ಮುಂಬಯಿ: ಪಾಕಿಸ್ತಾನ ಆತೀಥ್ಯದಲ್ಲಿ ಮುಂದಿನ ವರ್ಷ ನಡೆಯುವ ಬಹುನಿರೀಕ್ಷಿತ ಚಾಂಪಿಯನ್ಸ್ ಟ್ರೋಫಿ(Champions Trophy 2025) ಟೂರ್ನಿಯ ತಾತ್ಕಾಲಿಕ ವೇಳಾಪಟ್ಟಿಯೊಂದನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಪ್ರಕಟಿಸಿದೆ. ಅದರಂತೆ ಸಾಂಪ್ರದಾಯಿಕ ಬದ್ಧ ಎದುರಾಳಿಗಳಾದ ಭಾರತ-ಪಾಕಿಸ್ತಾನ(IND vs PAK) ನಡುವಿನ ಪಂದ್ಯ ಮಾರ್ಚ್ ಒಂದರಂದು ಲಾಹೋರ್‌ನಲ್ಲಿ ನಿಗದಿಗೊಳಿಸಿದೆ. ಆದರೆ, ಭಾರತ ತಂಡ ಪಾಕ್ಗೆ ತೆರಳುವ ಬಗ್ಗೆ ಇದುವರೆಗೂ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಪಾಕ್ಗೆ ತೆರಳುವ ಸಾಧ್ಯತೆಯೂ ಇಲ್ಲ.
ಪಾಕಿಸ್ತಾನದ 3 ತಾಣಗಳಲ್ಲಿ ಪಂದ್ಯಾವಳಿ ನಡೆಯಲಿದೆ. ಲಾಹೋರ್‌ನಲ್ಲಿ 7, ರಾವಲ್ಪಿಂಡಿಯಲ್ಲಿ 5 ಮತ್ತು ಕರಾಚಿಯಲ್ಲಿ 3 ಪಂದ್ಯಗಳನ್ನು ಆಡಲಾಗುವುದು. ಕರಾಚಿಯಲ್ಲಿ ಉದ್ಘಾಟನಾ ಪಂದ್ಯ ಹಾಗೂ ಒಂದು ಸೆಮಿಫೈನಲ್, ರಾವಲ್ಪಿಂಡಿಯಲ್ಲಿ ಇನ್ನೊಂದು ಸೆಮಿಫೈನಲ್, ಲಾಹೋರ್‌ನಲ್ಲಿ ಫೈನಲ್ ನಡೆಯಲಿದೆ. ಒಂದು ವೇಳೆ ಭಾರತ ಸೆಮಿಫೈನಲ್ ಪ್ರವೇಶಿಸಿದರೆ ಆ ಪಂದ್ಯವನ್ನು ಲಾಹೋರ್‌ನಲ್ಲಿ ಆಡಲಾಗುವುದು. ಸದ್ಯ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಪಂದ್ಯಾವಳಿ ನಡೆಯುವ ಸ್ಟೇಡಿಯಂನ ಸಿದ್ಧತೆಯಲ್ಲಿ ತೊಡಗಿದೆ. ಕೆಲ ದಿನಗಳ ಹಿಂದೆ ಲಾಹೋರ್ ಸ್ಟೇಡಿಯಂ ಸಿದ್ಧತೆ ನಡೆಸುವ ವಿಡಿಯೊ ವೈರಲ್ ಆಗಿತ್ತು.
ಚಾಂಪಿಯನ್ಸ್ ಟ್ರೋಫಿ 2025 ಫೆಬ್ರವರಿ 19ರಿಂದ ಮಾರ್ಚ್ 9ರ ತನಕ ನಡೆಯಲಿದೆ. ಮಾರ್ಚ್ 9ರಂದು ಫೈನಲ್ ನಡೆಯಲಿದೆ. ಚಾರ್ಚ್ 10 ಮೀಸಲು ದಿನವಾಗಿದೆ.
ಇದನ್ನೂ ಓದಿ Team India: ಭಾರತಕ್ಕೆ ಬಂದಿಳಿದ ಟೀಮ್ ಇಂಡಿಯಾ; ವಿಶ್ವಕಪ್ ಹೀರೋಗಳಿಗೆ ದಿಲ್ಲಿಯಲ್ಲಿ ಭರ್ಜರಿ ಸ್ವಾಗತ
ನವೆಂಬರ್ 2008ರ ಮುಂಬೈ ಭಯೋತ್ಪಾದಕ ದಾಳಿಯಲ್ಲಿ 150 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ ನಂತರ ಭಾರತವು ಪಾಕಿಸ್ತಾನದೊಂದಿಗೆ ದ್ವಿಪಕ್ಷೀಯ ಕ್ರಿಕೆಟ್ ಆಡಿಲ್ಲ. ಜೂನ್-ಜುಲೈ 2008 ರಲ್ಲಿ ಏಷ್ಯಾ ಕಪ್ ಸಮಯದಲ್ಲಿ ಭಾರತೀಯ ಕ್ರಿಕೆಟ್ ತಂಡವು ಕೊನೆಯ ಬಾರಿಗೆ ಪಾಕಿಸ್ತಾನಕ್ಕೆ ಪ್ರಯಾಣಿಸಿತ್ತು. ಭಾರತ ತಂಡವು ಪ್ರಯಾಣಿಸಲು ನಿರಾಕರಿಸಿದ ನಂತರ, ಕಳೆದ ವರ್ಷದ ಏಷ್ಯಾಕಪ್ ಅನ್ನು ಹೈಬ್ರಿಡ್ ಮಾದರಿಯಲ್ಲಿ ಆಯೋಜಿಸಲಾಯಿತ್ತು. ಕೇವಲ ನಾಲ್ಕು ಪಂದ್ಯಗಳನ್ನು ಪಾಕಿಸ್ತಾನದಲ್ಲಿ ನಡೆಸಿ ಉಳಿದ ಪಂದ್ಯಗಳು ಶ್ರೀಲಂಕಾದಲ್ಲಿ ನಡೆದಿದ್ದವು. ಭಾರತ ಎಲ್ಲ ಪಂದ್ಯಗಳನ್ನು ಲಂಕಾದಲ್ಲಿ ಆಡಿತ್ತು.
ಚಾಂಪಿಯನ್ಸ್ ಟ್ರೋಫಿಯ ಯಶಸ್ಸಿಗೆ ಪಿಸಿಬಿ ಬದ್ಧವಾಗಿದ್ದರೂ, ಭದ್ರತಾ ಕಾರಣಗಳಿಂದಾಗಿ ಭಾರತವು ಭಾಗವಹಿಸದಿದ್ದರೆ, ಆಗ ಏಷ್ಯಾ ಕಪ್ನಂತೆ ಹೈಬ್ರಿಡ್ ಮಾದರಿಯ ಮೊರೆ ಹೋಗಬೇಕಿದೆ. ಆದರೆ ಸ್ವತಂತ್ರ ಏಜೆನ್ಸಿಯೊಂದಿಗೆ ಸಮಾಲೋಚಿಸಿ ಸಮಗ್ರ ಭದ್ರತಾ ಮೌಲ್ಯಮಾಪನವನ್ನು ನಡೆಸಿ ಪಾಕಿಸ್ತಾನದಲ್ಲಿಯೇ ಟೂರ್ನಿ ನಡೆಸಿ ಎಂದು ಪಿಸಿಬಿ ಹೇಳುವ ಸಾಧ್ಯತೆಗಳಿವೆ. ಐಸಿಸಿ ಈ ವಿನಂತಿಯನ್ನು ಒಪ್ಪಿಕೊಂಡಿದೆ ಎಂದು ಇತ್ತೀಚಿನ ವರದಿಗಳು ಹೇಳಿವೆ. ಭಾರತ ಪಾಕ್ನಲ್ಲಿ ಆಡಲಿದೆಯಾ ಅಥವಾ ಬಿಸಿಸಿಐ ಒತ್ತಾಯಕ್ಕೆ ಮಣಿದು ಟೂರ್ನಿ ಪಾಕ್ ನಿಂದ ಶಿಫ್ಟ್ ಆಗಲಿದೆಯಾ ಎನ್ನುವುದನ್ನು ಕಾದು ನೋಡಬೇಕಿದೆ.
ಅರ್ಹತೆ ಪಡೆದ ತಂಡಗಳು
ಐಸಿಸಿ ನಿಯಮಗಳ ಪ್ರಕಾರ 2023ರ ಸಾಲಿನ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಅಂಕಪಟ್ಟಿಯ ಅಗ್ರ 7ರಲ್ಲಿ ಸ್ಥಾನ ಪಡೆಯುವ ತಂಡಗಳು ಟೂರ್ನಿಗೆ ಅರ್ಹತೆ ಪಡೆದಿದೆ. ಭಾರತ, ಆಸ್ಟ್ರೇಲಿಯಾ, ಪಾಕಿಸ್ತಾನ, ಇಂಗ್ಲೆಂಡ್, ಅಫಘಾನಿಸ್ತಾನ, ದಕ್ಷಿಣ ಆಫ್ರಿಕಾ, ನ್ಯೂಜಿಲ್ಯಾಂಡ್ ಮತ್ತು ಬಾಂಗ್ಲಾದೇಶ ಅರ್ಹತೆ ಪಡೆದ ತಂಡಗಳಾಗಿವೆ.