ಮೀರ್‌ಪುರ : ಟೀಮ್ ಇಂಡಿಯಾದ ಫೀಲ್ಡಿಂಗ್ ವಿಭಾಗದ ಅತ್ಯಂತ ದುರ್ಬಲಗೊಂಡಿದೆ. ಗಲ್ಲಿ ಕ್ರಿಕೆಟರ್‌ಗಳಿಗಿಂತ ಕಳಪೆಯಾಗಿ ಟೀಮ್ ಇಂಡಿಯಾ ಸದಸ್ಯರು ಫೀಲ್ಡಿಂಗ್ ಮಾಡುತ್ತಿದ್ದಾರೆ. ವಿರಾಟ್ ಕೊಹ್ಲಿ ಬಿಟ್ಟರೆ ಇತರ ಆಟಗಾರರು ಫೀಲ್ಡಿಂಗ್ ವಿಚಾರದಲ್ಲಿ ಅತೀವ ನಿರ್ಲಕ್ಷ್ಯ ತೋರುತ್ತಿದ್ದಾರೆ. ಇದರಿಂದ ಎದುರಾಳಿ ತಂಡದ ಮೇಲೆ ಒತ್ತಡ ಹೇರಲೂ ಸಾಧ್ಯವಾಗುತ್ತಿಲ್ಲ ಹಾಗೂ ಕನಿಷ್ಠ ೨೫ ರನ್‌ಗಳನ್ನು ಎದುರಾಳಿ ತಂಡಕ್ಕೆ ಬಿಟ್ಟು ಕೊಡುತ್ತಿದ್ದಾರೆ. ಜತೆಗೆ ತಂಡದ ಸೋಲಿಗೂ ಕಾರಣವಾಗುತ್ತಿದೆ. ಬಾಂಗ್ಲಾದೇಶ ವಿರುದ್ಧದ ಏಕ ದಿನ ಸರಣಿಯ (INDvsBAN) ಮೊದಲ ಪಂದ್ಯದಲ್ಲೂ ಇದೇ ಫೀಲ್ಡಿಂಗ್ ಪುನರಾವರ್ತನೆಗೊಂಡಿತು. ಏತನ್ಮಧ್ಯೆ ಸಂಯಮ ಕಳೆದುಕೊಂಡ ನಾಯಕ ರೋಹಿತ್ ಶರ್ಮ ಫೀಲ್ಡರ್‌ಗಳನ್ನು ಮನ ಬಂದಂತೆ ನಿಂದಿಸಿದ್ದು ನಡೆಯಿತು.
ಬಾಂಗ್ಲಾದೇಶದ ಇನಿಂಗ್ಸ್‌ನ ೪೩ನೇ ಓವರ್‌ನಲ್ಲಿ ಪ್ರಸಂಗ ನಡೆಯಿತು. ಅಜೇಯ ೩೮ ರನ್ ಬಾರಿಸಿ ಭಾರತ ತಂಡದ ಗೆಲುವು ಕಸಿದಿದ್ದ ಬಾಂಗ್ಲಾದೇಶದ ಮಧ್ಯಮ ಕ್ರಮಾಂಕದ ಬ್ಯಾಟರ್ ಮೆಹೆದಿ ಹಸನ್ ಅವರು ಶಾರ್ದೂಲ್ ಠಾಕೂರ್ ವೈಡರ್ ಎಸೆತಕ್ಕೆ ಜೋರಾಗಿ ಬಾರಿಸಿದರು. ಆ ಚೆಂಡು ಥರ್ಡ್ ಮ್ಯಾನ್ ಪ್ರದೇಶದಲ್ಲಿ ಹೋಗಿ ಬಿತ್ತು. ಅಲ್ಲಿದ್ದ ಫೀಲ್ಡರ್ ವಾಷಿಂಗ್ಟನ್ ಸುಂದರ್‌ಗೆ ಅದು ಸುಲಭ ಕ್ಯಾಚ್ ಅಲ್ಲದಿದ್ದರೆ ಕನಿಷ್ಠ ಪಕ್ಷ ಹಿಡಿಯುವ ಪ್ರಯತ್ನವನ್ನೂ ಮಾಡಲಿಲ್ಲ. ಕೋಪಗೊಂಡ ರೋಹಿತ್ ಕೆಟ್ಟ ಪದಗಳಿಂದ ನಿಂದಿಸಿದರು.
ರೋಹಿತ್ ಅವರ ಕೋಪ ಇಮ್ಮಡಿಯಾಗಲು ಕಾರಣವೂ ಇದೆ. ಯಾಕೆಂದರೆ ಅದಕ್ಕಿಂತ ಮೊದಲ ಎಸೆತದಲ್ಲಿ ಮೆಹೆದಿ ಹಸನ್ ಆಕಾಶದೆತ್ತರಕ್ಕೆ ಬಾರಿಸಿದ್ದ ಚೆಂಡನ್ನು ಹಿಡಿಯಲು ಹೋದ ವಿಕೆಟ್‌ಕೀಪರ್ ಕೆ.ಎಲ್ ರಾಹುಲ್, ಕ್ಯಾಚ್ ಕೈ ಚೆಲ್ಲಿದ್ದರು. ಆ ಕ್ಯಾಚ್ ಹಿಡಿದಿದ್ದರೆ ಭಾರತ ಗೆಲುವು ಸಾಧಿಸುತ್ತಿತ್ತು. ಎರಡೆರಡು ಅವಕಾಶಗಳು ಕೈ ತಪ್ಪುತ್ತಿದ್ದಂತೆ ಕೋಪಗೊಂಡ ರೋಹಿತ್ ಕೆಟ್ಟದಾಗಿ ನಿಂದಿಸಿದರು.
ಇದನ್ನ ಓದಿ | INDvsBAN | ಅರ್ಧ ಶತಕ ಬಾರಿಸಿ ಮಿಂಚಿದರೂ, ಕ್ಯಾಚ್ ಬಿಟ್ಟು ಟ್ರೋಲ್ ಆದ ಕೆ. ಎಲ್ ರಾಹುಲ್!