ದುಬೈ: ಪ್ರಸಕ್ತ ಸಾಗುತ್ತಿರುವ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಅಂಕಪಟ್ಟಿಯ ಅಗ್ರ 7ರಲ್ಲಿ ಸ್ಥಾನ ಪಡೆಯುವ ತಂಡಗಳು 2025ರ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ(ICC Champions Trophy 2025) ನೇರ ಅರ್ಹತೆ ಪಡೆದುಕೊಳ್ಳಲಿವೆ. ಈ ಟೂರ್ನಿ ಪಾಕಿಸ್ತಾನದ ಆತಿಥ್ಯದಲ್ಲಿ ನಡೆಯಲಿದೆ. ಆದರೆ ಹಾಲಿ ವಿಶ್ವಕಪ್ ಚಾಂಪಿಯನ್ ಇಂಗ್ಲೆಂಡ್ ತಂಡ ಅರ್ಹತೆ ಪಡೆಯುವುದು ಅನುಮಾನ ಎನ್ನುವಂತಿದೆ. ಏಕೆಂದರೆ ಇಂಗ್ಲೆಂಡ್ ಸದ್ಯ 10ನೇ ಸ್ಥಾನದಲ್ಲಿದೆ.
ಆತಂಕದಲ್ಲಿ ಇಂಗ್ಲೆಂಡ್
ಕ್ರಿಕೆಟ್ ಜನಕರ ನಾಡು ಎಂದು ಕರೆಸಿಕೊಳ್ಳುವ ಇಂಗ್ಲೆಂಡ್ ತಂಡ ಈ ಬಾರಿಯ ವಿಶ್ವಕಪ್‌ನಲ್ಲಿ ಅತ್ಯಂತ ಕಳಪೆ ಪ್ರದರ್ಶನ ತೋರುವ ಮೂಲಕ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದಿದೆ. ಒಂದೊಮ್ಮೆ ಇಂದಿನ ಭಾರತ ಪಂದ್ಯ ಸೇರಿ ಉಳಿದಿರುವ ಎಲ್ಲ ಪಂದ್ಯಗಳನ್ನು ಗೆದ್ದರೆ ಮಾತ್ರ ಆಂಗ್ಲರ ಪಡೆ 2025ರ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ನೇರ ಅರ್ಹತೆ ಪಡೆದುಕೊಳ್ಳಲಿದೆ. ಮುಂದಿನ ಪಂದ್ಯಗಳಲ್ಲಿ ಸೋಲು ಕಂಡರೆ ಮೊದಲ ಬಾರಿಗೆ ಈ ಟೂರ್ನಿಗೆ ಅರ್ಹತೆ ಪಡೆಯದ ಅವಮಾನಕ್ಕೆ ಸಿಲುಕಲಿದೆ.
ಐಸಿಸಿ ನಿಯಮಗಳ ಪ್ರಕಾರ 2023ರ ಸಾಲಿನ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಅಂಕಪಟ್ಟಿಯ ಅಗ್ರ 7ರಲ್ಲಿ ಸ್ಥಾನ ಪಡೆಯುವ ತಂಡಗಳು ನೇರವಾಗಿ ಪಾಕಿಸ್ತಾನದ ಆತಿಥ್ಯದಲ್ಲಿ ನಡೆಯುವ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಅರ್ಹತೆ ಪಡೆದುಕೊಳ್ಳಲಿವೆ. ಈ ಟೂರ್ನಿಯ ಅರ್ಹತಾ ಸುತ್ತನ್ನು ಐಸಿಸಿ ಸಮಿತಿ 2021ರಲ್ಲೇ ಅಂತ್ಯಗೊಳಿಸಿದೆ. ಐಸಿಸಿ ಮಾನದಂಡದ ಪ್ರಕಾರ ಪ್ರಸಕ್ತ ಸಾಗುತ್ತಿರುವ ವಿಶ್ವಕಪ್‌ನಲ್ಲಿ ಅಗ್ರ 7ರೊಳಗೆ ಸ್ಥಾನ ಪಡೆದ ತಂಡಗಳು ಅರ್ಹತೆ ಗಿಟ್ಟಿಸಿಕೊಳ್ಳಲಿದೆ. 7ರಿಂದ ಕೆಳಗಿರುವ ತಂಡಗಳು ಟೂರ್ನಿಯಿಂದ ಹೊರಬೀಳಲಿದೆ.
The ICC has confirmed that the top seven sides at the end of the #CWC23 group stage will qualify for the 2025 Champions Trophy, along with hosts Pakistan
— ESPNcricinfo (@ESPNcricinfo) October 29, 2023
👉 https://t.co/UhoueH5f5L pic.twitter.com/1FtLIL24Jy
ಹಲವು ಕ್ರಿಕೆಟ್ ಸಂಸ್ಥೆಗಳಿಂದ ಅಸಮಾಧಾನ
ಐಸಿಸಿ 2021ರಲ್ಲೇ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಅರ್ಹತೆಯ ನಿಯಮಗಳನ್ನು ಅಂತ್ಯಗೊಳಿಸಿದ ವಿಚಾರದಲ್ಲಿ ಈಗ ಹಲವು ಕ್ರಿಕೆಟ್ ಸಂಸ್ಥೆಗಳು ಅಸಮಾಧಾನ ಹೊರಹಾಕಿದೆ. ತಮಗೆ ಈ ಅರ್ಹತೆಯ ಲೆಕ್ಕಾಚಾರಗಳ ಬಗ್ಗೆ ಸೂಕ್ತ ಮಾಹಿತಿಯೇ ಇರಲಿಲ್ಲ ಎಂದು ಐಸಿಸಿ ವಿರುದ್ಧ ಆರೋಪ ಮಾಡಿವೆ. ಆದರೆ ಐಸಿಸಿ ಮಾತ್ರ ಈ ಆರೋಪಕ್ಕೆ ಯಾವುದೇ ಪ್ರತಿಕ್ರಿಯೆ ನೀಡಲು ಮುಂದಾಗಿಲ್ಲ.
ಇದನ್ನೂ ಓದಿ IND vs ENG: ಆಂಗ್ಲರ ಬೌಲಿಂಗ್ ದಾಳಿಗೆ ಕುಸಿದ ಭಾರತ; ಇಂಗ್ಲೆಂಡ್ ಗೆಲುವಿಗೆ 230 ರನ್ ಗುರಿ
ಹಿಂದಿನ ನಿಯಮ ಹೇಗಿತ್ತು?
ಆರಂಭದಲ್ಲಿ ಅಂದರೆ 2013 ಮತ್ತು 2017ರ ಸಾಲಿನ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿ ವೇಳೆ ಅರ್ಹತೆಯ ನಿಯಮಗಳು ಬೇರೆ ರೀತಿಯಲ್ಲಿತ್ತು. ಟೂರ್ನಿ ಆರಂಭದ ನಿಗಧಿತ ಅವಧಿಯ ಅಂತ್ಯಕ್ಕೆ ಐಸಿಸಿ ಏಕದಿನ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರ 8ರಲ್ಲಿ ಸ್ಥಾನ ಪಡೆಯುವ ತಂಡಗಳು ನೇರವಾಗಿ ಅರ್ಹತೆ ಪಡೆಯುತ್ತಿದ್ದವು. ಆದರೆ ಈ ಬಾರಿ ಮಾತ್ರ ವಿಶ್ವಕಪ್ ಟೂರ್ನಿಯ ಅಂಕಪಟ್ಟಿಯನ್ನು ಆಧರಿಸಿ ಅರ್ಹತೆಯನ್ನು ನೀಡಲಾಗಿದೆ. ಈ ಬಾರಿಯ ವಿಶ್ವಕಪ್ಗೆ ಅರ್ಹತೆ ಪಡೆಯದ ವಿಂಡೀಸ್ ಈ ಟೂರ್ನಿಯನ್ನು ಆಡುವ ಅವಕಾಶದಿಂದ ವಂಚಿತವಾಗಿದೆ. ಒಂದೊಮ್ಮೆ ಈ ಹಿಂದಿನ ಶ್ರೇಯಾಂಕ ನಿಯಮ ಜಾರಿಯಲ್ಲಿ ಇರುತ್ತಿದ್ದರೆ ವಿಂಡೀಸ್ಗೂ ಅವಕಾಶ ಸಿಗುವ ಸಾಧ್ಯತೆ ಇರುತ್ತಿತ್ತು.
ಪಾಕಿಸ್ತಾನಕ್ಕೆ ಅರ್ಹತೆ ಖಚಿತ
ಸದ್ಯ ಭಾರತ, ನ್ಯೂಜಿಲ್ಯಾಂಡ್, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಶ್ರೀಲಂಕಾ ಮತ್ತು ಅಫಘಾನಿಸ್ತಾನ ತಂಡಗಳು ಸೇಫ್ ಝೋನ್ನಲ್ಲಿದೆ. ಪಾಕಿಸ್ತಾನ ತಂಡ 7ರಲ್ಲಿ ಸ್ಥಾನ ಪಡೆಯದಿದ್ದರೂ ಟೂರ್ನಿಯ ಆತಿಥ್ಯ ವಹಿಸಿದ ರಾಷ್ಟ್ರವಾದ ಕಾರಣ ಇದಕ್ಕೆ ಅರ್ಹತೆ ಸಿಗಲಿದೆ. ಇದು ಐಸಿಸಿಯ ನಿಯಮದಲ್ಲಿದೆ. ಯಾವದೇ ದೇಶ ಟೂರ್ನಿಯ ಆತಿಥ್ಯವಹಿಸಿದರೆ ಆ ತಂಡಕ್ಕೆ ನೇರ ಅರ್ಹತೆ ನೀಡಲಾಗುತ್ತದೆ.