Site icon Vistara News

ಗುಡುಗು ಮಿಂಚು ಸಹಿತ ಮಳೆಯನ್ನು ಲೆಕ್ಕಿಸದೆ 5 ಸಾವಿರ ಮೀ. ಓಟ ಪೂರ್ತಿಗೊಳಿಸಿದ ಕಾಂಬೋಡಿಯನ್ ಓಟಗಾರ್ತಿ; ವಿಡಿಯೊ ವೈರಲ್​

Bou Samnang

ನವದೆಹಲಿ: ಜೀವನದಲ್ಲಿ ಸಾಧಿಸುವ ಛಲ ಮತ್ತು ಆತ್ಮವಿಶ್ವಾಸವಿದ್ದರೆ ಸಾಧನೆ ಹಾದಿ ಸುಲಭ ಎಂಬುದಕ್ಕೆ ಕಾಂಬೋಡಿಯನ್ ಓಟಗಾರ್ತಿ(Cambodian runner) ಬೌ ಸಮ್ನಾಂಗ್(Bou Samnang) ಅವರ ಸಾಧನೆಯೇ ಉತ್ತಮ ಸಾಕ್ಷಿ. ಗುಡುಗು-ಮಿಂಚಿನ ಜತೆಗೆ ಸುರಿಯುವ ಮಳೆಯನ್ನು ಲೆಕ್ಕಿಸದೆ 5,000 ಮೀಟರ್ ಓಟವನ್ನು ಪೂರ್ಣಗೊಳಿಸಿ ಎಲ್ಲರಿಗೂ ಮಾದರಿಯಾಗಿದ್ದಾರೆ. ಸುರಿಯುವ ಮಳೆಯಲ್ಲೂ ಛಲ ಬಿಡದೆ ಓಟವನ್ನು ಪೂರ್ಣಗೊಳಿಸಿದ ಅವರ ವಿಡಿಯೊ ವೈರಲ್ ಆಗಿದೆ.

ಕಾಂಬೋಡಿಯಾದ ಬೌ ಸಮ್ನಾಂಗ್ ಅವರು ಒಂದೆಡೆ ಜೋರಾಗಿ ಬೀಸುತ್ತಿದ್ದ ಮಳೆಯನ್ನು ಲೆಕ್ಕಿಸದೆ 5 ಸಾವಿರ ಮೀ.ಓಟವನ್ನು ಓಡಿ ಗುರಿ ತಲುಪಿದ್ದಾರೆ. ಈ ವಿಡಿಯೊವನ್ನು ಹಂಚಿಕೊಂಡಿರುವ ಒಲಿಂಪಿಕ್ಸ್ ಕ್ರೀಡಾಕೂಟ ‘ನೆವರ್​ ಗಿವ್​ ಆಫ್​’ ಸಾಧಿಸುವ ಮನಸ್ಸಿದ್ದರೆ ಎಲ್ಲವೂ ಸಾಧ್ಯ ಎಂಬುದಕ್ಕೆ ಸಮ್ನಾಂಗ್ ಅವರ ಈ ಪ್ರದರ್ಶನವೇ ಉತ್ತಮ ನಿದರ್ಶನ ಎಂದು ಬರೆದುಕೊಂಡಿದೆ. ಸದ್ಯ ಈ ವಿಡಿಯೊವನ್ನು ಸುಮಾರು 7 ಲಕ್ಷಕ್ಕೂ ಅಧಿಕ ಜನರು ವೀಕ್ಷಿಸಿದ್ದಾರೆ.

ಇದನ್ನೂ ಓದಿ IPL 2023: ಪ್ಲೇ ಆಫ್​ ರೇಸ್​ನಲ್ಲಿ ಉಳಿದುಕೊಂಡ ತಂಡಗಳೆಷ್ಟು; ಆರ್​ಸಿಬಿ ಸ್ಥಿತಿ ಹೇಗಿದೆ; ಸಂಪೂರ್ಣ ಮಾಹಿತಿ ಇಲ್ಲಿದೆ

ತಮ್ಮ ಈ ಸಾಧನೆ ಬಳಿಕ ಮಾತನಾಡಿದ ಸಮ್ನಾಂಗ್, “ಹವಾಮಾನ ಮುನ್ಸೂಚನೆಯಲ್ಲಿ ಮಳೆಯ ಬಗ್ಗೆ ಮಾಹಿತಿ ತಿಳಿತ್ತು. ಆದರೆ ಈ ಪ್ರಮಾಣದ ಮಳೆಯಾಗುತ್ತದೆ ಎಂದು ನಿರೀಕ್ಷಿಸಿರಲಿಲ್ಲ. ಗುಡುಗು-ಮಿಂಚಿನ ಜತೆಗೆ ತುಂಬಾ ಮಳೆ ಹಾಗೂ ಗಾಳಿ ಬೀಸಿತು” ನಾನ್ನ ತಲೆಯಲ್ಲಿ ಒಂದೇ ವಿಚಾರ ಓಡುತ್ತಿತ್ತು. ಸ್ಪರ್ಧೆಗೆ ಇಳಿದಾಗಿದೆ ಇನ್ನೇನಿದ್ದರೂ ಗುರಿ ಮುಟ್ಟಲೇ ಬೇಕು ಎನ್ನುವುದು. ಇದರಿಂದ ಈ ಪ್ರದರ್ಶನ ಸಾಧ್ಯವಾಯಿತು ಎಂದು ಅವರು ಹೇಳಿದರು.

“ನನಗೆ ಓಟವನ್ನು ಅರ್ಧಕ್ಕೆ ನಿಲ್ಲಿಸುವ ಆಯ್ಕೆ ಇತ್ತು. ಆದರೆ ನಾನು ಹಾಗೆ ಮಾಡಲಿಲ್ಲ” ಒಂದೊಮ್ಮೆ ನಾನು ಈ ಓಟವನ್ನು ಅರ್ಧಕ್ಕೆ ನಿಲ್ಲಿಸುತ್ತಿದ್ದರೆ ನನಗೆ ಬೆಂಬಲ ಸೂಚಿಸುತ್ತಿದ್ದ ನನ್ನ ದೇಶವಾಸಿಗಳಿಗೆ ಬೇಸರವಾಗುತ್ತಿತ್ತು” ಎಂದು ಸಮ್ನಾಂಗ್ ಹೇಳಿದರು.

Exit mobile version