Site icon Vistara News

Champions Trophy 2025: ಚಾಂಪಿಯನ್ಸ್ ಟ್ರೋಫಿಗೆ ಸ್ಥಳ ನಿಗದಿಪಡಿಸಿದ ಪಾಕಿಸ್ತಾನ

Champions Trophy 2025

ಕರಾಚಿ: ಮುಂದಿನ ವರ್ಷ ಪಾಕಿಸ್ತಾನದ ಆತಿಥ್ಯದಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಗೆ(Champions Trophy 2025) ಪಾಕಿಸ್ತಾನ ಕ್ರಿಕೆಟ್ ಮಂಡಳಿಯು(PCB) ಸ್ಥಳ ನಿಗದಿಪಡಿಸಿದೆ. ಕರಾಚಿ, ಲಾಹೋರ್ ಮತ್ತು ರಾವಲ್ಪಿಂಡಿಯನ್ನು ಆಯ್ಕೆ ಮಾಡಿಕೊಂಡಿದೆ. ಜತೆಗೆ ಭಾರತದ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳಲು ‘ಹೈಬ್ರಿಡ್ ಮಾದರಿ’ಯ ಊಹಾಪೋಹದ ಹೊರತಾಗಿಯೂ ಪಂದ್ಯಾವಳಿ ಸಂಪೂರ್ಣವಾಗಿ ಪಾಕ್​ನಲ್ಲಿಯೇ ನಡೆಯಲಿದೆ ಎಂಬ ವಿಶ್ವಾಸ ಕೂಡ ವ್ಯಕ್ತಪಡಿಸಿದೆ. 2017 ರಲ್ಲಿ ಇಂಗ್ಲೆಂಡ್‌ನಲ್ಲಿ ಕೊನೆಯ ಬಾರಿಗೆ ನಡೆದಿದ್ದ ಚಾಂಪಿಯನ್ಸ್ ಟ್ರೋಫಿ ಮುಂದಿನ ವರ್ಷ ಫೆಬ್ರವರಿ-ಮಾರ್ಚ್‌ನಲ್ಲಿ ನಡೆಯುವ ನಿರೀಕ್ಷೆ ಇದೆ.

“ಐಸಿಸಿ ಚಾಂಪಿಯನ್ಸ್ ಟ್ರೋಫಿಗಾಗಿ ನಾವು ಪಾಕಿಸ್ತಾನದಲ್ಲಿ ಪಂದ್ಯಗಳ ವೇಳಾಪಟ್ಟಿಯನ್ನು ಐಸಿಸಿಗೆ ಕಳುಹಿಸಿದ್ದೇವೆ” ಎಂದು ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಸೋಮವಾರ ಲಾಹೋರ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಐಸಿಸಿಯ ಭದ್ರತಾ ತಂಡವು ಪಾಕಿಸ್ತಾನಕ್ಕೆ ಬಂದು ನಮ್ಮ ಜತೆ ಸಭೆ ನಡೆಸಿದೆ. ಈ ಸಭೆ ಉತ್ತಮವಾಗಿತ್ತು.ಅವರಿಗೆ ಇಲ್ಲಿನ ವ್ಯವಸ್ಥೆಗಳನ್ನು ನೋಡಿ ತೃಪ್ತಿಯಾಗಿದೆ. ನಾವು ಪಾಕಿಸ್ತಾನದಲ್ಲಿ ಉತ್ತಮ ಪಂದ್ಯಾವಳಿಯನ್ನು ಆಯೋಜಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ನಖ್ವಿ ಇದೇ ವೇಳೆ ಮಾಹಿತಿ ನೀಡಿದರು.

ಕಳೆದ ವರ್ಷ ಏಷ್ಯಾಕಪ್‌ನಲ್ಲಿ ‘ಹೈಬ್ರಿಡ್ ಮಾಡೆಲ್’ ಹೋಸ್ಟಿಂಗ್ ಅನ್ನು ಬಳಸಲಾಗಿತ್ತು. ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ನೇತೃತ್ವದ ಏಷ್ಯನ್ ಕ್ರಿಕೆಟ್ ಕೌನ್ಸಿಲ್, ಪಂದ್ಯಾವಳಿಯ ಅಧಿಕೃತ ಆತಿಥೇಯ ಪಾಕಿಸ್ತಾನವಾಗಿದ್ದರೂ ಸಹ ಶ್ರೀಲಂಕಾದಲ್ಲಿ ಭಾರತದ ಪಂದ್ಯಗಳನ್ನು ನಡೆಸಿತ್ತು. ಆದರೆ ಈ ಬಾರಿ ಇದು ಸಾಧ್ಯವಿಲ್ಲ ಎಂದು ನಖ್ವಿ ಹೇಳಿದ್ದಾರೆ.

ಇದನ್ನೂ ಓದಿ Champions Trophy 2025 : ಪಾಕಿಸ್ತಾನಕ್ಕೆ ನಾವು ಹೋಗುವುದಿಲ್ಲ; ಭಾರತದ ಸ್ಪಷ್ಟ ನುಡಿ

ಪಾಕಿಸ್ತಾನ ಕ್ರಿಕೆಟ್​ ಸ್ಟೇಡಿಯಂ ಕೆಲ ಸುಧಾರಣೆ ಕಾಣಬೇಕಿದೆ. ಕರಾಚಿಯ ಸ್ಟೇಡಿಯಂ ಕೆಟ್ಟ ಸ್ಥಿತಿಯಲ್ಲಿದೆ. ಆದ್ದರಿಂದ ಮೇ 7 ರಿಂದ ಇದರ ನವೀಕರಣ ಕೆಲಸ ಆರಂಭಗೊಳ್ಳಲಿದೆ. ವಿನ್ಯಾಸಕ್ಕೆ ಸಹಾಯ ಮಾಡುವ ಅಂತಾರಾಷ್ಟ್ರೀಯ ಕಂಪನಿಗಳಿಂದ ಬಿಡ್‌ಗಳನ್ನು ಅಂತಿಮಗೊಳಿಸುತ್ತೇವೆ ಎಂದರು.

ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳು ಮುರಿದುಹೋಗಿವೆ. ಪರಸ್ಪರ ಪಂದ್ಯಗಳನ್ನು ಆಡುತ್ತಿಲ್ಲ. ಈ ನಿರ್ಧಾರ ಎರಡೂ ಸರ್ಕಾರಗಳ ಅಡಿಯಲ್ಲಿ ನಡೆಯಿತು. ಆದಾಗ್ಯೂ, ಪಾಕಿಸ್ತಾನವು ಕಳೆದ ಏಕದಿನ ವಿಶ್ವಕಪ್ ಸೇರಿದಂತೆ ಅನೇಕ ಐಸಿಸಿ ಪಂದ್ಯಾವಳಿಗಳಿಗಾಗಿ ತನ್ನ ತಂಡವನ್ನು ಭಾರತಕ್ಕೆ ಕಳುಹಿಸಿತ್ತು.

ಭಾರತ, ಆಸ್ಟ್ರೇಲಿಯಾ, ಪಾಕಿಸ್ತಾನ, ಇಂಗ್ಲೆಂಡ್​, ಅಫಘಾನಿಸ್ತಾನ, ದಕ್ಷಿಣ ಆಫ್ರಿಕಾ, ನ್ಯೂಜಿಲ್ಯಾಂಡ್​ ಮತ್ತು ಬಾಂಗ್ಲಾದೇಶ ಟೂರ್ನಿಗೆ ಅರ್ಹತೆ ಪಡೆದ ತಂಡಗಳಾಗಿವೆ.

Exit mobile version