Site icon Vistara News

Champions Trophy: ಪಾಕಿಸ್ತಾನದಲ್ಲೇ ಚಾಂಪಿಯನ್ಸ್​ ಟ್ರೋಫಿ; ಪಿಸಿಬಿ ಅಧ್ಯಕ್ಷ ನಖ್ವಿ ವಿಶ್ವಾಸ

IND vs PAK

ಕರಾಚಿ: ಮುಂದಿನ ವರ್ಷ(Champions Trophy 2025) ಪಾಕಿಸ್ತಾನದ(Pakistan) ಆತಿಥ್ಯದಲ್ಲಿ ನಡೆಯಲಿರುವ ಚಾಂಪಿಯನ್ಸ್​ ಟ್ರೋಫಿ(Champions Trophy) ಕ್ರಿಕೆಟ್​ ಟೂರ್ನಿಯೂ ಪಾಕಿಸ್ತಾನದಲ್ಲೇ ನಡೆಯಲಿದೆ ಎಂದು ಪಾಕಿಸ್ತಾನ ಕ್ರಿಕೆಟ್(PCB) ಮಂಡಳಿ(Pakistan Cricket Board) ಮುಖ್ಯಸ್ಥ ಮೊಹ್ಸಿನ್ ನಖ್ವಿ(Mohsin Naqvi) ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪಾಕಿಸ್ತಾನ ಸೂಪರ್ ಲೀಗ್ ಫೈನಲ್‌ನ ಪಂದ್ಯ ಮುಕ್ತಾಯದ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಖ್ವಿ, ಕಳೆದ ವಾರ ದುಬೈನಲ್ಲಿ ನಡೆದ ಐಸಿಸಿ ಸಭೆಗಳಲ್ಲಿ ಟೂರ್ನಿಯ ಬಗ್ಗೆ ಚರ್ಚೆಗಳು ನಡೆದಿದೆ. ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರೊಂದಿಗೆ ಮಾತನಾಡಿದ್ದೇನೆ. ಟೂರ್ನಿಯನ್ನು ತನ್ನ ದೇಶದಿಂದ ಸ್ಥಳಾಂತರಿಸುವ ಸಾಧ್ಯತೆಯನ್ನು ಮಂಡಳಿಯು ಪರಿಗಣಿಸುತ್ತಿಲ್ಲ ಎಂದು ನಖ್ವಿ ದೃಢವಾದ ಹೇಳಿಕೆ ನೀಡಿದ್ದಾರೆ.

“ಜಯ್ ಶಾ ಜತೆ ಸ್ವಲ್ಪ ಸಮಯದವರೆಗೆ ಮಾತನಾಡಿದ್ದೇವೆ. ಈ ಮಾತುಕತೆಯೂ ಸೌಹಾರ್ದಯುತವಾಗಿತ್ತು. ಆದರೆ, ಚರ್ಚಿಸಿದ ವಿವರಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ” ಎಂದು ಮೊಹ್ಸಿನ್ ನಖ್ವಿ ಹೇಳಿದರು. ಭಾರತವು ಪಾಕಿಸ್ತಾನಕ್ಕೆ ಪ್ರಯಾಣಿಸಲು ಒಪ್ಪದಿದ್ದರೆ ಪಂದ್ಯಾವಳಿಯನ್ನು ಪಾಕಿಸ್ತಾನದಿಂದ ಸ್ಥಳಾಂತರಿಸಲಿದ್ದೀರಾ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ನಖ್ವಿ,”ಆ ಮಾರ್ಗಗಳ ಬಗ್ಗೆ ನಾನು ಯೋಚಿಸುವುದಿಲ್ಲ, ನಾವು ಪಾಕಿಸ್ತಾನದಲ್ಲಿ ನಿಗದಿತ ಸಮಯದಲ್ಲಿ ಚಾಂಪಿಯನ್ಸ್ ಟ್ರೋಫಿಯನ್ನು ಆಯೋಜಿಸುತ್ತೇವೆ ಎಂಬ ವಿಶ್ವಾಸವಿದೆ” ಎಂದು ಹೇಳಿದರು.

ನವೆಂಬರ್ 2008ರ ಮುಂಬೈ ಭಯೋತ್ಪಾದಕ ದಾಳಿಯಲ್ಲಿ 150 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ ನಂತರ ಭಾರತವು ಪಾಕಿಸ್ತಾನದೊಂದಿಗೆ ದ್ವಿಪಕ್ಷೀಯ ಕ್ರಿಕೆಟ್ ಆಡಿಲ್ಲ. ಜೂನ್-ಜುಲೈ 2008 ರಲ್ಲಿ ಏಷ್ಯಾ ಕಪ್ ಸಮಯದಲ್ಲಿ ಭಾರತೀಯ ಕ್ರಿಕೆಟ್ ತಂಡವು ಕೊನೆಯ ಬಾರಿಗೆ ಪಾಕಿಸ್ತಾನಕ್ಕೆ ಪ್ರಯಾಣಿಸಿತ್ತು. ಭಾರತ ತಂಡವು ಪ್ರಯಾಣಿಸಲು ನಿರಾಕರಿಸಿದ ನಂತರ, ಕಳೆದ ವರ್ಷದ ಏಷ್ಯಾಕಪ್ ಅನ್ನು ಹೈಬ್ರಿಡ್ ಮಾದರಿಯಲ್ಲಿ ಆಯೋಜಿಸಲಾಯಿತ್ತು. ಕೇವಲ ನಾಲ್ಕು ಪಂದ್ಯಗಳನ್ನು ಪಾಕಿಸ್ತಾನದಲ್ಲಿ ನಡೆಸಿ ಉಳಿದ ಪಂದ್ಯಗಳು ಶ್ರೀಲಂಕಾದಲ್ಲಿ ನಡೆದಿದ್ದವು. ಭಾರತ ಎಲ್ಲ ಪಂದ್ಯಗಳನ್ನು ಲಂಕಾದಲ್ಲಿ ಆಡಿತ್ತು.

ಇದನ್ನೂ ಓದಿ Champions Trophy : ಯುಎಇನಲ್ಲಿ ಚಾಂಪಿಯನ್ಸ್ ಟ್ರೋಫಿ, ಪಾಕಿಸ್ತಾನಕ್ಕೆ ಹಿನ್ನಡೆ

ಮುಂದಿನ ವರ್ಷ ನಡೆಯುವ ಚಾಂಪಿಯನ್ಸ್​ ಟ್ರೋಫಿಯ ಯಶಸ್ಸಿಗೆ ಪಿಸಿಬಿ ಬದ್ಧವಾಗಿದ್ದರೂ, ಭದ್ರತಾ ಕಾರಣಗಳಿಂದಾಗಿ ಭಾರತವು ಭಾಗವಹಿಸದಿದ್ದರೆ, ಆಗ ಏಷ್ಯಾ ಕಪ್​ನಂತೆ​ ಹೈಬ್ರಿಡ್ ಮಾದರಿಯ ಮೊರೆ ಹೋಗಬೇಕಿದೆ. ಆದರೆ ಸ್ವತಂತ್ರ ಏಜೆನ್ಸಿಯೊಂದಿಗೆ ಸಮಾಲೋಚಿಸಿ ಸಮಗ್ರ ಭದ್ರತಾ ಮೌಲ್ಯಮಾಪನವನ್ನು ನಡೆಸಿ ಪಾಕಿಸ್ತಾನದಲ್ಲಿಯೇ ಟೂರ್ನಿ ನಡೆಸಿ ಎಂದು ಪಿಸಿಬಿ ಹೇಳುವ ಸಾಧ್ಯತೆಗಳಿವೆ. ಐಸಿಸಿ ಈ ವಿನಂತಿಯನ್ನು ಒಪ್ಪಿಕೊಂಡಿದೆ ಎಂದು ಇತ್ತೀಚಿನ ವರದಿಗಳು ಹೇಳಿವೆ. ಭಾರತ ಪಾಕ್​ನಲ್ಲಿ ಆಡಲಿದೆಯಾ ಅಥವಾ ಬಿಸಿಸಿಐ ಒತ್ತಾಯಕ್ಕೆ ಮಣಿದು ಟೂರ್ನಿ ಪಾಕ್​ ನಿಂದ ಶಿಫ್ಟ್​ ಆಗಲಿದೆಯಾ ಎನ್ನುವುದನ್ನು ಕಾದು ನೋಡಬೇಕಿದೆ.

ಅರ್ಹತೆ ಪಡೆದ ತಂಡಗಳು

ಐಸಿಸಿ ನಿಯಮಗಳ ಪ್ರಕಾರ 2023ರ ಸಾಲಿನ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯ ಅಂಕಪಟ್ಟಿಯ ಅಗ್ರ 7ರಲ್ಲಿ ಸ್ಥಾನ ಪಡೆಯುವ ತಂಡಗಳು ಟೂರ್ನಿಗೆ ಅರ್ಹತೆ ಪಡೆದಿದೆ. ಭಾರತ, ಆಸ್ಟ್ರೇಲಿಯಾ, ಪಾಕಿಸ್ತಾನ, ಇಂಗ್ಲೆಂಡ್​, ಅಫಘಾನಿಸ್ತಾನ, ದಕ್ಷಿಣ ಆಫ್ರಿಕಾ, ನ್ಯೂಜಿಲ್ಯಾಂಡ್​ ಮತ್ತು ಬಾಂಗ್ಲಾದೇಶ ಅರ್ಹತೆ ಪಡೆದ ತಂಡಗಳಾಗಿವೆ.

Exit mobile version