Site icon Vistara News

Wrestlers Protest: ಬ್ರಿಜ್​ ಭೂಷಣ್ ವಿರುದ್ಧ ಮಂಪರು ಪರೀಕ್ಷೆಯ ಅಸ್ತ್ರ ಪ್ರಯೋಗಿಸಿದ ಕುಸ್ತಿಪಟುಗಳು

wrestlers protest At jantar mantar

ನವದೆಹಲಿ: ಲೈಂಗಿಕ ಕಿರುಕುಳ ಆರೋಪ(Sexual harassment allegations) ಎದುರಿಸುತ್ತಿರುವ ಭಾರತದ ಕುಸ್ತಿ ಫೆಡರೇಷನ್ (ಡಬ್ಲ್ಯುಎಫ್‍ಐ) ಅಧ್ಯಕ್ಷ ಬ್ರಿಜ್​ ಭೂಷಣ್ ಶರಣ್ ಸಿಂಗ್(Brij Bhushan Sharan Singh)​ ಅವರನ್ನು ಬಂಧಿಸುವಂತೆ ಒತ್ತಾಯಿಸಿ, ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ(Wrestlers Protest) ನಡೆಸುತ್ತಿರುವ ಕುಸ್ತಿಪಟುಗಳು ಇದೀಗ ಹೊಸ ಅಸ್ತ್ರವೊಂದನ್ನು ಪ್ರಯೋಗಿಸಲು ಮುಂದಾಗಿದ್ದಾರೆ. ಬ್ರಿಜ್‌ಭೂಷಣ್‌ ಅವರನ್ನು ಮಂಪರು ಪರೀಕ್ಷೆಗೆ(Narco Test) ಹಾಗೂ ಸುಳ್ಳು ಪತ್ತೆ ಪರೀಕ್ಷೆಗೆ ಒಳಪಡುವಂತೆ ಸವಾಲು ಹಾಕಿದ್ದಾರೆ.

ಕುಸ್ತಿಪಟುಗಳ ಪ್ರತಿಭಟನೆ 16 ದಿನ ಕಂಡಿದ್ದು, ಸದ್ಯ ಎಲ್ಲರೂ ಕಪ್ಪುಪಟ್ಟಿ ಧರಿಸಲು ನಿರ್ಧರಿಸಿದ್ದಾರೆ. ಇದೇ ವೇಳೆ ಮಾತನಾಡಿರುವ ಕುಸ್ತಿ ಪಟುಗಳು ಬ್ರಿಜ್‌ಭೂಷಣ್‌ಗೆ ಸವಾಲೊಂದನ್ನು ಹಾಕಿದ್ದಾರೆ. “ನೀವು ತಪ್ಪಿತಸ್ಥರಲ್ಲ ಎಂಬ ವಿಶ್ವಾಸವಿದ್ದರೆ ಮಂಪರು ಪರೀಕ್ಷೆಗೆ ಒಳಗಾಗಿ, ಸುಳ್ಳು ಪತ್ತೆ ಪರೀಕ್ಷೆಯೂ ನಡೆಯಲಿ. ನಾವು ಕೂಡ ಈ ಎಲ್ಲ ಪರೀಕ್ಷೆಗಳಿಗೆ ಒಳಪಡಲು ಸಿದ್ಧರಿದ್ದೇವೆ. ಸತ್ಯ ಏನೆಂದು ಜಗತ್ತಿಗೆ ತಿಳಿಯಬೇಕಿದೆ” ಎಂದು ಪತ್ರಿಕಾಗೋಷ್ಠಿಯಲ್ಲಿ ಸಾಕ್ಷಿ ಮಲಿಕ್‌ ಅವರು ಬ್ರಿಜ್‌ಭೂಷಣ್‌ಗೆ ಸವಾಲು ಹಾಕಿದ್ದಾರೆ.

ಭಾರತೀಯ ಒಲಿಂಪಿಕ್‌ ಅಸೋಸಿಯೇಶನ್‌ ಅಡಿಯಲ್ಲಿ ಸ್ಪರ್ಧೆ

ಬ್ರಿಜ್‌ಭೂಷಣ್‌ ಸಿಂಗ್‌ ಅವರು ಸಂಘಟನೆಗಳಲ್ಲಿ ತೊಡಗಿಸಿಕೊಂಡರೆ ನಾವು ಯಾವುದೇ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವುದಿಲ್ಲ. ಎ್ಲಲ ಕೂಟವನ್ನು ನಾವು ವಿರೋಧಿಸುತ್ತೇವೆ ಎಂದು ಕುಸ್ತಿಪಟುಗಳು ಎಚ್ಚರಿಸಿದ್ದಾರೆ. ಎಲ್ಲ ಕುಸ್ತಿ ಸ್ಪರ್ಧೆಗಳು ಭಾರತೀಯ ಒಲಿಂಪಿಕ್‌ ಅಸೋಸಿಯೇಶನ್‌ ತಾತ್ಕಾಲಿಕ ಪ್ಯಾನೆಲ್‌ನಲ್ಲಿ ನಡೆಯಬೇಕು. ಇದರಲ್ಲಿ ಡಬ್ಲ್ಯುಎಫ್‌ಐ ಮುಖ್ಯಸ್ಥರು ಪಾಲ್ಗೊಳ್ಳುವುದನ್ನು ನಾವು ವಿರೋಧಿಸುತ್ತೇವೆ ಎಂದು ಬಜರಂಗ್‌ ಪೂನಿಯ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ Wrestlers Protest: ಬಜರಂಗ ದಳಕ್ಕೆ ಬೆಂಬಲ ಸೂಚಿಸಿದ ಪ್ರತಿಭಟನಾನಿತರ ಕುಸ್ತಿಪಟು ಬಜರಂಗ್‌ ಪೂನಿಯ

ಆರೋಪ ಸಾಬೀತಾದರೆ ನೇಣೀಗೂ ಸಿದ್ಧ

ಕೆಲ ದಿನಗಳ ಹಿಂದಷ್ಟೇ ಬ್ರಿಜ್​ ಭೂಷಣ್​ ಶರಣ್​ ಸಿಂಗ್​ ಅವರು ತಮ್ಮ ವಿರುದ್ಧದ ಆರೋಪ ಸಾಬೀತಾದರೆ ನೇಣು ಹಾಕಿಕೊಳ್ಳುತ್ತೇನೆ ಎಂದು ಹೇಳಿದ್ದರು. ಈ ಸಂಬಂಧ ಬ್ರಿಜ್​ ಭೂಷಣ್ ಅವರು ವಿಡಿಯೊ ಸಂದೇಶ ನೀಡಿದ್ದರು. “ಕುಸ್ತಿ ಪಟುಗಳು ನನ್ನ ವಿರುದ್ಧದ ಮಾಡಿರುವ ಒಂದೇ ಒಂದು ಆರೋಪ ಸಾಬೀತಾದರೂ ನಾನು ನೇಣು ಹಾಕಿಕೊಳ್ಳುತ್ತೇನೆ. ಅರೋಪಕ್ಕೆ ಸಂಬಂಧಿಸಿರುವ ಯಾವುದಾದದರೂ ವಿಡಿಯೋ ಸಾಕ್ಷ್ಯ ಇದ್ದಲ್ಲಿ ಬಿಡುಗಡೆ ಮಾಡಲಿ” ಎಂದು ಕುಸ್ತಿಪಟುಗಳಿಗೆ ಚಾಲೆಂಜ್​ ಮಾಡಿದ್ದರು. ಇದೀಗ ಕುಸ್ತಿಪಟುಗಳು ಕೂಡ ಟಾಂಗ್​ ನೀಡಿದ್ದು ಮಂಪರು ಪರೀಕ್ಷೆಗೆ ಒಳಪಡುವಂತೆ ಸವಾಲು ಹಾಕಿದ್ದಾರೆ.

Exit mobile version