ಮುಂಬಯಿ: ಮುಂಬೈ ಇಂಡಿಯನ್ಸ್ ತಂಡದ ನೂತನ ನಾಯಕ ಹಾರ್ದಿಕ್ ಪಾಂಡ್ಯ(Hardik Pandya) ಅವರು ಐಪಿಎಲ್(IPL 2024) ಪೂರ್ವ ಋತುವಿನ ಶಿಬಿರಕ್ಕಾಗಿ ಫ್ರಾಂಚೈಸಿಯನ್ನು ಸೇರಿಕೊಂಡಿದ್ದಾರೆ. ಡ್ರೆಸಿಂಗ್ ರೂಮ್‌ನಲ್ಲಿ(Mumbai Indians Dressing Room) ದೇವರ ಫೋಟೊಗೆ ಪೋಜೆ ಮಾಡಿ ತಮ್ಮ ಇಷ್ಟಾರ್ಥಗಳನ್ನು ಕೇಳಿಕೊಂಡಿದ್ದಾರೆ. ಈ ವಿಡಿಯೊ ವೈರಲ್ ಆಗಿದೆ.
ಹಾರ್ದಿಕ್ ಪಾಂಡ್ಯ ಅವರು ಡ್ರೆಸ್ಸಿಂಗ್ ರೂಮ್‌ಗೆ ಮರಳುವ ವಿಶೇಷ ವಿಡಿಯೋವನ್ನು ಮುಂಬೈ ಇಂಡಿಯನ್ಸ್ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದೆ. ಹಾರ್ದಿಕ್ ಪಾಂಡ್ಯ ಅವರು ಮುಂಬೈ ಇಂಡಿಯನ್ಸ್ ಅಭ್ಯಾಸ ಜರ್ಸಿಯನ್ನು ಧರಿಸಿ ಡ್ರೆಸಿಂಗ್ ರೂಮ್‌ಗೆ ಎಂಟ್ರಿಕೊಟ್ಟರು. ಈ ವೇಳೆ ತಂಡದ ಕೋಚ್ ಬೌಚರ್ ಕೂಡ ಜತೆಗಿದ್ದರು. ಬೌಚರ್ ತೆಂಗಿನಕಾಯಿ ಹೊಡೆದು ಗಮನಸೆಳೆದರು. ಇದೆಲ್ಲವನ್ನು ಈ ವಿಡಿಯೊದಲ್ಲಿ ಕಾಣಬಹುದಾಗಿದೆ.
HARDIK PANDYA IS BACK WITH MUMBAI INDIANS….!!!!pic.twitter.com/IruLPfxBs8
— Johns. (@CricCrazyJohns) March 11, 2024
ಮುಂಬೈ ಇಂಡಿಯನ್ಸ್ ತನ್ನ ಮೊದಲ ಪಂದ್ಯವನ್ನು ಶುಭಮನ್ ಗಿಲ್ ನಾಯಕತ್ವದ ಗುಜರಾತ್ ಜೈಂಟ್ಸ್ ವಿರುದ್ಧ ಭಾನುವಾರ, ಮಾರ್ಚ್ 24ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಆಡಲಿದೆ. ಹಾರ್ದಿಕ್ ಪಾಂಡ್ಯ ಈ ಹಿಂದೆ ನಾಯಕನಾಗಿದ್ದ ತಂಡದ ವಿರುದ್ಧವೇ ಎದುರಾಳಿಯಾಗಿ ಈ ಬಾರಿಯ ಮೊದಲ ಪಂದ್ಯವಾಡುತ್ತಿದ್ದಾರೆ.
ಇದನ್ನೂ ಓದಿ IPL 2024 : ಕೆಕೆಆರ್ ತಂಡಕ್ಕೆ ಕೈಕೊಟ್ಟ ಜೇಸನ್ ರಾಯ್; ವಿಶ್ವ ನಂಬರ್ 2 ಬ್ಯಾಟರ್ ಸೇರ್ಪಡೆ
ಭಾರತ ಕ್ರಿಕೆಟ್ ತಂಡದ ಅನುಭವಿ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ(Hardik Pandya) ಅವರು ಕಳೆದ ವರ್ಷ ವಿಶ್ವಕಪ್ ವೇಳೆ ಗಾಯಗೊಂಡು ಟೂರ್ನಿಯಿಂದ ಹೊರಬಿದ್ದ ಬಳಿಕ ಯಾವುದೇ ಸರಣಿ ಆಡಿಲ್ಲ. ಇದೀಗ ಐಪಿಎಲ್ ಮೂಲಕ ಮತ್ತೆ ಕ್ರಿಕೆಟ್ ಕಮ್ಬ್ಯಾಕ್ ಮಾಡಲಿದ್ದಾರೆ. ಅಲ್ಲದೆ ಇದೇ ಜೂನ್ನಲ್ಲಿ ನಡೆಯುವ ಟಿ20 ವಿಶ್ವಕಪ್ನಲ್ಲಿಯೂ ಅವರು ಭಾರತ ಪರ ಆಡುವ ಸಾಧ್ಯತೆ ಇದೆ. ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಬಾಂಗ್ಲಾದೇಶ ವಿರುದ್ಧದ ಲೀಗ್ ಪಂದ್ಯ ಆಡುವಾಗ ಚೆಂಡನ್ನು ತಡೆಯುವ ಯತ್ನದಲ್ಲಿ ಅವರ ಹಿಮ್ಮಡಿಗೆ ಗಾಯವಾಗಿತ್ತು.
2022-23 ರಿಂದ ಗುಜರಾತ್ ಟೈಟಾನ್ಸ್ ಪರ 31 ಪಂದ್ಯಗಳನ್ನು ಆಡಿರುವ ಪಾಂಡ್ಯ, 37.86 ರ ಸರಾಸರಿಯಲ್ಲಿ 133 ಸ್ಟ್ರೈಕ್ ರೇಟ್‌ನಲ್ಲಿ 833 ರನ್ ಗಳಿಸಿದ್ದರು. ಇದರಲ್ಲಿ ಆರು ಅರ್ಧ ಶತಕಗಳು ಬಾರಿಸಿದ್ದರು. ಅಜೇಯ 87 ರನ್ ಗರಿಷ್ಠ ವೈಯಕ್ತಿಕ ಮೊತ್ತವಾಗಿದೆ. ಬೌಲಿಂಗ್ನಲ್ಲಿಯೂ ಕಮಾಲ್ ಮಾಡಿ 11 ವಿಕೆಟ್‌ಗಳನ್ನು ಉರುಳಿಸಿದ್ದಾರೆ. 17 ರನ್ಗೆ 3 ವಿಕೆಟ್ ಅತ್ಯುತ್ತಮ ಬೌಲಿಂಗ್ ಪ್ರದರ್ಶನವಾಗಿದೆ.
ಪಾಂಡ್ಯ ಅವರು 2015-2021ರಲ್ಲಿ ಮುಂಬೈ ಇಂಡಿಯನ್ಸ್ ಪರ ಒಟ್ಟು 92 ಪಂದ್ಯಗಳನ್ನು ಆಡಿದ್ದರು. 153 ಕ್ಕಿಂತ ಹೆಚ್ಚಿನ ಸ್ಟ್ರೈಕ್ ರೇಟ್‌ನಲ್ಲಿ 27.33 ರ ಸರಾಸರಿಯಲ್ಲಿ 1,476 ರನ್ ಗಳಿಸಿದ್ದಾರೆ, ನಾಲ್ಕು ಅರ್ಧ ಶತಕಗಳು ಹಾಗೂ 42 ವಿಕೆಟ್‌ಗಳನ್ನು ಪಡೆದಿದ್ದಾರೆ.