Site icon Vistara News

ಜೂನಿಯರ್​ ಮಹಿಳಾ ಹಾಕಿ ವಿಶ್ವ ಕಪ್​ನಲ್ಲಿ ಭಾರತಕ್ಕೆ ಕೆನಡಾ ಮೊದಲ ಎದುರಾಳಿ

India Women Jr

ನವದೆಹಲಿ: ವರ್ಷಾಂತ್ಯ ನಡೆಯಲಿರುವ ಜೂನಿಯರ್‌ ಮಹಿಳಾ ವಿಶ್ವಕಪ್‌ ಹಾಕಿ(Junior Women’s Hockey World Cup) ಪಂದ್ಯಾವಳಿಯ ವೇಳಾಪಟ್ಟಿ ಪ್ರಕಟಗೊಂಡಿದೆ. ಭಾರತ ತನ್ನ ಮೊದಲ ಪಂದ್ಯವನ್ನು ಕೆನಡಾ ವಿರುದ್ಧ ಆಡಲಿದೆ. ಭಾರತ “ಸಿ’ ವಿಭಾಗದಲ್ಲಿ ಸ್ಥಾನ ಪಡೆದಿದೆ. ಬೆಲ್ಜಿಯಂ(Belgium) ಮತ್ತು ಜರ್ಮನಿ(Germany) ಈ ಗ್ರೂಪ್​ನಲ್ಲಿರುವ ಇನ್ನೆರಡು ತಂಡಗಳಾಗಿವೆ.

ಭಾರತ(India) ಮತ್ತು ಕೆನಡಾ(Canada) ವಿರುದ್ಧದ ಪಂದ್ಯ ನವೆಂಬರ್​ 29ರಂದು ನಡೆಯಲಿದೆ. ಈ ಟೂರ್ನಿ ಚಿಲಿಯ ರಾಜಧಾನಿ ಸ್ಯಾಂಟಿಯಾಗೋದಲ್ಲಿ ನಡೆಯಲಿದೆ. ಭಾರತ ಈವರೆಗೆ ಯಾವುದೇ ವಿಶ್ವಕಪ್‌ ಪದಕ ಗೆದ್ದಿಲ್ಲ. ಕಳೆದ ಆವೃತ್ತಿಯಲ್ಲಿ ಕಂಚಿನ ಪದಕ ಗೆಲ್ಲುವ ಸಾಧ್ಯತೆ ಇತ್ತಾದರೂ ಇಂಗ್ಲೆಂಡ್‌ ವಿರುದ್ಧ ಶೂಟೌಟ್‌ನಲ್ಲಿ ಎಡವಿತು. 2-2 ಡ್ರಾ ಸಾಧಿಸುವಲ್ಲಿ ಯಶಸ್ವಿಯಾಗಿದ್ದ ಭಾರತ, ಶೂಟೌಟ್‌ನಲ್ಲಿ 0-3ರಿಂದ ಪರಾಭವಗೊಂಡಿತ್ತು. ಆದರೆ ಈ ಬಾರಿ ಭಾರತದ ಮೇಲೆ ಪದಕ ಬರವಸೆಯೊಂದನ್ನು ಇಡಲಾಗಿದೆ. ಇತ್ತೀಚೆಗೆ ಜಪಾನ್‌ನಲ್ಲಿ ನಡೆದ ಜೂನಿಯರ್‌ ಏಷ್ಯಾ ಕಪ್‌ ಗೆದ್ದು ವಿಶ್ವಕಪ್‌ಗೆ ಅರ್ಹತೆ ಸಂಪಾದಿಸಿದ ಭಾರತ ತಂಡ ಬಲಿಷ್ಠವಾಗಿ ಗೋಚರಿಸಿದೆ. ಜತೆಗೆ ಆತ್ಮವಿಶ್ವಾಸವನ್ನೂ ಹೆಚ್ಚಿಸಿಕೊಂಡಿದೆ. ಹೀಗಾಗಿ ಭಾರತ ಕೂಡ ಟೂರ್ನಿಯ ಫೇವರಿಟ್​ ತಂಡಗಳಲ್ಲಿ ಒಂದಾಗಿದೆ.

ಟೂರ್ನಿ ಆರಂಭಕ್ಕೂ ಮುನ್ನವೇ ತಂಡದ ಸಾಮರ್ಥ್ಯದ ಬಗ್ಗೆ ತಿಳಿಸಿದ ತಂಡದ ನಾಯಕಿ ಪ್ರೀತಿ, “ತಂಡ ಎಲ್ಲ ವಿಭಾಗದಲ್ಲಿಯೂ ಅತ್ಯಂತ ಬಲಿಷ್ಠವಾಗಿದೆ. ನಮ್ಮ ಸಾಮರ್ಥ್ಯದ ಬಗ್ಗೆ ನಮಗೆ ನಂಬಿಕೆ ಇದೆ. ಪ್ರತೀ ಪಂದ್ಯದಲ್ಲೂ ಇದನ್ನು ಪ್ರದರ್ಶಿಸುವುದೇ ನಮ್ಮ ಯೋಜನೆ’ ಎಂಬುದಾಗಿ ಹೇಳಿದ್ದಾರೆ.

ಇದನ್ನೂ ಓದಿ Hockey Asia Cup: ಕೊರಿಯಾವನ್ನು ಮಣಿಸಿ ಚಾಂಪಿಯನ್​ ಪಟ್ಟ ಅಲಂಕರಿಸಿದ ಭಾರತದ ಕಿರಿಯ ಮಹಿಳಾ ತಂಡ

ತಂಡದ ಕೋಚ್​ ಮುಖ್ಯ ಜಾನೆಕ್‌ ಸ್ಕೋಪ್‌ಮನ್‌ ಕೂಡ ತಂಡದ ಬಗ್ಗೆ ಆತ್ಮವಿಶ್ವಾಸದ ಮಾತುಗಳನ್ನಾಡಿದ್ದಾರೆ. “ಏಷ್ಯಾ ಕಪ್‌ ಗೆದ್ದ ಬಳಿಕ ತಂಡದ ಆತ್ಮವಿಶ್ವಾಸ ಹೆಚ್ಚಿದೆ. ಆದರೆ ವಿಶ್ವ ಮಟ್ಟದ ಪಂದ್ಯಾವಳಿಗಳಲ್ಲಿ ಹೆಚ್ಚು ಸವಾಲು ಎದುರಾಗುತ್ತದೆ. ಇಲ್ಲಿ ಜಗತ್ತಿನ ಬಲಿಷ್ಠ ತಂಡಗಳೆಲ್ಲ ಹೋರಾಟ ನಡೆಸುತ್ತವೆ. ಪ್ರತಿಯೊಂದು ಪಂದ್ಯವೂ ಕಠಿಣವಾಗಿರುತ್ತದೆ. ಆದರೆ ನಮ್ಮ ತಂಡ ಈ ಎಲ್ಲ ಸವಾಲನ್ನು ಎದುರಿಸಲು ಬೇಕಾದ ಸಿದ್ಧತೆ ನಡೆಸಲಿದೆ” ಎಂದು ಹೇಳಿದರು.

Exit mobile version