ನವದೆಹಲಿ: ಡೆನ್ಮಾರ್ಕ್ನ ಕೋಪನ್ಹೆಗನ್ನಲ್ಲಿ ಸೋಮವಾರದಿಂದ ಆರಂಭಗೊಳ್ಳಲಿರುವ ಬಿಡಬ್ಲ್ಯುಎಫ್ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ(BWF World Championships) ಭಾರತೀಯ ಬ್ಯಾಡ್ಮಿಂಟನ್ ಆಟಗಾರರು ಪದಕ ಭರವಸೆಯೊಂದಿಗೆ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಲಕ್ಷ್ಯ ಸೇನ್(lakshya sen), ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ(satwiksairaj rankireddy) ಮತ್ತು ಚಿರಾಗ್ ಶೆಟ್ಟಿ(chirag shetty) ಜೋಡಿಯ ಭಾರತ ಪದಕ ನಿರೀಕ್ಷೆ ಮಾಡಿದೆ.
ಮಾಜಿ ವಿಶ್ವ ಚಾಂಪಿಯನ್ ಮತ್ತು ಎರಡು ಒಲಿಂಪಿಕ್ ಪದಕ ವಿಜೇತೆ ಪಿ.ವಿ. ಸಿಂಧು(PV Sindhu) ಅವರು ಕಳೆದೊಂದು ವರ್ಷದಿಂದ ಕಳಪೆ ಪ್ರದರ್ಶನ ತೋರುತ್ತಾ ಬಂದಿದ್ದಾರೆ. ಹೀಗಾಗಿ ಅವರ ಮೇಲೆ ನಿರೀಕ್ಷೆ ಮಾಡುವುದು ಕಷ್ಟ. ಆದರೆ ಅವರು ಇಲ್ಲಿ ಶ್ರೇಷ್ಠ ಪ್ರದರ್ಶನ ತೋರಲೇ ಬೇಕಿದೆ. ಏಕೆಂದರೆ ಮುಂದಿನ ವರ್ಷ ಪ್ಯಾರಿಸ್ನಲ್ಲಿ ನಡೆಯುವ ಒಲಿಂಪಿಕ್ಸ್ ಟೂರ್ನಿಗೂ ಮುನ್ನ ಫಾರ್ಮ್ ಕಂಡುಕೊಳ್ಳಬೇಕಾದ ನಿಟ್ಟಿನಲ್ಲಿ ಉತ್ತಮ ಆಟ ಹೊರಹೊಮ್ಮಿಸಲೇ ಬೇಕಾದ ಸವಾಲು ಕೂಡ ಅವರ ಮುಂದಿದೆ. ಇನ್ನು ಸಿಂಧು ಈ ಟೂರ್ನಿಯಲ್ಲಿ ಭಾರತದ ಪರವಾಗಿ ಏಕೈಕ ಚಿನ್ನ (2019) ಗೆದ್ದ ಆಟಗಾರ್ತಿಯಾಗಿದ್ದಾರೆ. ಎರಡು ಬೆಳ್ಳಿ, ಎರಡು ಕಂಚು ಸೇರಿದಂತೆ ಒಟ್ಟು ಐದು ಪದಕಗಳನ್ನು ಅವರು ಈ ಟೂರ್ನಿಯಲ್ಲಿ ಬೇಟೆಯಾಡಿದ್ದಾರೆ. ಇದೀಗ ಅವರ ಪ್ರಾಭಲ್ಯ ಮತ್ತೆ ಮುಂದುವರಿಯಲಿದೆಯಾ ಎಂದು ಕಾದು ನೋಡಬೇಕಿದೆ.
ಬೈ ಪಡೆದ ಸಿಂಧು
ಸಿಂಧು ಅವರಿಗೆ ಮೊದಲ ಸುತ್ತಿನಲ್ಲಿ ‘ಬೈ’ ನೀಡಲಾಗಿದೆ. ಆದರೆ ದ್ವಿತೀಯ ಸುತ್ತಿನಲ್ಲಿ ಬಲಿಷ್ಠ ಆಟಗಾರ್ತಿಯ ಸವಾಲು ಎದುರಾಗಲಿದೆ. ಜಪಾನ್‌ನ ನೊಜೊಮಿ ಒಕುಹರಾ ಮತ್ತು ವಿಯೆಟ್ನಾಂನ ಥುಯ್ ಲಿನ್ ನ್ಗುಯೆನ್ ನಡುವಿನ ಪಂದ್ಯದ ವಿಜೇತರನ್ನು ಸಿಂಧು ಮುಂದಿನ ಸುತ್ತಿನಲ್ಲಿ ಎದುರಿಸಲಿದ್ದಾರೆ.
ಭಾರತದ ಖಾತೆಯಲ್ಲಿದೆ 13 ಪದಕ
1977ರಿಂದ ಭಾರತವು ಈತನಕ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ 1 ಚಿನ್ನ, ನಾಲ್ಕು ಬೆಳ್ಳಿ ಮತ್ತು 8 ಕಂಚು ಸೇರಿದಂತೆ 13 ಒಟ್ಟು ಪದಕಗಳನ್ನು ಗೆದ್ದಿದೆ. ಪ್ರಕಾಶ್ ಪಡುಕೋಣೆ (1983) ಅವರು ಚೊಚ್ಚಲ ಪದಕ ಗೆದ್ದ ಕ್ರೀಡಾಪಟುವಾಗಿದ್ದಾರೆ. ಅವರು ಕಂಚಿನ ಪದಕ ಗೆಲ್ಲುವ ಮೂಲಕ ಈ ಟೂರ್ನಿಯಲ್ಲಿ ಭಾರತದ ಪದಕ ಖಾತೆಯನ್ನು ಆರಂಭಿಸಿದ್ದರು. 2021ರ ಆವೃತ್ತಿಯಲ್ಲಿ ಕಿದಂಬಿ ಶ್ರೀಕಾಂತ್ ಮತ್ತು ಲಕ್ಷ್ಯ ಸೇನ್ ಅವರು ಕ್ರಮವಾಗಿ ಬೆಳ್ಳಿ ಮತ್ತು ಕಂಚು ಗೆದ್ದು ಮಿಂಚಿದ್ದರು. ಈ ಬಾರಿಯೂ ಉಭಯ ಆಟಗಾರರ ಮೇಲೆ ಪದಕ ನಿರೀಕ್ಷೆ ಮಾಡಲಾಗಿದೆ.
ಪ್ರಣಯ್ ಮೇಲು ನಿರೀಕ್ಷೆ
ಪುರುಷರ ಸಿಂಗಲ್ಸ್ನಲ್ಲಿ ಎಚ್.ಎಸ್ ಪ್ರಣಯ್(Prannoy H. S.) ಮೇಲು ನಿರೀಕ್ಷೆಯೊಂದನ್ನು ಮಾಡಲಾಗಿದೆ. ಕಳೆದ ಎರಡು ಆವೃತ್ತಿಗಳಲ್ಲಿ ಕ್ವಾರ್ಟರ್ ಫೈನಲ್ ಹಂತ ಪ್ರವೇಶಿಸಿದ್ದ ಅವರು ಪ್ರಸ್ತುತ ಉತ್ತಮ ಲಯದಲ್ಲಿದ್ದಾರೆ. ಇದೇ ವರ್ಷ ನಡೆದ ಮಲೇಷ್ಯಾ ಮಾಸ್ಟರ್‌ನಲ್ಲಿ ಚಾಂಪಿಯನ್ ಹಾಗೂ ಆಸ್ಟ್ರೇಲಿಯಾ ಓಪನ್‌ನಲ್ಲಿ ರನ್ನರ್ ಅಪ್ ಆಗಿರುವ ಅವರು ಉತ್ತಮ ಪ್ರದರ್ಶನ ತೋರುವ ವಿಶ್ವಾಸದಲ್ಲಿದ್ದಾರೆ. ವಿಶ್ವದ 9ನೇ ಶ್ರೇಯಾಂಕದಲ್ಲಿರುವ ಪ್ರಣಯ್ ಮೊದಲ ಸುತ್ತಿನಲ್ಲಿ 56ನೇ ಶ್ರೇಯಾಂಕದ ಫಿನ್ಲೆಂಡ್‌ನ ಕ್ಯಾಲೆ ಕೊಲ್ಜೊನೆನ್ ಸವಾಲು ಎದುರಿಸಲಿದ್ದಾರೆ. ಶ್ರೇಯಾಂಕದಲ್ಲಿ ಮೇಲಿದ್ದರೂ ಎಚ್ಚರಿಕೆಯ ಆಟ ಮಾತ್ರ ಅಗತ್ಯ.
ಡಬಲ್ಸ್ನಲ್ಲಿ ಭರವಸೆಯ ಯುವ ಜೋಡಿಗಳಾದ ಸಾತ್ವಿಕ್ ಮತ್ತು ಚಿರಾಗ್ಗೆ ಆರಂಭಿಕ ಸುತ್ತಿನಲ್ಲಿ ‘ಬೈ’ ದೊರಕಿದೆ. ಇವರ ಜತೆಗೆ ಆಲ್ ಇಂಗ್ಲೆಂಡ್ ಚಾಂಪಿಯನ್‌ಶಿಪ್‌ನಲ್ಲಿ ಎರಡು ಬಾರಿ ಸೆಮಿಫೈನಲ್ ಪ್ರವೇಶಿಸಿರುವ ಟ್ರೀಸಾ ಜೋಳಿ ಮತ್ತು ಗಾಯತ್ರಿ ಗೋಪಿಚಂದ್ ಜೋಡಿಗೂ ಆರಂಭಿಕ ಸುತ್ತಿನಲ್ಲಿ ಬೈ ಸಿಕ್ಕಿದೆ.
ಇದನ್ನೂ ಓದಿ Australian Open 2023: ಆಸ್ಟ್ರೇಲಿಯನ್ ಓಪನ್ ಬ್ಯಾಡ್ಮಿಂಟನ್‌ನಲ್ಲಿ ಅಚ್ಚರಿಯ ಗೆಲುವು ಸಾಧಿಸಿದ ಕನ್ನಡಿಗ ಮಂಜುನಾಥ್
ಲಕ್ಷ್ಯ ಸೇನ್ ಅವರು ಮೊದಲ ಸುತ್ತಿನಲ್ಲಿ ಜಾರ್ಜಸ್ ಜೂಲಿಯನ್ ಪೌಲ್ ಅವರನ್ನು ಎದುರಿಸಲಿದ್ದಾರೆ. ಮತ್ತೋರ್ವ ಭಾರತೀಯ ಕೆ. ಶ್ರೀಕಾಂತ್ ಮೊದಲ ಸುತ್ತಿನಲ್ಲಿ 15ನೇ ಶ್ರೇಯಾಂಕದ ಜಪಾನ್‌ನ ಬಲಿಷ್ಠ ಆಟಗಾರ ಕೆಂಟಾ ನಿಶಿಮೊಟೊ ಅವರನ್ನು ಎದುರಿಸಲಿದ್ದಾರೆ. ಬಲಾಬಲದ ಲೆಕ್ಕಾಚಾರದಲ್ಲಿ ಶ್ರೀಕಾಂತ್ ಮೇಲುಗೈ ಸಾಧಿಸಿದ್ದಾರೆ. ಇದುವರೆಗೆ ಆಡಿದ ಪಂದ್ಯಗಳಲ್ಲಿ 6-3ರ ಗೆಲುವಿನ ಅಂತರದ ದಾಖಲೆ ಹೊಂದಿದ್ದಾರೆ. ಹೀಗಾಗಿ ಈ ಪಂದ್ಯದಲ್ಲಿಯೂ ನೆಚ್ಚಿನ ಆಟಗಾರನಾಗಿ ಕಾಣಿಸಿಕೊಂಡಿದ್ದಾರೆ.