ನವ ದೆಹಲಿ: ರಾಷ್ಟ್ರೀಯ ಸೈಕ್ಲಿಂಗ್ ಸ್ಪ್ರಿಂಟ್ ಟೀಮ್‌ನ ಮುಖ್ಯ ಕೋಚ್ ಆರ್.ಕೆ.ಶರ್ಮಾ ತನ್ನೊಂದಿಗೆ ಅಸಭ್ಯವಾಗಿ ವರ್ತಿಸಿದರು ಎಂದು ಆರೋಪ ಮಾಡಿರುವ ಮಹಿಳಾ ಸೈಕ್ಲಿಸ್ಟ್ ಮಯೂರಿ ಎಂಬುವರು ಇನ್ನೊಂದು ವಿಷಯವನ್ನೂ ಬಹಿರಂಗಪಡಿಸಿದ್ದಾರೆ. ಸ್ಲೊವೇನಿಯಾದಲ್ಲಿ ಆರ್.ಕೆ.ಶರ್ಮಾ ಅವರೊಂದಿಗೆ ಒಂದೇ ಕೋಣೆಯಲ್ಲಿ ಉಳಿಯಲು ನನಗೆ ಹೇಳಲಾಗಿತ್ತು ಎಂದು ಹೇಳಿದ್ದಾರೆ. ದೆಹಲಿಯಲ್ಲಿ ಜೂ.18ರಿಂದ 22ರವರೆಗೆ ನಡೆಯಲಿರುವ ಏಷ್ಯನ್ ಟ್ರ್ಯಾಕ್ ಸೈಕ್ಲಿಂಗ್ ಚಾಂಪಿಯನ್‌ಶಿಪ್‌ಗಾಗಿ ಸ್ಲೋವೇನಿಯಾದಲ್ಲಿ ಪೂರ್ವಭಾವಿ ತರಬೇತಿ ಕ್ಯಾಂಪ್ ನಡೆಯುತ್ತಿದೆ. ಈ ಶಿಬಿರಕ್ಕೆ ಹೋದವರಿಗೆ ಅಲ್ಲಿ ಉಳಿಯಲು ರೂಂಗಳನ್ನು ಸೈಕ್ಲಿಂಗ್ ಫೆಡರೇಶನ್ ಆಫ್ ಇಂಡಿಯಾ ಬುಕ್ ಮಾಡಿತ್ತು. ಆದರೆ ಮಯೂರಿಗೆ ಆರ್.ಕೆ.ಶರ್ಮಾರೊಂದಿಗೆ ಒಂದೇ ಕೋಣೆಯಲ್ಲಿ ಇರುವಂತೆ ತಿಳಿಸಲಾಗಿತ್ತು.
ಮಹಿಳಾ ಸೈಕ್ಲಿಸ್ಟ್‌ಗೆ ಹೀಗೆ ಪುರುಷ ಕೋಚ್ ಜತೆ ಒಂದೇ ಕೋಣೆಯಲ್ಲಿ ಉಳಿಯುವಂತೆ ಹೇಳಿದ್ದೇಕೆ ಎಂದು ರಾಷ್ಟ್ರೀಯ ಮಾಧ್ಯಮ ಟೈಮ್ಸ್ ನೌ ಕೇಳಿದ ಪ್ರಶ್ನೆಗೆ, ಸೈಕ್ಲಿಂಗ್ ಫೆಡರೇಶನ್ ಆಫ್ ಇಂಡಿಯಾದ ಪ್ರಧಾನ ಕಾರ್ಯದರ್ಶಿ ಮಣಿಂದರ್ ಪಾಲ್ ಸಿಂಗ್ ಅಸಂಬದ್ಧ, ವಿಚಿತ್ರ ವಿವರಣೆ ನೀಡಿದ್ದಾರೆ. ʼಮಹಿಳಾ ಕೋಚ್ ಒಬ್ಬರು ಈ ತರಬೇತಿ ಶಿಬಿರಕ್ಕೆ ಹೋಗುವವರಿದ್ದರು. ಆದರೆ ಕೊನೇ ಕ್ಷಣದಲ್ಲಿ ಅವರು ತಾವು ಹೋಗಲು ಆಗುತ್ತಿಲ್ಲ ಎಂದು ಹೇಳಿದರು. ಬಳಿಕ ಆರ್.ಕೆ.ಶರ್ಮಾ ಅಲ್ಲಿಗೆ ಹೋಗಬೇಕಾಯಿತು. ಆದರೆ ಅಷ್ಟರಲ್ಲಾಗಲೇ ಕ್ಯಾಂಪ್‌ಗೆ ಹೋಗುತ್ತಿರುವವರಿಗಾಗಿ ರೂಂ ಬುಕ್ ಮಾಡಿಯಾಗಿತ್ತು. ಬದಲಾವಣೆ ಮಾಡುವಂತೆ ಇರಲಿಲ್ಲ. ಹೀಗಾಗಿ ಮಯೂರಿಗೆ-ಕೋಚ್ ಆರ್.ಕೆ.ಶರ್ಮಾ ಅವರೊಟ್ಟಿಗೆ ಇರಲು ಹೇಳಲಾಯಿತುʼ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ʼಕೋಚ್‌ನೊಟ್ಟಿಗೆ ರೂಮ್ ಹಂಚಿಕೊಳ್ಳಲು ತನಗೆ ಯಾವುದೇ ಸಮಸ್ಯೆಯಿಲ್ಲ ಎಂದೇ ಮೊದಲು ಮಯೂರಿ ಹೇಳಿದ್ದರು. ಆದರೆ ನಂತರ ಅವರು ಅನುಚಿತವಾಗಿ ವರ್ತಿಸಿದರು ಎಂದು ದೂರು ನೀಡಿದ್ದಾರೆʼ ಎಂದೂ ಮಣಿಂದರ್ ಪಾಲ್ ಸಿಂಗ್ ತಿಳಿಸಿದ್ದಾರೆ.
ಮಯೂರಿ ಮಾಡಿದ ಆರೋಪದ ವಿಚಾರದಲ್ಲಿ ತನಿಖೆ ನಡೆಸಲು ಭಾರತೀಯ ಕ್ರೀಡಾ ಪ್ರಾಧಿಕಾರ ಮತ್ತು ಸೈಕ್ಲಿಂಗ್ ಫೆಡರೇಶನ್ ಆಫ್ ಇಂಡಿಯಾ ಪ್ರತ್ಯೇಕ ಸಮಿತಿಯನ್ನು ರಚಿಸಿವೆ. ಆರ್.ಕೆ.ಶರ್ಮಾ ಜೂ.14ಕ್ಕೆ ಬೆಂಗಳೂರಿಗೆ ಬರಲಿದ್ದಾರೆ ಎಂದೂ ಸಿಎಫ್‌ಐ ತಿಳಿಸಿದೆ. ಇನ್ನು ಎರಡೂ ಸಮಿತಿಗಳು ಪ್ರತ್ಯೇಕವಾಗಿಯೇ ವಿಚಾರಣೆ ನಡೆಸಲಿವೆ. ಆರ್.ಕೆ.ಶರ್ಮಾರನ್ನು ವಿಚಾರಣೆಗೆ ಒಳಪಡಿಸಲಿವೆ. ಭಾರತೀಯ ಕ್ರೀಡಾ ಪ್ರಾಧಿಕಾರದ ತನಿಖೆಗೂ ಸಂಪೂರ್ಣ ಸಹಕಾರ ನೀಡುತ್ತೇವೆ ಎಂದು ಸಿಎಫ್‌ಐ ತಿಳಿಸಿದೆ.
ಇದನ್ನೂ ಓದಿ: ಶಿಬಿರದಲ್ಲಿ ಅನುಚಿತವಾಗಿ ವರ್ತಿಸಿದರು; ಮುಖ್ಯ ಕೋಚ್ ವಿರುದ್ಧ ದೂರು ನೀಡಿದ ಪ್ರಮುಖ ಮಹಿಳಾ ಸೈಕ್ಲಿಸ್ಟ್