ಬರ್ಮಿಂಗ್ಹಮ್ : ಹಾಕಿ ತಂಡಗಳ ಆಟಗಾರರಿಬ್ಬರು ಮೈದಾನದಲ್ಲೇ ಪರಸ್ಪರ ಕುತ್ತು ಹಿಡಿದು ಗದ್ದಾಡಿಕೊಂಡ ಪ್ರಸಂಗ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ (CWG- 2022) ಗುರುವಾರ ನಡೆದಿದೆ. ಕೆನಡಾ ಹಾಗೂ ಇಂಗ್ಲೆಂಡ್ ತಂಡದ ಅಟಗಾರರ ನಡುವೆ ಈ ಫೈಟ್ ನಡೆದಿದ್ದು, ಕೆನಡಾ ಆಟಗಾರನಿಗೆ ರೆಡ್ ಕಾರ್ಡ್ ಸಿಕ್ಕಿದರೆ, ಇಂಗ್ಲೆಂಡ್ ಆಟಗಾರನಿಗೆ ಯೆಲ್ಲೋ ಕಾರ್ಡ್ ನೀಡಲಾಗಿದೆ.
ಗುಂಪು ಹಂತದ ಪಂದ್ಯದ ಪಂದ್ಯದ ವೇಳೆ ಘಟನೆ ನಡೆದಿದ್ದು, ಘಟನೆಯಿಂದಾಗಿ ಇತ್ತಂಡಗಳ ಆಟಗಾರರೂ ಹೊಡೆದಾಟಕ್ಕೆ ಮುಂದಾದರು. ಪಂದ್ಯದ ಎರಡನೇ ಕ್ವಾರ್ಟರ್‌ನಲ್ಲಿ ಇಂಗ್ಲೆಂಡ್ ತಂಡದ ಗ್ರಿಫಿತ್ ಅವರು ಕೆನಡಾದ ಗೋಲ್‌ಪೋಸ್ಟ್ ಕಡೆಗೆ ಚೆಂಡು ತೆಗೆದುಕೊಂಡು ಹೋಗುತ್ತಿದ್ದ ವೇಳೆ ಕೆನಡಾದ ಬಾಲ್‌ರಾಜ್ ಪನೇಸರ್ ತಪ್ಪಿಸಲು ನಾನಾ ಬಗೆಯಲ್ಲಿ ಪ್ರಯತ್ನಿಸಿದ್ದರು. ಈ ವೇಳೆ ಅವರಿಬ್ಬರು ಚೆಂಡಿನ ಮೇಲೆ ಹಿಡಿತ ತೆಗೆದುಕೊಳ್ಳುವುದಕ್ಕಾಗಿ ಹೋರಾಟ ನಡೆಸಿದಾಗ ಬಾಲ್‌ರಾಜ್ ತಮ್ಮ ಸ್ಟಿಕ್ ಅನ್ನು ಗ್ರಿಫಿತ್ ಹೊಟ್ಟೆಯ ಸಮೀಪಕ್ಕೆ ತಂದಿದ್ದಾರೆ. ತಕ್ಷಣ ಗ್ರಿಫಿತ್ ಸ್ಟಿಕ್ ಹಿಡಿದು ಎಳೆದಾಡಿದ್ದಾರೆ.
ತಮ್ಮ ಸ್ಟಿಕ್ ಹಿಡಿದು ಎಳೆದಾಡಿದ್ದನ್ನು ಸಹಿಸದ ಬಾಲ್‌ರಾಜ್ ಎದುರಾಳಿಯ ಟಿ ಶರ್ಟ್ ಹಿಡಿಯಲು ಯತ್ನಿಸಿದ್ದಾರೆ. ಈ ವೇಳೆ ಗ್ರಿಫಿತ್ ಕೆನಡಾದ ಬಾಲ್‌ರಾಜ್ ಜರ್ಸಿಯ ಕಾಲರ್ ಹಿಡಿದು ಎಳೆದಿದ್ದಾರೆ. ಕೋಪಗೊಂಡ ಕೆನಡಾ ಆಟಗಾರ ಗ್ರಿಫಿತ್ ಕತ್ತು ಹಿಸುಕಲು ಯತ್ನಿಸಿದ್ದಾರೆ. ಈ ವೇಳೆ ಇತ್ತಂಡಗಳ ಆಟಗಾರರು ಪರಸ್ಪರ ಕೈ ಮಿಲಾಯಿಸಲು ಮುಂದಾದರು. ರೆಫರಿಗಳು ಹಾಗೂ ಪಂದ್ಯದ ಅಧಿಕಾರಿಗಳ ಮಧ್ಯ ಪ್ರವೇಶದ ಬಳಿಕ ಗುದ್ದಾಟ ಕಡಿಮೆಯಾಗಿದೆ.
ಟಿವಿ ಅಂಪೈರ್‌ಗಳ ನೆರವಿನಿಂದ ಘಟನೆಯ ವಿವರಣೆ ಪಡೆದುಕೊಂಡ ರೆಫರಿ ಬಾಲರಾಜ್‌ಗೆ ರೆಡ್ ಕಾರ್ಡ್ ನೀಡಿದ್ದಾರೆ. ಗ್ರಿಫಿತ್‌ಗೆ ಹಳದಿ ಕಾರ್ಡ್ ತೋರಿಸಿದರು. ಹೀಗಾಗಿ ಕೆನಡಾ ತಂಡ ಒಬ್ಬ ಆಟಗಾರನ ಕೊರತೆಯೊಂದಿಗೆ ಆಟ ಮುಂದುವರಿಸಬೇಕಾಯಿತು. ಘಟನೆ ನಡೆಯುವ ಮೊದಲು ೧-೪ರ ಮುನ್ನಡೆಯಲ್ಲಿದ್ದ ಇಂಗ್ಲೆಂಡ್ ತಂಡ, ಎದುರಾಳಿ ತಂಡದಲ್ಲಿ ಆಟಗಾರನ ಕೊರತೆ ಇರುವುದನ್ನು ಸದ್ಬಳಕೆ ಮಾಡಿಕೊಂಡು, ೧೧ ಗೋಲ್‌ಗಳನ್ನು ಬಾರಿಸಿತು. ಕೆನಡಾ ತಂಡಕ್ಕೆ ೨ ಗೋಲ್‌ಗಳನ್ನು ಮಾತ್ರ ಬಾರಿಸಲು ಸಾಧ್ಯವಾಯಿತು.
ಈ ಗೆಲುವಿನೊಂದಿಗೆ ಇಂಗ್ಲೆಂಡ್ ತಂಡ ಸೆಮಿಫೈನಲ್‌ಗೆ ಏರಿತು. ಉಪಾಂತ್ಯದಲ್ಲಿ ಇಂಗ್ಲೆಂಡ್‌ಗೆ ಬಲಿಷ್ಠ ಆಸ್ಟ್ರೇಲಿಯಾ ಎದುರಾಳಿ. ಅದಕ್ಕಿಂತ ಮೊದಲು ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವೆ ಮೊದಲ ಸೆಮಿಫೈನಲ್ ಪಂದ್ಯ ನಡೆಯಲಿದೆ.
ಇದನ್ನೂ ಓದಿ | CWG- 2022 | ಪುರುಷರ ರಿಲೇ ತಂಡ ಫೈನಲ್‌ಗೆ ಪ್ರವೇಶ