ಮುಂಬಯಿ: ಟೀಮ್ ಇಂಡಿಯಾದ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ(Virat Kohli) ‘ಸಿಯೆಟ್ ಅವಾರ್ಡ್ಸ್'(CEAT Cricket Awards) ಪ್ರಸ್ತುತ ಪಡಿಸಿದ ವರ್ಷದ ಅತ್ಯುತ್ತಮ ಏಕದಿನ ಬ್ಯಾಟರ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಐಪಿಎಲ್ ಟೂರ್ನಿಯಲ್ಲಿ ನಾಯಕನಾಗಿ ತಂಡವನ್ನು 2 ಬಾರಿ ಫೈನಲ್ ತಲುಪಿಸಿದ ಹೆಗ್ಗಳಿಕೆಗೆ ಶ್ರೇಯಸ್ ಅಯ್ಯರ್(Shreyas Iyer) ವರ್ಷದ T20 ನಾಯಕತ್ವ ಪ್ರಶಸ್ತಿಯನ್ನು ಗೆದ್ದರು. ನಾಯಕ ರೋಹಿತ್ ಶರ್ಮ(Rohit Sharma) ವರ್ಷದ ಕ್ರಿಕೆಟಿಗ ಪ್ರಶಸ್ತಿಗೆ ಭಾಜನರಾದರು.
35 ವರ್ಷದ ವಿರಾಟ್ ಕೊಹ್ಲಿ ಅವರು ಕಳೆದ ವರ್ಷ ನಡೆದಿದ್ದ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಸಚಿನ್ ತೆಂಡೂಲ್ಕರ್ ಅವರ ಏಕದಿನ ಕ್ರಿಕೆಟ್ನ ಸಾರ್ವಕಾಲಿಕ 49 ಶತಕದ ದಾಖಲೆಯನ್ನು ಮುರಿದಿದ್ದರು. ಈ ಮೂಲಕ ಏಕದಿನ ಕ್ರಿಕೆಟ್ನೂತನ ಸಾಮ್ರಾಟನಾಗಿ ಹೊರಹೊಮ್ಮಿದ್ದರು. ಇದುವರೆಗೆ ಕೊಹ್ಲಿ ಒಟ್ಟು 295 ಏಕದಿನ ಪಂದ್ಯಗಳನ್ನು ಆಡಿದ್ದು 58.18 ರ ಸರಾಸರಿಯಲ್ಲಿ ಬ್ಯಾಟ್ ಬೀಸಿ 13906 ರನ್ ಗಳಿಸಿದ್ದಾರೆ. ಇದರಲ್ಲಿ 50 ಶತಕ ಮತ್ತು 72 ಅರ್ಧಶತಕ ಒಳಗೊಂಡಿದೆ. ಬೌಲಿಂಗ್ನಲ್ಲೂ 5 ವಿಕೆಟ್ ಪಡೆದಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ ಬಳಿಕ ಕೊಹ್ಲಿ ಭಾರತ ತೊರೆದು ಕುಟುಂಬ ಸಮೇತರಾಗಿ ಲಂಡನ್ನಲ್ಲಿ ನೆಲೆಸಲಿದ್ದಾರೆ ಎಂಬ ಮಾತುಗಳು ಈಗಾಗಲೇ ಕೇಳಿ ಬಂದಿವೆ. ಅಭಿಮಾನಿಗಳ ಜಂಜಾಟದಿಂದ ತಪ್ಪಿಸಿಕೊಂಡು ಸಾಮಾನ್ಯರಂತೆ ಜೀವಿಸಲು ಇಷ್ಟ ಪಡುತ್ತಿರುವ ಕೊಹ್ಲಿ ಮುಂದಿನ ದಿನದಲ್ಲಿ ಲಂಡನ್ನಲ್ಲಿಯೇ ನೆಲೆಸುವ ಸಾಧ್ಯತೆ ಇದೆ ಎಂದು ಕೆಲ ಮೂಲಗಳು ತಿಳಿಸಿವೆ.
ಹಿಂದೂಸ್ತಾನ್ ಟೈಮ್ಸ್ ವರದಿ ಪ್ರಕಾರ, ಅನುಷ್ಕಾ ಮತ್ತು ವಿರಾಟ್ ಯುಕೆ ಮೂಲದ ಕಂಪನಿಯ ನಿರ್ದೇಶಕರಾಗಿದ್ದಾರೆ. ಯುಕೆ ಸರ್ಕಾರದ ಫೈಂಡ್ ಅಂಡ್ ಅಪ್ಡೇಟ್ ಕಂಪನಿಯ ಮಾಹಿತಿ ಸೇವೆಯ ಪ್ರಕಾರ, ದಂಪತಿಗಳು ಮ್ಯಾಜಿಕ್ ಲ್ಯಾಂಪ್ನ ಮೂವರು ನಿರ್ದೇಶಕರಲ್ಲಿ ಇಬ್ಬರು. ಇದು ಆಗಸ್ಟ್ 1, 2022 ರಂದು ಆರಂಭಗೊಂಡ ಸಲಹಾ ಸಂಸ್ಥೆಯಾಗಿದೆ. ಕಂಪನಿಯ ಅಧಿಕೃತ ಕಚೇರಿ ವಿಳಾಸವು ಯುಕೆಯ ವೆಸ್ಟ್ ಯಾರ್ಕ್ಶೈರ್ನಲ್ಲಿದೆ.
ಇದನ್ನೂ ಓದಿ
ಶ್ರೇಯಸ್ ಅಯ್ಯರ್ ಅವರು ಐಪಿಎಲ್ನಲ್ಲಿ ಡೆಲ್ಲಿ ತಂಡದ ನಾಯಕನಾಗಿ ತಂಡವನ್ನು ಒಮ್ಮೆ ಫೈನಲ್ ತಲುಪಿಸಿದ್ದರು. ಅಲ್ಲಿ ಮುಂಬೈ ವಿರುದ್ಧ ತಂಡ ಸೋಲು ಕಂಡು ರನ್ನರ್ ಅಪ್ ಪ್ರಶಸ್ತಿ ಪಡೆದಿತ್ತು. ಈ ಬಾರಿಯ ಆವೃತ್ತಿಯಲ್ಲಿ ಕೆಕೆಆರ್ ತಂಡದ ನಾಯಕನಾಗಿ ಟ್ರೋಫಿ ಗೆದ್ದ ಸಾಧನೆ ಮಾಡಿದ್ದರು. ಹೀಗಾಗಿ ಅವರಿಗೆ ಸಿಯೆಟ್ ಅವಾರ್ಡ್ಸ್ನಲ್ಲಿ ವರ್ಷದ T20 ನಾಯಕತ್ವ ಪ್ರಶಸ್ತಿ ನೀಡಲಾಯಿತು.
ಅಯ್ಯರ್ ಇದುವೆರೆಗೆ 115 ಐಪಿಎಲ್ ಪಂದ್ಯವನ್ನಾಡಿ 3127 ರನ್ ಬಾರಿಸಿದ್ದಾರೆ. ಇದರಲ್ಲಿ 21 ಅರ್ಧಶತಕ ಒಳಗೊಂಡಿದೆ. 96 ಗರಿಷ್ಠ ವೈಯಕ್ತಿ ಮೊತ್ತವಾಗಿದೆ. ಭಾರತ ತಂಡದ ಪರ 51 ಟಿ20, 62 ಏಕದಿನ ಮತ್ತು 14 ಟೆಸ್ಟ್ ಪಂದ್ಯಗಳನ್ನಾಡಿ ಒಟ್ಟು 4,336 ರನ್ ಗಳಿಸಿದ್ದಾರೆ. ಟೆಸ್ಟ್ನಲ್ಲಿ 1, ಏಕದಿನದಲ್ಲಿ 5 ಶತಕ ಬಾರಿಸಿದ್ದಾರೆ.