ಡಬ್ಲಿನ್: ಐರ್ಲೆಂಡ್ ವಿರುದ್ಧದ ಟಿ೨೦ ಸರಣಿಯ ಎರಡನೇ ಪಂದ್ಯದಲ್ಲಿ ಅಮೋಘ ಶತಕ (Century ) ಬಾರಿಸಿದ ದೀಪಕ್ ಹೂಡಾ ಬಗ್ಗೆ ಹಿರಿಯ ಕ್ರಿಕೆಟಿಗರನೇಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
೫೫ ಎಸೆತಗಳಲ್ಲಿ ಮೂರಂಕಿ ತಲುಪಿದ್ದ ಅವರು ೫೭ ಎಸೆತಗಳಲ್ಲಿ ೧೦೪ ರನ್ ಬಾರಿಸುವ ಮೂಲಕ ಭಾರತ ತಂಡ ಬೃಹತ್ ಮೊತ್ತ ಪೇರಿಸಲು ನೆರವಾಗಿದ್ದರು. ಅವರು ಹಾಗೂ ಸಂಜು ಸ್ಯಾಮ್ಸನ್ (೭೭) ಕಟ್ಟಿದ ೧೭೬ ರನ್‌ಗಳ ದಾಖಲೆಯ ಜತೆಯಾಟದ ನೆರವಿನಿಂದ ಭಾರತ ಗೆಲುವು ಸಾಧಿಸಿತ್ತು. ಏತನ್ಮಧ್ಯೆ, ದೀಪಕ್ ಹೂಡಾ ಟಿ೨೦ ಮಾದರಿಯಲ್ಲಿ ಶತಕ ಬಾರಿಸಿ ಭಾರತದ ನಾಲ್ಕನೇ ಆಟಗಾರ ಎನಿಕೊಂಡರು. ರೋಹಿತ್ ಶರ್ಮ, ಸುರೇಶ್ ರೈನಾ, ಕೆ. ಎಲ್. ರಾಹುಲ್ ಇನ್ನುಳಿದ ಶತಕ ವೀರರು.
ಭಾರತ ತಂಡದ ಮಾಜಿ ಕ್ರಿಕೆಟಿಗ ಸಂಜಯ್ ಮಾಂಜ್ರೇಕರ್ ಅವರು ದೀಪಕ್ ಹೂಡಾ ಅವರನ್ನು ಬೌಲರ್‌ಗಳಿಗೆ ದುಸ್ವಪ್ನ ಎಂದು ಹೊಗಳಿ ಟ್ವೀಟ್ ಮಾಡಿದ್ದಾರೆ. ದೊಡ್ಡ ದೊಡ್ಡ ಹೊಡೆತಗಳನ್ನು ಹೊಡೆಯುವ ಅವರ ಸಾಮರ್ಥ್ಯ ಅಭೂತಪೂರ್ವವಾದದ್ದು. ಅದರಲ್ಲೂ ವೇಗದ ಬೌಲರ್‌ಗಳನ್ನು ಡಂಡಿಸುವ ರೀತಿಯನ್ನು ಮೆಚ್ಚಲೇಬೇಕು ಎಂದು ಹೇಳಿದ್ದಾರೆ.
ದೀಪಕ್ ಹೂಡಾ ಹಾಗೂ ಸಂಜು ಸ್ಯಾಮ್ಸನ್ ಅವರ ಬ್ಯಾಟಿಂಗ್ ಅದ್ಭುತವಾಗಿತ್ತು. ತಮಗೆ ದೊರೆತ ಅವಕಾಶವನ್ನು ದೀಪಕ್ ಸಮರ್ಥವಾಗಿ ಬಳಸಿಕೊಂಡಿದ್ದಾರೆ. ಅವರ ಇನಿಂಗ್ಸ್ ಅತ್ಯಂತ ಪ್ರಭಾವಶಾಲಿಯಾಗಿತ್ತು ಎಂದು ಮಾಜಿ ಆಲ್‌ರೌಂಡರ್ ಯುವರಾಜ್ ಸಿಂಗ್ ಹೇಳಿದ್ದಾರೆ.
ಮಾಜಿ ಆಟಗಾರ ಮದನ್ ಲಾಲ್ ಟ್ವೀಟ್ ಮಾಡಿ, ದೀಪಕ್ ಹೂಡಾ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ೨೦ ವಿಶ್ವ ಕಪ್‌ನಲ್ಲಿ ಆಡಲಿರುವ ಭಾರತ ತಂಡದಲ್ಲಿ ಸ್ಥಾನ ಪಡೆಯುವುದು ಖಚಿತ ಎಂದಿದ್ದಾರೆ.
ಐಪಿಎಲ್ ವೇಳೆ ದೀಪಕ್ ಹೂಡಾ ಶತಕ ಬಾರಿಸುವರು ಎಂದು ಹೇಳಿದ್ದೆ. ಆದರೆ, ಅವರು ಭಾರತ ತಂಡದ ಪರ ಶತಕ ಬಾರಿಸಿದರು ಎಂದು ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್ ಹೇಳಿದ್ದಾರೆ.
ಇದನ್ನೂ ಓದಿ: IND-IRE T20 | ಹೂಡ-ಹಾರ್ದಿಕ್ ಬ್ಯಾಟಿಂಗ್ ಅಬ್ಬರ, ಐರ್ಲೆಂಡ್ ವಿರುದ್ಧದ ಟಿ20 ಪಂದ್ಯದಲ್ಲಿ ಭಾರತಕ್ಕೆ ಗೆಲುವು