Site icon Vistara News

Champions Trophy 2025: ನಾವು ತುಂಬಾ ಒಳ್ಳೆಯವರು, ಪಾಕಿಸ್ತಾನಕ್ಕೆ ಬನ್ನಿ; ಟೀಮ್ ಇಂಡಿಯಾಗೆ ಪಾಕ್​ ಆಟಗಾರನ ಮನವಿ

Champions Trophy 2025

Champions Trophy 2025: Shoaib Malik's earnest request for India to visit Pakistan: 'We're good people'

ಕರಾಚಿ: ಮುಂದಿನ ವರ್ಷ ನಡೆಯುವ ಚಾಂಪಿಯನ್ಸ್‌ ಟ್ರೋಫಿ(Champions Trophy 2025) ಕ್ರಿಕೆಟ್‌ ಪಂದ್ಯಾವಳಿ ಪಾಕಿಸ್ತಾನದಲ್ಲಿ ನಡೆಯಲಿದೆ. ಆದರೆ, ಭಾರತ ತಂಡ(India to visit Pakistan) ಪಾಕ್​ಗೆ ತೆರಳುವುದು ಅನಿಶ್ಚಿತವಾಗಿದೆ. ಈಗಾಗಲೇ ಬಿಸಿಸಿಐ ಭಾರತದ ಪಂದ್ಯಗಳನ್ನು ತಟಸ್ಥ ತಾಣದಲ್ಲಿ ನಡೆಸಬೇಕೆಂದು ಐಸಿಸಿಗೂ ಮನವಿ ಮಾಡಿದೆ. ಒಂದೊಮ್ಮೆ ಐಸಿಸಿ ಇದಕ್ಕೆ ಸಮ್ಮತಿ ಸೂಚಿಸದಿದ್ದರೆ ಟೂರ್ನಿಯಿಂದ ಭಾರತ ತಂಡ ಹಿಂದೆ ಸರಿಯಲಿದೆ ಎಂದು ದೃಢ ನಿರ್ಧಾರವನ್ನು ಕೂಡ ಪ್ರಕಟಿಸಿದೆ. ಆದರೆ, ಪಾಕಿಸ್ತಾನದ ಮಾಜಿ ಕ್ರಿಕೆಟಿಗರು ಹೇಗಾದರೂ ಮಾಡಿ ಟೀಮ್​ ಇಂಡಿಯಾವನ್ನು ಪಾಕ್​ಗೆ ಕರೆತರಲು ನಾನಾ ರೀತಿಯ ಕಸರತ್ತು ಮಾಡುತ್ತಿದ್ದಾರೆ. ಈ ಸಾಲಿಗೆ ಇದೀಗ ಶೋಯಿಬ್‌ ಮಲಿಕ್‌(Shoaib Malik) ಕೂಡ ಸೇರ್ಪಡೆಗೊಂಡಿದ್ದಾರೆ.

“ದೇಶಗಳ ನಡುವೆ ಯಾವುದೇ ಮೀಸಲಾತಿ ಇದ್ದರೂ ಅದು ಪ್ರತ್ಯೇಕ ಸಮಸ್ಯೆ ಮತ್ತು ಪ್ರತ್ಯೇಕವಾಗಿ ಪರಿಹರಿಸಬೇಕು. ಕ್ರೀಡೆಯಲ್ಲಿ ರಾಜಕೀಯ ಬರಬಾರದು. ಕಳೆದ ವರ್ಷ ಪಾಕಿಸ್ತಾನ ತಂಡ ಭಾರತಕ್ಕೆ ಹೋಗಿತ್ತು, ಮತ್ತು ಈಗ ಭಾರತ ತಂಡಕ್ಕೂ ಪಾಕ್​ಗೆ ಬರುವ ಉತ್ತಮ ಅವಕಾಶವಿದೆ. ಈಗಿನ ಭಾರತ ತಂಡದ ಸ್ಟಾರ್​ ಆಟಗಾರರಿಗೆ ಪಾಕಿಸ್ತಾನದಲ್ಲಿ ಒಮ್ಮೆಯೂ ಆಡುವ ಅವಕಾಶ ಸಿಕ್ಕಿಲ್ಲ. ವಿರಾಟ್​ ಕೊಹ್ಲಿ, ರೋಹಿತ್​ ಶರ್ಮ ಅವರಿಗೆ ಪಾಕ್​ನಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಆದ್ದರಿಂದ ಭಾರತ ತಂಡವನ್ನು ಪಾಕ್​ಗೆ ಕಳುಹಿಸಿಕೊಡಿ. ‘ಹಮ್ ಬಹುತ್ ಅಚ್ಚೆ ಲೋಗ್ ಹೈ” (ನಾವು ತುಂಬಾ ಒಳ್ಳೆಯ ಜನರು), ಹಾಗಾಗಿ ಭಾರತೀಯ ತಂಡ ಖಂಡಿತವಾಗಿಯೂ ಇಲ್ಲಿಗೆ ಬರಬೇಕು. ಬಿಸಿಸಿಐ ಇದಕ್ಕೆ ಒಪ್ಪಿಗೆ ನೀಡಬೇಕು” ಎಂದು ಮಲಿಕ್ ಹೇಳಿದ್ದಾರೆ.

​ಇದಕ್ಕೂ ಮುನ್ನ ಪಾಕ್‌ ಕ್ರಿಕೆಟ್‌ ತಂಡದ ಮಾಜಿ ನಾಯಕ ಯೂನಿಸ್‌ ಖಾನ್‌ ಭಾರತದ ಸ್ಟಾರ್​ ಬ್ಯಾಟರ್‌ ವಿರಾಟ್‌ ಕೊಹ್ಲಿ ಪಾಕಿಸ್ತಾನಕ್ಕೆ ಬರಬೇಕು, ಇಲ್ಲಿ ಅವರು ಆಡಬೇಕು, ಇದು ನಮ್ಮ ಆಸೆ ಎಂದು ಹೇಳಿದ್ದರು. ಮುಂದಿನ ವರ್ಷ ನಡೆಯಲಿರುವ ಚಾಂಪಿಯನ್ಸ್‌ ಟ್ರೋಫಿ ಏಕದಿನ ಪಂದ್ಯಾವಳಿಗಾಗಿ ಭಾರತ ತಂಡವನ್ನು ಪಾಕಿಸ್ಥಾನಕ್ಕೆ ಕಳುಹಿಸಲು ಸಾಧ್ಯವಿಲ್ಲ ಎಂದು ಬಿಸಿಸಿಐ ಮೂಲ ಹೇಳಿತ್ತು. ಇದೇ ವಿಚಾರವನ್ನು ಮುಂದಿಟ್ಟಿರುವ ಯೂನಿಸ್‌ ಖಾನ್‌, ಕೊಹ್ಲಿ ಈವರೆಗೆ ಪಾಕಿಸ್ತಾನದಲ್ಲಿ ಆಡಿಲ್ಲ. ಇದಕ್ಕೆ ಬಿಸಿಸಿಐ ಅವಕಾಶ ನೀಡಬೇಕು ಎಂದು ಒತ್ತಾಯಿಸಿದ್ದಾರೆ. 2006ರಲ್ಲಿ ಪಾಕಿಸ್ತಾನಕ್ಕೆ ಪ್ರವಾಸ ಹೋಗಿದ್ದ ಭಾರತ ತಂಡ, ಇಲ್ಲಿ ಕೊನೆಯ ಸಲ ಸರಣಿಯನ್ನಾಡಿತ್ತು.

ಇದನ್ನೂ ಓದಿ ICC Champions Trophy : ಪಾಕಿಸ್ತಾನದ ಕ್ರಿಕೆಟ್​ ಮಂಡಳಿಯ ಮಾಧ್ಯಮ ಹಕ್ಕುಗಳನ್ನು ಕೇಳುವವರೇ ಇಲ್ಲ!

ನವೆಂಬರ್ 2008ರ ಮುಂಬೈ ಭಯೋತ್ಪಾದಕ ದಾಳಿಯಲ್ಲಿ 150 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ ನಂತರ ಭಾರತವು ಪಾಕಿಸ್ತಾನದೊಂದಿಗೆ ದ್ವಿಪಕ್ಷೀಯ ಕ್ರಿಕೆಟ್ ಆಡಿಲ್ಲ. ಜೂನ್-ಜುಲೈ 2008 ರಲ್ಲಿ ಏಷ್ಯಾ ಕಪ್ ಸಮಯದಲ್ಲಿ ಭಾರತೀಯ ಕ್ರಿಕೆಟ್ ತಂಡವು ಕೊನೆಯ ಬಾರಿಗೆ ಪಾಕಿಸ್ತಾನಕ್ಕೆ ಪ್ರಯಾಣಿಸಿತ್ತು. ಭಾರತದಲ್ಲಿ ಡಿಸೆಂಬರ್ 2012 ರಿಂದ ಜನವರಿ 2013 ರವರೆಗಿನ ದ್ವಿಪಕ್ಷೀಯ ಸರಣಿಯು ಎರಡು ರಾಷ್ಟ್ರಗಳ ನಡುವಿನ ಅಂತಿಮ ದ್ವಿಪಕ್ಷೀಯ ಸರಣಿಯಾಗಿದೆ. ಇದಾದ ಬಳಿಕ ಉಭಯ ತಂಡಗಳು ಕೇವಲ ಐಸಿಸಿ ಟೂರ್ನಿಗಳಲ್ಲಿ ಮಾತ್ರ ಆಡುತ್ತವೆ.

ಕಳೆದ ವರ್ಷ ಪಾಕಿಸ್ತಾನದ ಆತಿಥ್ಯದಲ್ಲಿ ನಡೆದಿದ್ದ ಏಷ್ಯಾಕಪ್​ ಟೂರ್ನಿಯಲ್ಲಿ ಭಾರತ ಪಾಕ್​ಗೆ ಹೋಗಲು ಒಪ್ಪದ ಕಾರಣ ಹೈಬ್ರೀಡ್​ ಮಾದರಿಯಲ್ಲಿ ಪಾಕ್​ ಮತ್ತು ಶ್ರೀಲಂಕಾದಲ್ಲಿ ಆಡಿಸಲಾಗಿತ್ತು. ಭಾರತ ತನ್ನ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡಿತ್ತು.

ಭಾರತ ತಂಡ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯಿಂದ ಹಿಂದೆ ಸರಿದರೆ, 9ನೇ ಸ್ಥಾನಿಯಾಗಿರುವ ಶ್ರೀಲಂಕಾಗೆ ಅವಕಾಶ ಸಿಗಲಿದೆ. ಯಾವುದೇ ತಂಡವು ಐಸಿಸಿ ಟೂರ್ನಿಯಿಂದ ಹಿಂದೆ ಸರಿದರೆ ಅಂಕಪಟ್ಟಿಯಲ್ಲಿ ನಂತರದ ಸ್ಥಾನ ಪಡೆದಿರುವ ತಂಡ ತಂಡಕ್ಕೆ ಅರ್ಹತೆ ನೀಡಲಾಗುತ್ತದೆ. ಪ್ರಸ್ತುತ ಭಾರತ, ಆಸ್ಟ್ರೇಲಿಯಾ, ಪಾಕಿಸ್ತಾನ, ಇಂಗ್ಲೆಂಡ್​, ಅಫಘಾನಿಸ್ತಾನ, ದಕ್ಷಿಣ ಆಫ್ರಿಕಾ, ನ್ಯೂಜಿಲ್ಯಾಂಡ್​ ಮತ್ತು ಬಾಂಗ್ಲಾದೇಶ ಅರ್ಹತೆ ಪಡೆದ ತಂಡಗಳಾಗಿವೆ.

Exit mobile version