ಬೆಂಗಳೂರು : ನಮ್ಮ ದಾಂಪತ್ಯ ಜೀವನ ಚೆನ್ನಾಗಿಯೇ ಇದೆ. ಏನೇನೋ ಅಪಾರ್ಥ ಮಾಡಿಕೊಂಡು ವದಂತಿಗಳನ್ನು ಹಬ್ಬಿಸಬೇಡಿ ಎಂದು ಭಾರತ ಕ್ರಿಕೆಟ್ ತಂಡದ ಸ್ಪಿನ್ ಬೌಲರ್ ಯಜ್ವೇಂದ್ರ ಚಹಲ್ (Yuzvendra Chahal) ಮನವಿ ಮಾಡಿಕೊಂಡಿದ್ದಾರೆ. ಗುರುವಾರ ಯಜ್ವೇಂದ್ರ ಚಹಲ್ ಹಾಗೂ ಧನಶ್ರೀ ದಂಪತಿಯ ದಾಂಪಂತ್ಯದಲ್ಲಿ ಒಡಕು ಮೂಡಿದೆ ಎಂಬುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಗಾಸಿಪ್‌ಗಳು ಹರಡಿದ್ದವು. ಈ ಹಿನ್ನೆಲೆಯಲ್ಲಿ ಅವರು ಸಂಜೆಯ ವೇಳೆಗೆ ಅಪಾರ್ಥ ಮಾಡಿಕೊಂಡು ಸುದ್ದಿ ಹಬ್ಬಿಸದಂತೆ ಮನವಿ ಮಾಡಿದ್ದಾರೆ.
ಇಷ್ಟಕ್ಕೆಲ್ಲ ಕಾರಣ ಈ ಜೋಡಿಯ ಇನ್‌ಸ್ಟಾಗ್ರಾಮ್ ಪೋಸ್ಟ್. ಧನಶ್ರಿ ವರ್ಮ ಅವರು ತಮ್ಮ ಇನ್‌ಸ್ಟಾಗ್ರಾಮ್ ಪ್ರೊಫೈಲ್‌ನಲ್ಲಿ ಗಂಡನ ಸರ್‌ನೇಮ್ ತೆಗೆದುಹಾಕಿ dhanashree9 ಎಂದು ಬರೆದುಕೊಂಡಿದ್ದರೆ, ಯಜ್ವೇಂದ್ರ ಚಹಲ್, ಹೊಸ ಜೀವನ ಆರಂಭ ಎಂದು ಬರೆದುಕೊಂಡಿದ್ದರು. ಇಬ್ಬರ ಪೋಸ್ಟ್‌ಗಳು ಪರಸ್ಪರ ತಾಳೆಯಾಗಿದ್ದನ್ನು ಗಮನಿಸಿದ್ದ ಕೆಲವರು ದಾಂಪತ್ಯ ಜೀವನ ಮುಗಿಸಲು ಮುಂದಾಗಿದ್ದಾರೆ ಎಂದು ಸುದ್ದಿಯಬ್ಬಿಸಿದ್ದರು. ತಕ್ಷಣ ಜಾಗೃತರಾದ ಅವರು ದಾಂಪತ್ಯದಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ಬರೆದುಕೊಂಡಿದ್ದಾರೆ.
ಎಲ್ಲರಲ್ಲೂ ನನ್ನದೊಂದು ವಿನಂತಿ. ನಮ್ಮ ಸಂಬಂಧದ ಕುರಿತಾದ ಯಾವುದೇ ವದಂತಿಗಳನ್ನು ನಂಬಬೇಡಿ. ಇದಕ್ಕೆ ಇಲ್ಲಿಯೇ ಅಂತ್ಯಹಾಡಿ,” ಎಂದು ಚಹಲ್ ತಮ್ಮ ಇನ್‌ಸ್ಟಾಗ್ರಾಮ್ ವಾಲ್‌ನಲ್ಲಿ ಬರೆದುಕೊಂಡಿದ್ದಾರೆ.