ಮುಂಬಯಿ: ಮುಂದಿನ ವರ್ಷ(2025ರ) ಪಾಕಿಸ್ತಾನ ಆತಿಥ್ಯದಲ್ಲಿ ನಡೆಯಬೇಕಿರುವ ಚಾಂಪಿಯನ್ಸ್ ಟ್ರೋಫಿ ಟೂರ್ನಿಯನ್ನು(Champions Trophy 2025) ಪಾಕಿಸ್ತಾನದಿಂದ ಸ್ಥಳಾಂತರಿಸಲು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ(ICC) ಮೇಲೆ ಬಿಸಿಸಿಐ(BCCI) ಒತ್ತಡ ಹೇರುತ್ತಿದೆ ಎಂಬ ಮಾತುಗಳು ಈಗಾಗಲೇ ಕೇಳಿಬಂದಿವೆ. ಭಾರತ ತಂಡ(Team India) ಪಾಕಿಸ್ತಾನಕ್ಕೆ ತೆರಳಲು ಕೇಂದ್ರ ಸರ್ಕಾರ ಅನುಮತಿ ನೀಡುವುದಿಲ್ಲ ಎಂದು ಹೇಳಲಾಗುತ್ತಿದ್ದು, ಇದೇ ಕಾರಣಕ್ಕೆ ಟೂರ್ನಿ ಸ್ಥಳಾಂತರಕ್ಕೆ ಒತ್ತಡ ಹೇರಲಾಗುತ್ತಿದೆ ಎಂದು ಗೊತ್ತಾಗಿದೆ. ಆದರೆ ಐಸಿಸಿ ಇದಕ್ಕೆ ಸಮ್ಮತಿ ನೀಡಲಿದೆಯಾ ಎಂದು ಕಾದು ನೋಡಬೇಕಿದೆ.
ಒಂದೊಮ್ಮೆ ಟೂರ್ನಿ ಪಾಕ್ನಲ್ಲಿಯೇ ನಡೆದು, ಭಾರತ ತಂಡ ಪಾಲ್ಗೊಳ್ಳಲಿದ್ದರೆ ಆಗ ಯಾವ ತಂಡಕ್ಕೆ ಅವಕಾಶ ಸಿಗಲಿದೆ ಎಂಬ ಪ್ರಶ್ನೆ ಕ್ರಿಕೆಟ್ ಅಭಿಮಾನಿಗಳಲ್ಲಿ ಮೂಡಿದೆ. ಇದಕ್ಕೆ ಉತ್ತರ ಇಲ್ಲಿದೆ. ಐಸಿಸಿ ನಿಯಮಗಳ ಪ್ರಕಾರ 2023ರ ಸಾಲಿನ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಅಂಕಪಟ್ಟಿಯ ಅಗ್ರ 7ರಲ್ಲಿ ಸ್ಥಾನ ಪಡೆಯುವ ತಂಡಗಳು ನೇರವಾಗಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಅರ್ಹತೆ ಪಡೆದುಕೊಂಡಿದೆ. ಟೂರ್ನಿಯ ಆತಿಥೇಯ ದೇಶಕ್ಕೆ ನೇರವಾಗಿ ಅರ್ಹತೆ ಸಿಗುತ್ತದೆ. ಒಟ್ಟು 8 ತಂಡಗಳು ಅರ್ಹತೆ ಪಡೆದಿದೆ.
ಲಂಕಾಗೆ ಸಿಗಲಿದೆ ಅವಕಾಶ
ಭಾರತ ತಂಡ ಟೂರ್ನಿಯಿಂದ ಹಿಂದೆ ಸರಿದರೆ, 9ನೇ ಸ್ಥಾನಿಯಾಗಿರುವ ಶ್ರೀಲಂಕಾಗೆ ಅವಕಾಶ ಸಿಗಲಿದೆ. ಯಾವುದೇ ತಂಡವು ಐಸಿಸಿ ಟೂರ್ನಿಯಿಂದ ಹಿಂದೆ ಸರಿದರೆ ಅಂಕಪಟ್ಟಿಯಲ್ಲಿ ನಂತರದ ಸ್ಥಾನ ಪಡೆದಿರುವ ತಂಡ ತಂಡಕ್ಕೆ ಅರ್ಹತೆ ನೀಡಲಾಗುತ್ತದೆ. ಪ್ರಸ್ತುತ ಭಾರತ, ಆಸ್ಟ್ರೇಲಿಯಾ, ಪಾಕಿಸ್ತಾನ, ಇಂಗ್ಲೆಂಡ್, ಅಫಘಾನಿಸ್ತಾನ, ದಕ್ಷಿಣ ಆಫ್ರಿಕಾ, ನ್ಯೂಜಿಲ್ಯಾಂಡ್ ಮತ್ತು ಬಾಂಗ್ಲಾದೇಶ ಅರ್ಹತೆ ಪಡೆದ ತಂಡಗಳಾಗಿವೆ.
ಇದನ್ನೂ ಓದಿ Champions Trophy 2025: ಪಾಕ್ನಲ್ಲೇ ನಡೆಯಲಿದೆ ಚಾಂಪಿಯನ್ಸ್ ಟ್ರೋಫಿ; ಸಾಗರೋತ್ತರ ತಟಸ್ಥ ತಾಣದಲ್ಲಿ ಭಾರತದ ಪಂದ್ಯ?
ಹಿಂದಿನ ನಿಯಮ ಹೇಗಿತ್ತು?
ಆರಂಭದಲ್ಲಿ ಅಂದರೆ 2013 ಮತ್ತು 2017ರ ಸಾಲಿನ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿ ವೇಳೆ ಅರ್ಹತೆಯ ನಿಯಮಗಳು ಬೇರೆ ರೀತಿಯಲ್ಲಿತ್ತು. ಟೂರ್ನಿ ಆರಂಭದ ನಿಗಧಿತ ಅವಧಿಯ ಅಂತ್ಯಕ್ಕೆ ಐಸಿಸಿ ಏಕದಿನ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರ 8ರಲ್ಲಿ ಸ್ಥಾನ ಪಡೆಯುವ ತಂಡಗಳು ನೇರವಾಗಿ ಅರ್ಹತೆ ಪಡೆಯುತ್ತಿದ್ದವು. ಆದರೆ ಈ ಬಾರಿ ಮಾತ್ರ ವಿಶ್ವಕಪ್ ಟೂರ್ನಿಯ ಅಂಕಪಟ್ಟಿಯನ್ನು ಆಧರಿಸಿ ಅರ್ಹತೆಯನ್ನು ನೀಡಲಾಗಿದೆ.
ಹೊರಬೀಳುವ ಆತಂಕದಲ್ಲಿತ್ತು ಇಂಗ್ಲೆಂಡ್!
ಕ್ರಿಕೆಟ್ ಜನಕರ ನಾಡು ಎಂದು ಕರೆಸಿಕೊಳ್ಳುವ ಇಂಗ್ಲೆಂಡ್ ತಂಡ ಕಳೆದ ಬಾರಿಯ ವಿಶ್ವಕಪ್ನಲ್ಲಿ ಅತ್ಯಂತ ಕಳಪೆ ಪ್ರದರ್ಶನ ತೋರುವ ಮೂಲಕ ಚಾಂಪಿಯನ್ಸ್ ಟ್ರೋಫಿಗೆ ಅರ್ಹತೆ ಕಳೆದುಕೊಳ್ಳುವ ಆತಂಕದಲ್ಲಿತ್ತು. ಆದರೆ ಅಂತಿಮ ಪಂದ್ಯದಲ್ಲಿ ನೆದರ್ಲೆಂಡ್ಸ್ ವಿರುದ್ಧ ಗೆದ್ದು 7ನೇ ಸ್ಥಾನ ಸಂಪಾದಿಸಿ ಕೊನೆಯ ಹಂತದಲ್ಲಿ ಅವಕಾಶ ಗಿಟ್ಟಿಸಿಕೊಂಡಿತ್ತು.
ಕಳೆದ ವರ್ಷ ಪಾಕ್ ಆತಿಥ್ಯದಲ್ಲಿಯೇ ನಡೆದಿದ್ದ ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ತಂಡವು ಪಾಕ್ಗೆ ಪ್ರಯಾಣಿಸಲು ನಿರಾಕರಿಸಿದ ಕಾರಣ, ಟೂರ್ನಿಯನ್ನು ಹೈಬ್ರಿಡ್(champions trophy hybrid model) ಮಾದರಿಯಲ್ಲಿ ಆಯೋಜಿಸಲಾಯಿತ್ತು. ಕೇವಲ ನಾಲ್ಕು ಪಂದ್ಯಗಳನ್ನು ಪಾಕಿಸ್ತಾನದಲ್ಲಿ ನಡೆಸಿ ಉಳಿದ ಪಂದ್ಯಗಳು ಶ್ರೀಲಂಕಾದಲ್ಲಿ ನಡೆದಿದ್ದವು. ಭಾರತ ಎಲ್ಲ ಪಂದ್ಯಗಳನ್ನು ಲಂಕಾದಲ್ಲಿ ಆಡಿತ್ತು.