ಸಿಡ್ನಿ : ಪ್ರತಿಯೊಂದು ಕ್ರಿಕೆಟ್ ಟೂರ್ನಿಯ ಅಂತ್ಯದಲ್ಲಿ ಬೆಸ್ಟ್ ಕ್ಯಾಚ್, ಬೆಸ್ಟ್ ಸಿಕ್ಸರ್, ಬೆಸ್ಟ್ ಫೀಲ್ಡಿಂಗ್ ಎಂಬೆಲ್ಲ ಸಾಧನೆಗಳು ಸೃಷ್ಟಿಯಾಗುತ್ತವೆ. ಆದರೆ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ೨೦ ವಿಶ್ವ ಕಪ್‌ನ ಸೂಪರ್-೧೨ ಹಂತದ ಮೊದಲ ಪಂದ್ಯದಲ್ಲೇ ಬೆಸ್ಟ್ ಕ್ಯಾಚ್ ದಾಖಲಾಗಿದೆ. ಕ್ಯಾಚ್ ಹಿಡಿದವರು ನ್ಯೂಜಿಲೆಂಡ್ ತಂಡದ ಬ್ಯಾಟರ್ ಗ್ಲೆನ್ ಫಿಲಿಪ್ಸ್. ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಅವರು ಟೂರ್ನಿಯ ಅತ್ಯುತ್ತಮ ಕ್ಯಾಚ್ ಹಿಡಿದು ಎಲ್ಲರೂ ನಿಬ್ಬೆರಗಾಗುವಂತೆ ಮಾಡಿದ್ದಾರೆ.
ಶನಿವಾರ ನಡೆದ ಈ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ಮೊದಲು ಬ್ಯಾಟ್ ಮಾಡಿ ೩ ವಿಕೆಟ್‌ಗೆ ೨೦೦ ರನ್ ಬಾರಿಸಿತ್ತು. ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡ ೧೭.೧ ಓವರ್‌ಗಳಲ್ಲಿ ೧೧೧ ರನ್‌ಗಳಿಗೆ ಆಲ್‌ಔಟ್ ಆಗಿ ೮೯ ರನ್‌ಗಳ ಹೀನಾಯ ಸೋಲಿಗೆ ಒಳಗಾಯಿತು. ದೊಡ್ಡ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡ ಆರಂಭದಲ್ಲೇ ಸತತವಾಗಿ ವಿಕೆಟ್ ಕಳೆದುಕೊಂಡು ಸೋಲಿಗೆ ಒಳಗಾಯಿತು.
ಈ ವೇಳೆ ಬ್ಯಾಟ್ ಮಾಡಲು ಬಂದ ಆಲ್‌ರೌಂಡರ್ ಮಾರ್ಕಸ್ ಸ್ಟೋಯ್ನಿಸ್ ಸ್ಪಿನ್ನರ್ ಮಿಚೆಲ್ ಸ್ಯಾಂಟ್ನರ್ ಅವರ ಎಸೆತವನ್ನು ಕವರ್ ಪ್ರದೇಶದೆಡೆಗೆ ಬಾರಿಸಿದರು. ಅಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಗ್ಲೆನ್ ಫಿಲಿಪ್ಸ್ ಓಡಿ ಬಂದಿದ್ದಲ್ಲದೆ, ಡೈವ್ ಹೊಡೆದು ಕ್ಯಾಚ್ ಹಿಡಿದರು. ಅವರು ಹಿಡಿದ ಅದ್ಭುತ ಕ್ಯಾಚ್‌ಗೆ ಬ್ಯಾಟರ್ ಸ್ಟೋಯ್ನಿಸ್ ಅವರಲ್ಲದೆ, ಸ್ಟೇಡಿಯಮ್‌ನಲ್ಲಿದ್ದ ಅಭಿಮಾನಿಗಳು ಬೆಚ್ಚಿ ಬಿದ್ದರು.
ಇದನ್ನೂ ಓದಿ | T20 World Cup | ಮೊದಲ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯಾ ತಂಡಕ್ಕೆ 89 ರನ್ ಹೀನಾಯ ಸೋಲು