ಮೀರ್‌ಪುರ್ : ಸ್ಫೋಟಕ ಬ್ಯಾಟರ್ ಸೂರ್ಯಕುಮಾರ್ ಯಾದವ್ ಬಾಂಗ್ಲಾದೇಶ ಪ್ರವಾಸ ಹೋಗಿಲ್ಲ. ಹೀಗಾಗಿ ಅವರು ರಣಜಿ ಟ್ರೋಫಿಯಲ್ಲಿ ಮುಂಬಯಿ ತಂಡದ ಪರ ಹೈದಾರಾಬಾದ್ ತಂಡದ ವಿರುದ್ಧ ಆಡಲಿದ್ದಾರೆ. ಆದರೆ, ಸೂರ್ಯಕುಮಾರ್ ಅವರ ಅಸ್ತಿತ್ವ ಬಾಂಗ್ಲಾದೇಶ ವಿರುದ್ಧದ ಮೊದಲ ಪಂದ್ಯದಲ್ಲಿ ಕಾಣಿಸಿಕೊಂಡಿತು. ಹೇಗೆ, ಗೊತ್ತೇ? ಅವರ ಸಹಿ ಇರುವ ಬ್ಯಾಟ್ ಮೂಲಕ. ಅದನ್ನು ಪತ್ತೆ ಹಚ್ಚಿದ್ದು ನೇರ ಪ್ರಸಾರದ ಕ್ಯಾಮೆರಾ.
ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮ, ಮೀರ್‌ಪುರ್‌ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದರು. ಆರಂಭಿಕ ಬ್ಯಾಟರ್ ಆಗಿರುವ ಅವರು ಮೊದಲು ಕ್ರೀಸ್‌ಗೆ ಇಳಿದು ೩೧ ಎಸೆತಗಳಿಗೆ ೨೭ ರನ್ ಬಾರಿಸಿದ್ದರು.
ಬಾಂಗ್ಲಾ ಬೌಲರ್ ಹಸನ್ ಇನಿಂಗ್ಸ್‌ನ ಐದನೇ ಓವರ್ ಎಸೆದಿದ್ದರು. ಅವರ ಎಸೆತವೊಂದರಲ್ಲಿ ಬೌಂಡರಿ ಬಾರಿಸಿದ ರೋಹಿತ್ ಶರ್ಮ ಬ್ಯಾಟ್ ಸ್ವಲ್ಪ ಮೇಲೆತ್ತಿ ಹಿಡಿದಿದ್ದರು. ಈ ವೇಳೆ ಅದರ ಕೆಳಗೆ ಸೂರ್ಯಕುಮಾರ್ ಅವರ ಸಹಿ ಇರುವುದು ಕ್ಯಾಮೆರಾ ಕಣ್ಣಿಗೆ ಬಿದ್ದಿತ್ತು. ಅವರ ಬ್ಯಾಟ್‌ನಲ್ಲಿ ಸೂರ್ಯಕುಮಾರ್ ಯಾದವ್ ಅವರ ‘ಎಸ್‌ಕೆ ಯಾದವ್’ ಸಹಿ ಇರುವುದು ಕೆಲವೇ ಕ್ಷಣದಲ್ಲಿ ಕಂಡು ಮರೆಯಾಗಿತ್ತು.
ಭಾರತ ಕ್ರಿಕೆಟ್ ತಂಡದ ಬಹುತೇಕ ಆಟಗಾರರು ತಮ್ಮ ಕಿಟ್‌ಗಳನ್ನಷ್ಟೇ ಬಳಸುತ್ತಾರೆ. ಇನ್ನೊಬ್ಬರ ಬ್ಯಾಟ್ ಹಾಗೂ ಇನ್ಯಾವುದೇ ವಸ್ತುಗಳನ್ನು ಬಳಸುವುದಿಲ್ಲ. ಆದರೆ, ರೋಹಿತ್ ಶರ್ಮ ಅವರು ಸೂರ್ಯಕುಮಾರ್ ಯಾದವ್ ಬ್ಯಾಟ್ ಬಳಸುವ ಮೂಲಕ ಈ ಮಾತನ್ನು ಸುಳ್ಳಾಗಿಸಿದ್ದಾರೆ.
ಈ ಹಿಂದೆಯೂ ಕೆಲವೊಂದು ಬಾರಿ ಆಟಗಾರರ ಬೇರೆಯವರ ಜರ್ಸಿಯನ್ನು ಧರಿಸಿಕೊಂಡು ಆಡಿದ್ದು ಕಂಡು ಬಂದಿದೆ. ಸೂರ್ಯಕುಮಾರ್ ಯಾದವ್ ಅವರು ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದಾರೆ. ಹೀಗಾಗಿ ಅವರ ಬ್ಯಾಟ್ ಭರ್ಜರಿ ಹೊಡೆತಗಳಿಗೆ ನೆರವಾಗುತ್ತದೆ ಎನ್ನಲಾಗಿದೆ. ಹೀಗಾಗಿ ರೋಹಿತ್ ಶರ್ಮ ಅವರು ಅವರ ಬ್ಯಾಟ್ ಬಳಸಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ | INDvsBAN | ನಮ್ಮನ್ನು ಬೆಂಬಲಿಸದ ಅಭಿಮಾನಿಗಳು ಇರುವುದು ಇದೊಂದೇ ದೇಶದಲ್ಲಿ ಎಂದ ರೋಹಿತ್ ಶರ್ಮ