ರಾಜ್ಕೋಟ್: ಹಾರ್ದಿಕ್ ಪಾಂಡ್ಯ ಭಾರತದ ತಂಡದ ಭವಿಷ್ಯದ ನಾಯಕ ಎಂದೇ ಹೇಳಲಾಗುತ್ತಿದೆ. ಅವರು ನೀಡುತ್ತಿರುವ ಆಲ್ರೌಂಡ್ ಪ್ರದರ್ಶನ ಹಾಗೂ ಟೀಮ್ ಇಂಡಿಯಾ ಪರ ಅವರು ಗಳಿಸುತ್ತಿರುವ ಯಶಸ್ಸು ಈ ರೀತಿ ಕರೆಯಲು ಎರಡನೇ ಕಾರಣವಾಗಿದೆ. ಆದರೆ, ನಾಯಕ ಪಾಂಡ್ಯನ (Hardik Pandya) ನೈಜ ಸಾಮರ್ಥ್ಯ ಪ್ರದರ್ಶನಗೊಂಡಿರುವುದು ಕಳೆದ ಆವೃತ್ತಿಯ ಐಪಿಎಲ್ನಲ್ಲಿ. ಚೊಚ್ಚಲ ಆವೃತ್ತಿಯಲ್ಲೇ ಗುಜರಾತ್ ಟೈಟನ್ಸ್ ತಂಡ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದಾಗ ಅವರ ನೈಪುಣ್ಯತೆಯನ್ನು ಕ್ರಿಕೆಟ್ ಕಾರಿಡಾರ್ ಮೆಚ್ಚಿತ್ತು. ಅದರ ಹಿನ್ನೆಲೆಯಲ್ಲಿ ಭಾರತ ತಂಡದ ನೇತೃತ್ವವವನ್ನೂ ಅವರಿಗೆ ನೀಡಲಾಗಿದೆ. ಇದೀಗ ಅವರು ಯಶಸ್ಸಿನ ಉತ್ತುಂಗದಲ್ಲಿದ್ದಾರೆ. ಆದರೆ, ತಾವು ನಾಯಕತ್ವವನ್ನು ಕಲಿತು ಬಂದ ಹಾದಿಯನ್ನು ಮರೆತಿಲ್ಲ. ಹೀಗಾಗಿ ಟೀಮ್ ಇಂಡಿಯಾದ ಪರ ತಾವು ಪಡೆಯುತ್ತಿರುವ ಯಶಸ್ಸಿನ ಹಿಂದೆ ಐಪಿಎಲ್ ಕೋಚ್ ಆಶೀಶ್ ನೆಹ್ರಾ ಅವರಿದ್ದಾರೆ ಎಂದು ಹೇಳಿಕೊಂಡಿದ್ದಾರೆ.
ಜನವರಿ 7ರಂದು ಮುಕ್ತಾಯಗೊಂಡ ಪ್ರವಾಸಿ ಶ್ರೀಲಂಕಾ ವಿರುದ್ಧದ ಟಿ20 ಸರಣಿಯಲ್ಲಿ ಭಾರತ ತಂಡ 2-1 ಅಂತರದಿಂದ ಸರಣಿ ಗೆಲುವು ಸಾಧಿಸಿತ್ತು. ಈ ಗೆಲುವಿನ ಬಳಿಕ ಮಾತನಾಡಿದ ನಾಯಕ ಹಾರ್ದಿಕ್ ಪಾಂಡ್ಯ ತಮ್ಮ ನಾಯಕತ್ವದ ಯಶಸ್ಸಿನ ಹಿಂದೆ ಐಪಿಎಲ್ನ ಕೋಚ್ ಆಶೀಶ್ ನೆಹ್ರಾ ಅವರಿದ್ದಾರೆ ಎಂದು ಹೇಳಿಕೊಂಡಿದ್ದಾರೆ.
ನಾನು ಆಶೀಶ್ ನೆಹ್ರಾ ಜತೆ ಕೆಲಸ ಮಾಡಿರುವುದೇ ನನ್ನ ನಾಯಕತ್ವದ ಸಾಮರ್ಥ್ಯದಲ್ಲಿ ಬದಲಾವಣೆ ತರಲು ನೆರವಾಯಿತು. ನಾವಿಬ್ಬರೂ ವಿಭಿನ್ನ ವ್ಯಕ್ತಿಗಳಾಗಿದ್ದೇವೆ. ಆದರೆ, ನಮ್ಮಿಬ್ಬರ ಕ್ರಿಕೆಟ್ ಯೋಜನೆಗಳು ಏಕ ರೀತಿಯಲ್ಲಿ ಇವೆ, ಎಂಬುದಾಗಿ ಆಶೀಶ್ ನೆಹ್ರಾ ನುಡಿದಿದ್ದಾರೆ.
ಗುಜರಾತ್ ಟೈಟನ್ಸ್ ತಂಡದಲ್ಲಿ ನಾನು ನೆಹ್ರಾ ಜತೆಗಿದ್ದೆ. ಅವರು ನನ್ನ ನಾಯಕತ್ವದ ಮೌಲ್ಯಗಳನ್ನು ಹೆಚ್ಚಿಸಿದರು. ನಾನು ಹಾಕಿಕೊಂಡಿರುವ ಯೋಜನೆಯನ್ನು ಮಾಡಿ ತೀರಿಸಲು ಅವರು ಸಹಾಯ ಮಾಡಿದರು. ನನಗೆ ಆಟದ ಬಗ್ಗೆ ಹೆಚ್ಚ ಅರಿವು ಇದೆ. ಅದನ್ನೇ ನಾಯಕತ್ವಕ್ಕೆ ಬಳಸಿಕೊಳ್ಳುತ್ತೇವೆ ಎಂದು ಪಾಂಡ್ಯ ಹೇಳಿದ್ದಾರೆ.
ಇದನ್ನೂ ಓದಿ | INDvsSL | ಪಂದ್ಯ ಮುಗಿಯುವ ಮೊದಲೇ ಹ್ಯಾಂಡ್ ಶೇಕ್; ನಾಯಕ ಹಾರ್ದಿಕ್ ಪಾಂಡ್ಯ ಮಾಡಿದ್ದು ತಪ್ಪೊ, ಸರಿಯೊ?