Site icon Vistara News

Car Accident: ಅಪಘಾತದಲ್ಲಿ ಗಾಯಗೊಂಡ ಪಾಕ್​ ತಂಡದ ಇಬ್ಬರು ಆಟಗಾರ್ತಿಯರು; ಆಸ್ಪತ್ರೆಗೆ ದಾಖಲು

Car Accident

ಕರಾಚಿ: ಪಾಕಿಸ್ತಾನದ ಮಹಿಳಾ ಕ್ರಿಕೆಟ್(Pakistan Women’s cricket team) ತಂಡದ ಮಾಜಿ ನಾಯಕಿ ಬಿಸ್ಮಾ ಮರೂಫ್(Bismah Maroof) ಮತ್ತು ಗುಲಾಮ್ ಫಾತಿಮಾ(Ghulam Fatima) ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೆ(Car Accident) ಒಳಗಾಗಿದ್ದು ಉಭಯ ಆಟಗಾರ್ತಿಯರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಹೇಳಿಕೆಯಲ್ಲಿ ತಿಳಿಸಿದೆ. ಸದ್ಯ ಆಟಗಾರ್ತಿಯರಿಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪಿಸಿಬಿ(Pakistan Cricket Board) ಮಾಹಿತಿ ನೀಡಿದೆ. ಶುಕ್ರವಾರ(ಏಪ್ರಿಲ್​ 5) ದಂದು ಈ ಅಪಘಾತ ನಡೆದಿದೆ.

ಮರೂಫ್ ಮತ್ತು ಫಾತಿಮಾ ಇಬ್ಬರೂ ಈ ತಿಂಗಳ ಕೊನೆಯಲ್ಲಿ ಪ್ರಾರಂಭವಾಗಲಿರುವ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯ ಅಭ್ಯಾಸ ತರಬೇತಿ ಶಿಬಿರಕ್ಕೆ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ ಎಂದು ಮೂಲಗಳು ಮಾಹಿತಿ ನೀಡಿದೆ. ಪಾಕ್​ ತಂಡ ಕೆರಿಬಿಯನ್ ಮಹಿಳೆಯರ ವಿರುದ್ಧ ಮೂರು ಏಕದಿನ ಮತ್ತು ಐದು ಪಂದ್ಯಗಳ ಟಿ20 ಪಂದ್ಯಗಳನ್ನು ಆಡಲು ಸಜ್ಜಾಗಿದೆ, ಎಲ್ಲಾ ಪಂದ್ಯಗಳು ಕರಾಚಿಯ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿವೆ. ಸದ್ಯ ಗಾಯಗೊಂಡಿರುವ ಉಭಯ ಆಟಗಾರ್ತಿಯರು ಈ ಸರಣಿಯಲ್ಲಿ ಆಡುವುದು ಅನುಮಾನ ಎನ್ನಲಾಗಿದೆ.

2013 ಮತ್ತು 2020 ರ ನಡುವೆ ಪಾಕಿಸ್ತಾನವನ್ನು ಮುನ್ನಡೆಸಿದ್ದ ಮರೂಫ್ ಮತ್ತು ಫಾತಿಮಾ ಇಬ್ಬರೂ ಡಿಸೆಂಬರ್‌ನಲ್ಲಿ ನ್ಯೂಜಿಲೆಂಡ್‌ನಲ್ಲಿ ನಡೆದಿದ್ದ ಏಕದಿನ ಸರಣಿಯಲ್ಲಿ ಪಾಕ್​ ಪರ ಕೊನೆಯದ್ದಾಗಿ ಆಡಿದ್ದರು. ಈ ಸರಣಿಯನ್ನು ಪಾಕ್​ 2-1 ಅಂತರದಲ್ಲಿ ಕಳೆದುಕೊಂಡಿತ್ತು. ಮರೂಫ್ ಅವರು ಮೂರು ಪಂದ್ಯಗಳಲ್ಲಿ 89 ರನ್ ಗಳಿಸಿದ್ದರು. ಏತನ್ಮಧ್ಯೆ, ಫಾತಿಮಾ ಅವರು ಮೂರು ಪಂದ್ಯಗಳಿಂದ 28.67 ಸರಾಸರಿಯಲ್ಲಿ ಆರು ವಿಕೆಟ್‌ಗಳೊಂದಿಗೆ ತಂಡದ ಪ್ರಮುಖ ವಿಕೆಟ್-ಟೇಕರ್ ಆಗಿ ಗುರುತಿಸಿಕೊಂಡಿದ್ದರು. ದೀರ್ಘ ಕಾಲದ ಬಳಿಕ ಮತ್ತೆ ತಂಡದ ಪರ ಆಡಲು ಕಾತರಗೊಂಡಿದ್ದ ವೇಳೆಯೇ ಉಭಯ ಆಟಗಾರ್ತಿಯರಿಗೆ ಅಪಘಾತ ಸಂಭವಿಸಿದ್ದು ನೋವಿನ ಸಂಗತಿಯಾಗಿದೆ.

ಇದನ್ನೂ ಓದಿ Lahiru Thirimanne: ಭೀಕರ ಕಾರು ಅಪಘಾತ; ಲಂಕಾ ಕ್ರಿಕೆಟಿಗ ಆಸ್ಪತ್ರೆಗೆ ದಾಖಲು

ಮರೂಫ್ ಪಾಕ್​ ಪರ 133 ಏಕದಿನ ಮತ್ತು 140 ಟಿ20 ಪಂದ್ಯಗಗಳನ್ನು ಆಡಿದ್ದಾರೆ ಮತ್ತು 50-ಓವರ್​ಗಳ ಸ್ವರೂಪದಲ್ಲಿ 1,000 ರನ್ ಗಳಿಸಿದ ಮೊದಲ ಪಾಕಿಸ್ತಾನಿ ಮಹಿಳಾ ಕ್ರಿಕೆಟ್​ ಆಟಗಾರ್ತಿ ಎನ್ನುವ ಹಿರಿಮೆ ಇವರದ್ದಾಗಿದೆ. ಮತ್ತೊಂದೆಡೆ, ಫಾತಿಮಾ 2017 ರಲ್ಲಿ ರಾಷ್ಟ್ರೀಯ ತಂಡಕ್ಕೆ ಪದಾರ್ಪಣೆ ಮಾಡಿ ಇದುವರೆಗೆ 15 ಏಕದಿನ ಮತ್ತು ಐದು ಟಿ20 ಪಂದ್ಯಗಳನ್ನಾಡಿದ್ದಾರೆ. ಉಭಯ ಆಟಗಾರ್ತಿಯರು ಕೂಡ ಶೀಘ್ರವಾಗಿ ಚೇತರಿಸಿಕೊಂಡು ಮತ್ತೆ ಕ್ರಿಕೆಟ್​​ ಅಂಗಳಕ್ಕೆ ಇಳಿಯುವಂತಾಗಲಿ ಎಂದು ಹಲವು ಕ್ರಿಕೆಟಿಗರು ಹಾರೈಸಿದ್ದಾರೆ.

Exit mobile version