹಮ್ಮದ್ ರಿಜ್ವಾನ್ & ಬಾಬರ್ ಅಜಮ್ | ಭಾರತ | 2021 |
152 | ಅಲೆಕ್ಸ್ ಹೇಲ್ಸ್ & ಇಯಾನ್ ಮಾರ್ಗನ್ | ಶ್ರೀಲಂಕಾ | 2014 |
ಇದನ್ನೂ ಓದಿ | IND vs ENG | ಸೋಲಿನ ಹತಾಶೆಯಲ್ಲಿ ಕಣ್ಣೀರು ಹಾಕಿದ ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮ