ಹೊಸದಿಲ್ಲಿ : ಇತ್ತೀಚಿನ ದಿನಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ಭಾರತದ ಷಟ್ಲರ್ ಎಸ್. ಎಸ್ ಪ್ರಣಯ್ ಮಂಗಳವಾರ ಬಿಡುಗಡೆಯಾಗಿರುವ ವಿಶ್ವ ಬ್ಯಾಡ್ಮಿಂಟನ್ ಒಕ್ಕೂಟದ (BWF Ranking) ಶ್ರೇಯಾಂಕ ಪಟ್ಟಿಯಲ್ಲಿ ೧೬ನೇ ಸ್ಥಾನ ಪಡೆದುಕೊಂಡಿದ್ದಾರೆ. ಪ್ರಣಯ್ ಅವರು ವಿಶ್ವ ಚಾಂಪಿಯನ್‌ಷಿಪ್ ಹಾಗೂ ಜಪಾನ್ ಓಪನ್ ಸೂಪರ್-೭೫೦ ಟೂರ್ನಿಯಲ್ಲಿ ಸತತವಾಗಿ ಕ್ವಾರ್ಟರ್ ಫೈನಲ್ಸ್ ಹಂತಕ್ಕೇರಿದ್ದರಿಂದ ೨ ಸ್ಥಾನ ಮೇಲಕ್ಕೇರಿದ್ದಾರೆ. ೩೩ ಟೂರ್ನಮೆಂಟ್‌ಗಳಲ್ಲಿ ೬೪೩೩೦ ಅಂಕಗಳನ್ನು ಗಳಿಸಿಕೊಂಡಿರುವ ಅವರು ೧೬ನೇ ಸ್ಥಾನಕ್ಕೆ ಏರಿದ್ದಾರೆ.
ಮತ್ತೊಬ್ಬ ಸಿಂಗಲ್ಸ್ ಆಟಗಾರ ಕಿಡಂಬಿ ಶ್ರೀಕಾಂತ್ ಅವರೂ ೨ ಸ್ಥಾನ ಜಿಗಿತ ಕಂಡಿದ್ದಾರೆ. ಅವರೀಗ ೧೨ನೇ ಸ್ಥಾನದಲ್ಲಿದ್ದಾರೆ. ಯುವ ಬ್ಯಾಡ್ಮಿಂಟನ್ ಆಟಗಾರ ಲಕ್ಷ್ಯ ಸೇನ್ ಕೂಡ ಉತ್ತಮ ಪ್ರದರ್ಶನ ನೀಡುತ್ತಿದ್ದು, ಅವರು ತಮ್ಮ ೯ನೇ ಸ್ಥಾನವನ್ನು ಕಾಪಾಡಿಕೊಂಡಿದ್ದಾರೆ.
ಭಾರತದ ಮಹಿಳಾ ಷಟ್ಲರ್ ಪಿ.ವಿ. ಸಿಂಧೂ ವಿಶ್ವ ಚಾಂಪಿಯನ್‌ಷಿಪ್ ಹಾಗೂ ಜಪಾನ್ ಓಪನ್ ಟೂರ್ನಮೆಂಟ್‌ನಲ್ಲಿ ಆಡದಿರುವ ಹೊರತಾಗಿಯೂ ಒಂದು ಸ್ಥಾನ ಸ್ಥಾನ ಮೇಲಕ್ಕೇರಿ ೭ನೇ ಶ್ರೇಯಾಂಕ ಪಡೆದುಕೊಂಡಿದ್ದಾರೆ. ಲಂಡನ್ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಸೈನಾ ನೆಹ್ವಾಲ್ ಅವರು ಮತ್ತೆ ೩೦ರೊಳಗಿನ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಭಾರತದ ಪುರುಷರ ಡಬಲ್ಸ್ ಜೋಡಿಯಾಗಿರುವ ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಹಾಗೂ ಚಿರಾಗ್ ಶೆಟ್ಟಿ, ಇತ್ತೀಚೆಗೆ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಹಾಗೂ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಐತಿಹಾಸಿಕ ಕಂಚಿನ ಪದಕ ಗೆದ್ದುಕೊಂಡಿದ್ದರು. ಈ ಎರಡು ಉತ್ತಮ ಪ್ರದರ್ಶನದೊಂದಿಗೆ ಅವರು ಎಂಟನೆ Rank ಕಾಪಾಡಿಕೊಂಡಿದ್ದಾರೆ.
ಇದೇ ವೇಳೆ ಮಿಕ್ಸೆಡ್ ಡಬಲ್ಸ್ ತಂಡದ ತನಿಷಾ ಕ್ರಾಸ್ಟೊ ಹಾಗೂ ಇಶಾನ್ ಭಟ್ನಾಗರ್ ಅವರು ವೃತ್ತಿ ಕ್ರೀಡೆಯ ಗರಿಷ್ಠ ಸಾಧನೆ ಮಾಡಿದ್ದು, ೩೩ನೇ rank ಪಡೆದುಕೊಂಡಿದ್ದಾರೆ.
ಇದನ್ನೂ ಓದಿ | World Championships | ಇತಿಹಾಸ ಸೃಷ್ಟಿಸಿದ ಭಾರತ ಪುರುಷರ ಡಬಲ್ಸ್ ಬ್ಯಾಡ್ಮಿಂಟನ್ ಜೋಡಿ