Site icon Vistara News

World Cup 2023 : ವಿಶ್ವ ಕಪ್​ ಆಡಲು ಬರುವುದಿಲ್ಲ, ಪಾಕ್​ ಸಚಿವನ ಹೊಸ ಬಾಂಬ್​!

Pakistan Cricket team

ಮುಂಬಯಿ: ಭಾರತದಲ್ಲಿ ಆಯೋಜನೆಗೊಂಡಿರುವ ಏಕ ದಿನ ವಿಶ್ವ ಕಪ್​ನಲ್ಲಿ (World Cup 2023) ಪಾಕಿಸ್ತಾನ ತಂಡದ ಪಾಲ್ಗೊಳ್ಳುವಿಕೆ ಇನ್ನೂ ಅತಂತ್ರ ಸ್ಥಿತಿಯಲ್ಲಿದೆ. ಐಸಿಸಿ ಕಳುಹಿಸಿರುವ ಕರಡು ವೇಳಾಪಟ್ಟಿಗೆ ಪಾಕಿಸ್ತಾನ ಕ್ರಿಕೆಟ್​ ಮಂಡಳಿ ಅಂಕಿತ ನೀಡಿರುವ ಹೊರತಾಗಿಯು ಅಲ್ಲಿನ ಸರಕಾರ ಇನ್ನೂ ಒಪ್ಪಿಗೆ ಕೊಟ್ಟಿಲ್ಲ. ಸರಕಾರ ಹೇಳಿದ ಬಳಿಕವಷ್ಟೇ ತಂಡ ಬರಲಿದೆ. ಇದೀಗ ಅಲ್ಲಿನ ಕ್ರೀಡಾ ಉಸ್ತುವಾರಿ ಸಚಿವ ಎಹ್ಸಾನ್ ಮಜಾರಿ ಹೊಸ ಷರತ್ತನ್ನು ವಿಧಿಸಿದ್ದು, ಬೇಡಿಕೆಗಳನ್ನು ಈಡೇರಿಸದೇ ಹೋದರೆ ತಂಡವನ್ನು ಕಳುಹಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಈ ಮೂಲಕ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಪಂದ್ ಸೇರಿದಂತೆ ಇಡೀ ಟೂರ್ನಿ ಅತಂತ್ರ ಸ್ಥಿತಿಯಲ್ಲಿದೆ.

ಏಷ್ಯಾಕಪ್​​ ಆಡಲು ಬಿಸಿಸಿಐ ತನ್ನ ಆಟಗಾರರನ್ನು ಪಾಕಿಸ್ತಾನಕ್ಕೆ ಕಳುಹಿಸದಿದ್ದರೆ ಪಾಕಿಸ್ತಾನವು ಇದೇ ರೀತಿಯ ಬೇಡಿಕೆಗಳನ್ನು ಇಡುತ್ತದೆ ಎಂದು ಮಜಾರಿ ಹೇಳಿದ್ದಾರೆ. ಆರಂಭದಲ್ಲಿ ಸಂಪೂರ್ಣವಾಗಿ ಪಾಕಿಸ್ತಾನದಲ್ಲಿ ನಡೆಯಬೇಕಿದ್ದ ಏಷ್ಯಾಕಪ್ ಆತಿಥ್ಯ ಕೊನೆಗೂ ಹೈಬ್ರಿಡ್​ ರೂಪದಲ್ಲಿ ನಡೆದಿದೆ. ನೆರೆಯ ದೇಶದ ಗಡಿಯಾಚೆಗೆ ಪ್ರಯಾಣಿಸಲು ಭಾರತ ಸರಕಾರ ಒಪ್ಪದ ಕಾರಣ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಹೈಬ್ರಿಡ್ ಮಾದರಿಯನ್ನು ಪ್ರಸ್ತಾಪಿಸಿತು. ಅಂತಿಮವಾಗಿ ಅದಕ್ಕೆ ಒಪ್ಪಿಗೆ ದೊರಕಿತ್ತು.

ನನ್ನ ವೈಯಕ್ತಿಕ ಅಭಿಪ್ರಾಯವೆಂದರೆ, ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ನನ್ನ ಸಚಿವಾಲಯದ ಅಡಿಯಲ್ಲಿ ಬರುತ್ತದೆ. ಭಾರತವು ತನ್ನ ಏಷ್ಯಾ ಕಪ್ ಪಂದ್ಯಗಳನ್ನು ತಟಸ್ಥ ಸ್ಥಳದಲ್ಲಿ ಆಡಲು ಒತ್ತಾಯಿಸಿದರೆ, ನಾವು ಭಾರತದಲ್ಲಿ ನಮ್ಮ ವಿಶ್ವಕಪ್ ಪಂದ್ಯಗಳಿಗೆ ಅದೇ ಬೇಡಿಕೆ ಇಡುತ್ತೇವೆ ಎಂದು ಮಜಾರಿ ಹೇಳಿದ್ದಾರೆ.

ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಶರೀಫ್ ಅವರು ಶೃಂಗಸಭೆಯಲ್ಲಿ ಭಾಗವಹಿಸುವ ಬಗ್ಗೆ ನಿರ್ಧರಿಸಲು ಉನ್ನತ ಮಟ್ಟದ ಸಮಿತಿಯನ್ನು ರಚಿಸಿದ ಒಂದು ದಿನದ ನಂತರ ಕ್ರೀಡಾ ಸಚಿವರ ಹೇಳಿಕೆ ಬಂದಿದೆ.

ಸಮಿತಿ ಮತ್ತು ಅದರ ಸದಸ್ಯರ ಬಗ್ಗೆ ವಿವರಗಳನ್ನು ನೀಡಿದ ಮಜಾರಿ, “ಸಮಿತಿಯ ನೇತೃತ್ವವನ್ನು ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ ವಹಿಸಲಿದ್ದಾರೆ ಮತ್ತು ಅದರ ಭಾಗವಾಗಿರುವ 11 ಮಂತ್ರಿಗಳಲ್ಲಿ ನಾನೂ ಒಬ್ಬನಾಗಿದ್ದೇನೆ. ನಾವು ಈ ವಿಷಯವನ್ನು ಚರ್ಚಿಸುತ್ತೇವೆ ಮತ್ತು ಪಿಸಿಬಿಯ ಪೋಷಕ-ಇನ್-ಚೀಫ್ ಆಗಿರುವ ಪ್ರಧಾನಿಗೆ ನಮ್ಮ ಶಿಫಾರಸುಗಳನ್ನು ನೀಡುತ್ತೇವೆ. ಪ್ರಧಾನಿ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು.

ಇದನ್ನೂ ಓದಿ : World Cup 2023 : ಪಾಕಿಸ್ತಾನ ವಿರುದ್ಧದ ಭಾರತದ ಏಕ ದಿನ ವಿಶ್ವ ಕಪ್ ಪಂದ್ಯ ಕ್ಯಾನ್ಸಲ್​?

ಏಷ್ಯಾ ಕಪ್ ಗಾಗಿ ಪ್ರಸ್ತಾವಿತ ಹೈಬ್ರಿಡ್’ ಮಾದರಿಯ ಬಗ್ಗೆ ಮಜಾರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪಾಕಿಸ್ತಾನವು ಆತಿಥ್ಯ ವಹಿಸಿದೆ, ಪಾಕಿಸ್ತಾನದಲ್ಲಿ ಎಲ್ಲಾ ಪಂದ್ಯಗಳನ್ನು ನಡೆಸುವ ಹಕ್ಕನ್ನು ಹೊಂದಿದೆ. ಕ್ರಿಕೆಟ್ ಪ್ರೇಮಿಗಳು ಬಯಸುವುದು ಅದನ್ನೇ, ನಾನು ಹೈಬ್ರಿಡ್ ಮಾದರಿಯನ್ನು ಬಯಸುವುದಿಲ್ಲ ಎಂದು ಅವರು ಹೇಳಿದರು.

ಭಾರತ ಕ್ರೀಡೆಯನ್ನು ಮತ್ತು ರಾಜಕೀಯವನ್ನು ಸಮ್ಮಿಶ್ರಗೊಳಿಸುತ್ತಿದೆ. ವಿಶೇಷವಾಗಿ ಕ್ರಿಕೆಟ್​ನಲ್ಲಿ ಹಸ್ತಕ್ಷೇಪ ಮಾಡುತ್ತಿದೆ ಎಂದು ಮಜಾರಿ ಆರೋಪಿಸಿದರು. ಭಾರತವು ಕ್ರೀಡೆಯನ್ನು ರಾಜಕೀಯಕ್ಕೆ ತರುತ್ತದೆ. ಭಾರತ ಸರ್ಕಾರವು ತಮ್ಮ ಕ್ರಿಕೆಟ್ ತಂಡವನ್ನು ಇಲ್ಲಿಗೆ ಕಳುಹಿಸಲು ಏಕೆ ಬಯಸುವುದಿಲ್ಲ ಎಂದು ನನಗೆ ಅರ್ಥವಾಗುತ್ತಿಲ್ಲ. ಕೆಲವು ಸಮಯದ ಹಿಂದೆ ಭಾರತದಿಂದ ದೊಡ್ಡ ಬೇಸ್ ಬಾಲ್ ತಂಡವು ಆಡಲು ಇಸ್ಲಾಮಾಬಾದ್ ನಲ್ಲಿತ್ತು. ಪಾಕಿಸ್ತಾನಕ್ಕೆ ಪ್ರಯಾಣಿಸಿದ ಬ್ರಿಡ್ಜ್ ತಂಡವೂ ಇತ್ತು. ಸುಮಾರು 60 ಕ್ಕೂ ಹೆಚ್ಚು ಜನರು ಇದ್ದರು, ನಾನು ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದೆ. ಅವರು ಇಲ್ಲಿ ಗೆದ್ದು ಹೊರಟುಹೋದರು. ಪಾಕಿಸ್ತಾನದ ಫುಟ್ಬಾಲ್, ಹಾಕಿ ಮತ್ತು ಚೆಸ್ ತಂಡಗಳು ಸಹ ಭಾರತಕ್ಕೆ ಪ್ರಯಾಣಿಸುತ್ತವೆ ಎಂದು ಅವರು ಹೇಳಿದ್ದಾರೆ.

Exit mobile version