ಮುಂಬಯಿ: ಮುಂದಿನ ವರ್ಷ ಪಾಕಿಸ್ತಾನದ ಆತಿಥ್ಯದಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಗೆ(Champions Trophy 2025) ಪಾಕಿಸ್ತಾನ ಕ್ರಿಕೆಟ್ ಮಂಡಳಿ ಈಗಾಗಲೇ ಬರದಿಂದ ಸಿದ್ಧತೆ ನಡೆಸುತ್ತಿದೆ. ಅಲ್ಲದೆ ಪಂದ್ಯಾವಳಿಯ ಕರುಡು ವೇಳಾಪಟ್ಟಿಯನ್ನು ಕೂಡ ಬಿಡುಗಡೆ ಮಾಡಿದ್ದು ಮಾರ್ಚ್ 1ರಂದು ಲಾಹೋರ್‌ನಲ್ಲಿ ಭಾರತ ಮತ್ತು ಪಾಕ್(Champions Trophy IND vs PAK) ಪಂದ್ಯ ನಡೆಯಲಿದೆ ಎಂದು ಹೇಳಿದೆ. ಆದರೆ, ಬಿಸಿಸಿಐ ಚಾಂಪಿಯನ್ಸ್ ಟ್ರೋಫಿಯನ್ನು ಹೈಬ್ರೀಡ್ ಮಾದರಿಯಲ್ಲಿ ನಡೆಸಲು ಪಿಸಿಬಿಗೆ ಒತ್ತಡ ಹೇರಿದೆ ಎಂದು ವರದಿಯಾಗಿದೆ. ಚಾಂಪಿಯನ್ಸ್ ಟ್ರೋಫಿ(Champions Trophy) ಕ್ರಿಕೆಟ್ ಪಂದ್ಯಾವಳಿ ಫೆಬ್ರವರಿ 19 ರಿಂದ ಮಾರ್ಚ್ 9 ರವರೆಗೆ ಟೂರ್ನಮೆಂಟ್ ನಡೆಯಲಿದೆ.
2014ರಿಂದ ಅಧಿಕಾರದಲ್ಲಿರುವ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ನೆರೆಯ ರಾಷ್ಟ್ರದೊಂದಿಗೆ ಯಾವುದೇ ಸ್ನೇಹಪರ ರೀತಿಯಲ್ಲಿ ಸಂಬಂಧ ಹೊಂದಿಲ್ಲ. ಶತ್ರು ದೇಶದ ವಿರುದ್ದ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಪುಲ್ವಾಮಾ ಮತ್ತು ಉರಿ ದಾಳಿಯ ನಂತರ ಎರಡೂ ದೇಶಗಳ ಸಂಬಂಧ ಹದಗೆಟ್ಟಿದೆ. ಇತ್ತೀಚೆಗೆ ಮುಕ್ತಾಯಗೊಂಡ ಲೋಕ ಸಭಾ ಚುನಾವಣೆಯಲ್ಲಿ ಬಿಜೆಪಿಯು ಎನ್ಡಿಎ ಜತೆ ಮೈತ್ರಿ ಮಾಡಿಕೊಂಡು ಅಧಿಕಾರಕ್ಕೆ ಬಂದಿದ್ದರೂ ಕೂಡ ಈ ಸರ್ಕಾರದ ವಿದೇಶಾಂಗ ನೀತಿ ಬದಲಾಗುವ ಸಾಧ್ಯತೆಗಳು ಇಲ್ಲದ ಕಾರಣ ಚಾಂಪಿಯನ್ಸ್ ಟ್ರೋಫಿಗೆ ಭಾರತ ತಂಡ ಪಾಕಿಸ್ತಾನಕ್ಕೆ ಹೋಗುವುದು ಖಚಿತವಲ್ಲ ಎಂದು ಕ್ರಿಕ್ಬಜ್ ವರದಿ ಮಾಡಿದೆ. ಆದರೆ, ಪಾಕ್ ಕ್ರಿಕೆಟ್ ಮಂಡಳಿ ಮಾತ್ರ ಭಾರತ ಕೂಡ ಪಾಕ್ನಲ್ಲಿಯೇ ಆಡಲಿದೆ ಎಂದು ಬಲವಾಗಿ ನಂಬಿದೆ.
ಭಾರತ ತಂಡ ಪಾಕ್ಗೆ ಪ್ರಯಾಣಿಸುವುದಿಲ್ಲ ಎಂದು ಒತ್ತಿ ಹೇಳುತ್ತಿದ್ದರೂ ಕೂಡ ಪಾಕ್ ಕ್ರಿಕೆಟ್ ಮಂಡಳಿ ಭಾರತದ ಆಗಮನ ಖಚಿತ ಎನ್ನುತ್ತಿದೆ. ಈಗಾಗಲೇ ಪಾಕ್ ಕ್ರಿಕೆಟ್ ಮಂಡಳಿ ಪಂದ್ಯಾವಳಿಗೆ 3 ತಾಣಗಳನ್ನು ಕೂಡ ಪ್ರಕಟಿಸಿದೆ. ಲಾಹೋರ್‌ನಲ್ಲಿ 7, ರಾವಲ್ಪಿಂಡಿಯಲ್ಲಿ 5 ಮತ್ತು ಕರಾಚಿಯಲ್ಲಿ 3 ಪಂದ್ಯಗಳನ್ನು ಆಡಲಾಗುವುದು. ಕರಾಚಿಯಲ್ಲಿ ಉದ್ಘಾಟನಾ ಪಂದ್ಯ ಹಾಗೂ ಒಂದು ಸೆಮಿಫೈನಲ್, ರಾವಲ್ಪಿಂಡಿಯಲ್ಲಿ ಇನ್ನೊಂದು ಸೆಮಿಫೈನಲ್, ಲಾಹೋರ್‌ನಲ್ಲಿ ಫೈನಲ್ ನಡೆಯಲಿದೆ ಎಂದು ತಿಳಿಸಿದೆ.
ಇದನ್ನೂ ಓದಿ Champions Trophy 2025 : ಭಾರತ ತಂಡ ಪಾಕಿಸ್ತಾನಕ್ಕೆ ಬರಲೇಬೇಕು ಹಠ ಹಿಡಿದು ಕುಳಿತಿರುವ ಪಿಸಿಬಿ
ನವೆಂಬರ್ 2008ರ ಮುಂಬೈ ಭಯೋತ್ಪಾದಕ ದಾಳಿಯಲ್ಲಿ 150 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ ನಂತರ ಭಾರತವು ಪಾಕಿಸ್ತಾನದೊಂದಿಗೆ ದ್ವಿಪಕ್ಷೀಯ ಕ್ರಿಕೆಟ್ ಆಡಿಲ್ಲ. ಜೂನ್-ಜುಲೈ 2008 ರಲ್ಲಿ ಏಷ್ಯಾ ಕಪ್ ಸಮಯದಲ್ಲಿ ಭಾರತೀಯ ಕ್ರಿಕೆಟ್ ತಂಡವು ಕೊನೆಯ ಬಾರಿಗೆ ಪಾಕಿಸ್ತಾನಕ್ಕೆ ಪ್ರಯಾಣಿಸಿತ್ತು. ಭಾರತ ತಂಡವು ಪ್ರಯಾಣಿಸಲು ನಿರಾಕರಿಸಿದ ನಂತರ, ಕಳೆದ ವರ್ಷದ ಏಷ್ಯಾಕಪ್ ಅನ್ನು ಹೈಬ್ರಿಡ್ ಮಾದರಿಯಲ್ಲಿ ಆಯೋಜಿಸಲಾಯಿತ್ತು. ಕೇವಲ ನಾಲ್ಕು ಪಂದ್ಯಗಳನ್ನು ಪಾಕಿಸ್ತಾನದಲ್ಲಿ ನಡೆಸಿ ಉಳಿದ ಪಂದ್ಯಗಳು ಶ್ರೀಲಂಕಾದಲ್ಲಿ ನಡೆದಿದ್ದವು. ಭಾರತ ಎಲ್ಲ ಪಂದ್ಯಗಳನ್ನು ಲಂಕಾದಲ್ಲಿ ಆಡಿತ್ತು.
ಅರ್ಹತೆ ಪಡೆದ ತಂಡಗಳು
ಐಸಿಸಿ ನಿಯಮಗಳ ಪ್ರಕಾರ 2023ರ ಸಾಲಿನ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಅಂಕಪಟ್ಟಿಯ ಅಗ್ರ 7ರಲ್ಲಿ ಸ್ಥಾನ ಪಡೆಯುವ ತಂಡಗಳು ಟೂರ್ನಿಗೆ ಅರ್ಹತೆ ಪಡೆದಿದೆ. ಭಾರತ, ಆಸ್ಟ್ರೇಲಿಯಾ, ಪಾಕಿಸ್ತಾನ, ಇಂಗ್ಲೆಂಡ್, ಅಫಘಾನಿಸ್ತಾನ, ದಕ್ಷಿಣ ಆಫ್ರಿಕಾ, ನ್ಯೂಜಿಲ್ಯಾಂಡ್ ಮತ್ತು ಬಾಂಗ್ಲಾದೇಶ ಅರ್ಹತೆ ಪಡೆದ ತಂಡಗಳಾಗಿವೆ.