ದುಬೈ : ಅಫಘಾನಿಸ್ತಾನ ತಂಡದ ವಿರುದ್ಧದ ಏಷ್ಯಾ ಕಪ್ (Asia Cup) ಸೂಪರ್-೪ ಹಂತದ ಪಂದ್ಯದಲ್ಲಿ ಭಾರತ ೧೦೧ ರನ್‌ಗಳ ಬೃಹತ್ ಜಯ ದಾಖಲಿಸಿದೆ. ಚೊಚ್ಚಲ ಅಂತಾರಾಷ್ಟ್ರೀಯ ಟಿ೨೦ ಶತಕವನ್ನು ಬಾರಿಸಿ ಫಾರ್ಮ್‌ಗೆ ಮರಳಿದ ವಿರಾಟ್ ಕೊಹ್ಲಿಗೆ ಇದು ವಿಶೇಷ ಪಂದ್ಯ. ಅಂತೆಯೇ ಇನ್ನೊಬ್ಬ ಆಟಗಾರನಿಗೂ ಈ ಪಂದ್ಯ ಸ್ಪೆಷಲ್ ಎನಿಸಿದೆ. ಅವರೇ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್. ಈ ಹಣಾಹಣಿಯಲ್ಲಿ ಅವರು ಅಂತಾರಾಷ್ಟ್ರೀಯ ಪಂದ್ಯವೊಂದರಲ್ಲಿ ಮೊದಲ ಬಾರಿ ಒಂದ ಓವರ್ ಬೌಲ್ ಮಾಡಿದ್ದಾರೆ.
ದಿನೇಶ್ ಕಾರ್ತಿಕ್ ವಿಕೆಟ್‌ಕೀಪರ್ ಬ್ಯಾಟರ್. ಉತ್ತಮ ಫಿನಿಶರ್ ಕೂಡ. ೨೦೦೪ರಲ್ಲಿ ಅಂತಾರಾಷ್ಟ್ರೀಯ ತಂಡಕ್ಕೆ ಪದಾರ್ಪಣೆ ಮಾಡಿರುವ ಅವರು ೧೮ ವರ್ಷಗಳ ಕ್ರಿಕೆಟ್ ವೃತ್ತಿಯಲ್ಲಿ ಎಂದೂ ಬೌಲಿಂಗ್ ಮಾಡಿಲಿಲ್ಲ. ಆದರೆ, ಹಂಗಾಮಿ ನಾಯಕ ಕೆ. ಎಲ್. ರಾಹುಲ್ ಅಫಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಇನಿಂಗ್ಸ್‌ನ ಕೊನೇ ಓವರ್ ಅನ್ನು ದಿನೇಶ್ ಕಾರ್ತಿಕ್‌ಗೆ ಕೊಟ್ಟಿದ್ದಾರೆ. ಕಾರ್ತಿಕ್ ಆ ಓವರ್‌ನಲ್ಲಿ ೧೮ ರನ್‌ಗಳನ್ನು ಬಿಟ್ಟುಕೊಟ್ಟಿದ್ದು ಹೌದಾದರೂ, ಈ ಪಂದ್ಯ ಅವರಿಗೆ ಸ್ಮರಣೀಯವಾಗಲಿದೆ.
೩೭ ವರ್ಷದ ದಿನೇಶ್ ಕಾರ್ತಿಕ್ ಭಾರತ ಪರ ಎಲ್ಲ ಮೂರು ಮಾದರಿ ಸೇರಿ ಒಟ್ಟಾರೆ ೧೭೦ ಪಂದ್ಯಗಳನ್ನು ಆಡಿದ್ದಾರೆ. ವಿಕೆಟ್ ಹಿಂದೆ ಕ್ಯಾಚ್ ಹಾಗೂ ಸ್ಟಂಪ್ ಮೂಲಕ ೧೦೦ಕ್ಕೂ ಅಧಿಕ ವಿಕೆಟ್‌ಗಳನ್ನು ಉರುಳಿಸಿದ್ದಾರೆ. ಆದರೆ, ಬೌಲಿಂಗ್ ಮಾಡುವ ಅವಕಾಶ ಬಂದಿರಲಿಲ್ಲ. ಆದರೆ, ಆಫ್ಘನ್ ವಿರುದ್ಧದ ಪಂದ್ಯದಲ್ಲಿ ಕಾಯಂ ವಿಕೆಟ್‌ಕೀಪರ್ ರಿಷಭ್ ಪಂತ್ ಇದ್ದ ಕಾರಣ ದಿನೇಶ್ ಫೀಲ್ಡಿಂಗ್ ಮಾಡಬೇಕಾಯಿತು.
ಪಂದ್ಯದಲ್ಲಿ ಭಾರತ ತಂಡ ಸಂಪೂರ್ಣವಾಗಿ ಮೇಲುಗೈ ಸಾಧಿಸಿ ಕೊನೆಯ ಆರು ಎಸೆತಗಳಲ್ಲಿ ಅಫಘಾನಿಸ್ತಾನ ತಂಡದ ಗೆಲುವಿಗೆ ೧೨೦ ರನ್ ಬೇಕಾಯಿತು. ಈ ವೇಳೆ ಕೆ.ಎಲ್ ರಾಹುಲ್ ಚೆಂಡನ್ನು ದಿನೇಶ್ ಕಾರ್ತಿಕ್‌ಗೆ ಕೊಟ್ಟರು. ಎಲ್ಲರೂ ಅರ್ಶ್‌ದೀಪ್ ಸಿಂಗ್ ಬೌಲಿಂಗ್ ಮಾಡುತ್ತಾರೆ ಎಂದುಕೊಂಡರೆ, ದಿನೇಶ್ ಕಾರ್ತಿಕ್ ಸಾಧನೆ ಮಾಡಿದರು.
ಇದನ್ನೂ ಓದಿ | Virat kohli | ಚೊಚ್ಚಲ ಟಿ20(ಐ) ಶತಕವನ್ನು ಪತ್ನಿ, ಪುತ್ರಿಗೆ ಅರ್ಪಿಸಿದ ವಿರಾಟ್ ಕೊಹ್ಲಿ