ಬೆಂಗಳೂರು: ಚಂದ್ರನ್ ರಂಜಿತ್ ಮತ್ತು ರಾಕೇಶ್ ಅವರ ರೇಡಿಂಗ್ ಅಬ್ಬರಕ್ಕೆ ಬೆಚ್ಚಿ ಬಿದ್ದ ಯುಪಿ ಯೋಧಾ ತಂಡ ಗುಜರಾತ್ ವಿರುದ್ಧ 6 ಅಂಕದ ಸೋಲಿಗೆ ತುತ್ತಾಗಿದೆ. ಶ್ರೀ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಬುಧವಾರದ ಪ್ರೊ ಕಬಡ್ಡಿ (Pro Kabaddi) ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ 51-45 ಅಂತರದಿಂದ ಯುಪಿ ಯೋಧಾ ವಿರುದ್ಧ ಗೆಲುವು ಸಾಧಿಸಿದೆ.
ದ್ವಿತೀಯಾರ್ಧದಲ್ಲಿ ತಿರುಗಿ ಬಿದ್ದ ಗುಜರಾತ್
ಮೊದಲಾರ್ಧದ ಆಟದಲ್ಲಿ 2 ಅಂಕದ ಹಿನ್ನಡೆಯಲ್ಲಿದ್ದ ಗುಜರಾತ್, ದ್ವಿತೀಯಾರ್ಧದಲ್ಲಿ ತಿರುಗಿ ಬಿತ್ತು. ತಮಿಳ್ ತಲೈವಾಸ್ ವಿರುದ್ಧದ ಕೂಟದ ಮೊದಲ ಪಂದ್ಯದಲ್ಲಿ ಗಾಯಗೊಂಡು ಹೊರಗುಳಿದಿದ್ದ ಚಂದ್ರನ್ ರಂಜಿತ್, ಈ ಪಂದ್ಯದಲ್ಲಿ ಕಣಕ್ಕಿಳಿದು ಇಷ್ಟು ದಿನದ ಆಟವನ್ನು ಒಂದೇ ಪಂದ್ಯದಲ್ಲಿ ತೋರಿಸಿಕೊಟ್ಟರು. ಅವರ ರೇಡಿಂಗ್ ಆರ್ಭಟಕ್ಕೆ ಎದುರಾಳಿ ರಕ್ಷಣಾ ಕೋಟೆ ಸಂಪೂರ್ಣ ವಿಫಲಗೊಂಡಿತು. 21 ಬಾರಿ ಎದುರಾಳಿ ಕೋಟೆಗೆ ನುಗ್ಗಿ 20 ಅಂಕ ಕಲೆಹಾಕಿದರು. ಇವರಿಗೆ ಮತ್ತೊಬ್ಬ ರೇಡರ್ ರಾಕೇಶ್ (16) ಉತ್ತಮ ಸಾಥ್ ನೀಡಿದರು. ಉಳಿದಂತೆ ಡಿಫೆಂಡರ್ ಸೌರವ್ ಗುಲಿಯಾ(3) ಮಿಂಚಿದರು.
ಕಳೆದ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ವಿರುದ್ಧ ಗೆದ್ದು ಬೀಗಿದ ಯೋಧಾ ತಂಡದ ಆಟ ಈ ಪಂದ್ಯದಲ್ಲಿ ನಡೆಯಲಿಲ್ಲ. ಆರಂಭಿಕ ಆಟದಲ್ಲಿ ಮುನ್ನಡೆ ಸಾಧಿಸಿದ್ದರೂ ದ್ವಿತೀಯಾರ್ಧದಲ್ಲಿ ಎಡವಿ ಸೋಲು ಕಂಡಿತು. ಯೋಧಾ ಪರ ಸುರೇಂದರ್ ಗಿಲ್ (14) ಹಾಗೂ ಸ್ಟಾರ್ ರೇಡರ್ ಪ್ರದೀಪ್ ನರ್ವಾಲ್ (17) ಮಿಂಚಿದರು. ಆದರೆ ಡಿಫೆಂಡಿಂಗ್ನಲ್ಲಿ ನಿತೇಶ್ ಕುಮಾರ್,ಅಶು ಸಿಂಗ್ ವೈಫಲ್ಯ ತಂಡದ ಸೋಲಿಗೆ ಪ್ರಮುಖ ಕಾರಣವಾಯಿತು.
ಇದನ್ನೂ ಓದಿ | Pro Kabaddi | ರೋಚಕ ಪಂದ್ಯದಲ್ಲಿ ಗೆದ್ದ ಪುಣೇರಿ ಪಲ್ಟನ್