ಪೇಶಾವರ: ಅಫಘಾನಿಸ್ತಾನ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಏಷ್ಯಾ ಕಪ್ ಕ್ರಿಕೆಟ್ ಪಂದ್ಯದ ವೇಳೆ ನಡೆದ ಅನಾಹುತಗಳಿಗೆ ಲೆಕ್ಕವಿಲ್ಲ. ಉಭಯ ತಂಡಗಳ ಅಭಿಮಾನಿಗಳ ಅತಿರೇಕದ ಸಂಭ್ರಮಕ್ಕೆ ಒಂದು ಕಡೆ ಶಾರ್ಜಾ ಕ್ರಿಕೆಟ್ ಸ್ಟೇಡಿಯಮ್‌ನ ಪ್ರೇಕ್ಷಕರ ಗ್ಯಾಲರಿ ಪುಡಿಯಾಗಿದ್ದ, ಅತ್ತ ಪಾಕಿಸ್ತಾನದಲ್ಲಿ ಅಭಿಮಾನಿಗಳು ಗುಂಡು ಹಾರಿಸಿ ಸಂಭ್ರಮಿಸಿದ ಕಾರಣ ಇಬ್ಬರ ಪ್ರಾಣ ಹೋಗಿದೆ.
ರೋಚಕವಾಗಿ ನಡೆದ ಪಂದ್ಯದಲ್ಲಿ ಅಫಘಾನಿಸ್ತಾನ ತಂಡದ ವಿರುದ್ಧ ಪಾಕಿಸ್ತಾನ ೧ ವಿಕೆಟ್‌ಗಳ ಜಯ ಸಾಧಿಸಿತ್ತು. ಅದರಲ್ಲೂ ಕೊನೇ ಓವರ್‌ನ ಮೊದಲೆರಡು ಎಸೆತಗಳಲ್ಲಿ ಪಾಕಿಸ್ತಾನ ತಂಡ ಬೌಲರ್ ನಾಸಿಮ್ ಶಾ, ಸತತ ಎರಡು ಸಿಕ್ಸರ್‌ಗಳನ್ನು ಬಾರಿಸಿ ಗೆಲುವು ತಂದುಕೊಟ್ಟಿದ್ದರು. ಕೊನೇ ತನಕವೂ ಹೋರಾಟ ನಡೆಸಿದ ಅಫಘಾನಿಸ್ತಾನ ತಂಡದ ಆಟಗಾರರು ಸೋಲಿನ ನಿರಾಸೆಯಲ್ಲಿ ಕಣ್ಣೀರು ಹಾಕಿದ್ದರು.
ಅದಕ್ಕಿಂತ ಮೊದಲು ಆಟಗಾರರು ಮೈದಾನದಲ್ಲಿ ಪರಸ್ಪರ ಕೈಮಿಲಾಯಿಸಿ, ಗುರಾಯಿಸಿದ್ದರು. ಸ್ಟೇಡಿಯಮ್‌ನಲ್ಲಿ ಕುಳಿತಿದ್ದ ಎರಡೂ ತಂಡಗಳ ಅಭಿಮಾನಿಗಳು ನಿಂದಿಸಿಕೊಂಡಿದ್ದರು. ಪಂದ್ಯದ ಫಲಿತಾಂಶ ಪ್ರಕಟಗೊಳುತ್ತಿದ್ದಂತೆ ರೊಚ್ಚಿಗೆದ್ದ ಅಫಘಾನಿಸ್ತಾನ ತಂಡದ ಅಭಿಮಾನಿಗಳು ಗ್ಯಾಲರಿಯಲ್ಲಿದ್ದ ಚೇರ್‌ಗಳನ್ನು ಕಿತ್ತು ಪಾಕಿಸ್ತಾನ ತಂಡದ ಅಭಿಮಾನಿಗಳಿಗೆ ಥಳಿಸಿದ್ದರು.
ಪೇಶಾವರದಲ್ಲಿ ಗುಂಡಿನ ಸದ್ದು
ಅತ್ತ ಪಾಕಿಸ್ತಾನ ತಂಡ ಪಂದ್ಯದಲ್ಲಿ ಗೆಲುವು ಸಾಧಿಸುತ್ತಿದ್ದಂತೆ ಪೇಶಾವರದ ಕ್ರಿಕೆಟ್ ಅಭಿಮಾನಿಯೊಬ್ಬರು ರೈಫಲ್ ಕೈಗೆತ್ತಿಕೊಂಡು ಬೇಕಾಬಿಟ್ಟಿ ಗುಂಡುಗಳನ್ನು ಹಾರಿಸಿ ಸಂಭ್ರಮಿಸಿದ್ದಾರೆ. ಆ ಗುಂಡುಗಳು ಸಾರ್ವಜನಿಕರಿಗೆ ತಗುಲಿದ್ದು ಇಬ್ಬರು ಮೃತಪಟ್ಟಿದ್ದಾರೆ. ಸುದೇಸ್ ಹಾಗೂ ಖಯ್ಯಮ್ ಎಂಬುವರು ಮೃತಪಟ್ಟಿದ್ದಾರೆ. ಈ ಘಟನೆಯಲ್ಲಿ ಕೆಲವು ಮಹಿಳೆಯರಿಗೂ ಗಾಯಗಳಾಗಿವೆ ಎನ್ನಲಾಗಿದೆ.
ಜಿಯೋ ಟಿವಿ ವರದಿ ಪ್ರಕಾರ ಗುಂಡು ಹಾರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ೪೧ ಮಂದಿಯನ್ನು ಸ್ಥಳೀಯ ಪೊಲೀಸರು ಬಂಧಿಸಿದ್ದಾರೆ.
ಇನ್ನೂ ಇದೆ | Asia Cup | ಮೈದಾನದಲ್ಲಿ ಪಾಕ್- ಆಪ್ಘನ್ ಆಟಗಾರರ ಫೈಟ್, ಸ್ಟೇಡಿಯಮ್‌ನಲ್ಲಿ ಅಭಿಮಾನಿಗಳ ದಾಂಧಲೆ