Site icon Vistara News

Team India | ಮಾಹಿತಿ ನೀಡದೇ ವಿಮಾನ ಬದಲಾವಣೆ, ಇನ್ನೂ ಬಂದಿಲ್ಲ ಲಗೇಜ್‌; ಟೀಮ್‌ ಇಂಡಿಯಾ ಬೌಲರ್‌ ಬವಣೆ

Team India

ಢಾಕಾ : ನ್ಯೂಜಿಲ್ಯಾಂಡ್ ವಿರುದ್ಧದ ಏಕ ದಿನ ಸರಣಿ ಮುಗಿಸಿ ಬಾಂಗ್ಲಾದೇಶ ತಂಡದ ವಿರುದ್ಧದ ಏಕ ದಿನ ಸರಣಿಗಾಗಿ ಢಾಕಾ ತಲುಪಿರುವ ಟೀಮ್ ಇಂಡಿಯಾದ ವೇಗದ ಬೌಲರ್‌ ದೀಪಕ್‌ ಚಾಹರ್‌ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರು ಪ್ರಯಾಣಿಸಿದ ಮಲೇಷ್ಯಾ ಏರ್‌ಲೈನ್ಸ್‌ ಕಂಪನಿಯ ಸಿಬ್ಬಂದಿ ಇನ್ನೂ ಅವರ ಲಗೇಜ್‌ ತಲುಪಿಸಿಲ್ಲ. ಹೀಗಾಗಿ ಭಾನುವಾರ ನಡೆಯಲಿರುವ ಮೊದಲ ಪಂದ್ಯಕ್ಕೆ ಅವರು ಲಭ್ಯರಾಗುವುದೇ ಅನುಮಾನ ಎನಿಸಿದೆ.

ಶಿಖರ್‌ ಧವನ್‌, ರಿಷಭ್ ಪಂತ್‌, ಶಾರ್ದೂಲ್‌ ಠಾಕೂರ್‌, ವಾಷಿಂಗ್ಟನ್‌ ಸುಂದರ್ ಅವರೊಂದಿಗೆ ದೀಪಕ್‌ ಚಾಹರ್ ಕೂಡ ನ್ಯೂಜಿಲ್ಯಾಂಡ್‌ನ ಕ್ರೈಸ್ಟ್‌ಚರ್ಚ್‌ನಿಂದ ಢಾಕಾಗೆ ಬಂದಿದ್ದರು. ಮಧ್ಯದಲ್ಲಿ ಅವರು ಮಲೇಷ್ಯಾದ ಕೌಲಲಾಂಪುರದಿಂದ ಮಲೇಷ್ಯಾ ಏರ್‌ಲೈನ್ಸ್ ಮೂಲಕ ಪ್ರಯಾಣಿಸಿದ್ದರು. ಆದರೆ, ಅವರು ಬುಕ್ ಮಾಡಿದ್ದ ವಿಮಾನವೇ ಬೇರೆ, ಪ್ರಯಾಣಿಸಿದ್ದ ವಿಮಾನವೇ ಬೇರೆಯಾಗಿತ್ತು. ವಿಮಾನಯಾನ ಸಂಸ್ಥೆಯವರು ಯಾವುದೇ ಮಾಹಿತಿ ನೀಡದೆ ವಿಮಾನವನ್ನು ಬದಲಿಸಿದ್ದರು.

ದೀಪಕ್‌ ಚಾಹರ್‌ ತಮಗೆ ಪ್ರಯಾಣದ ವೇಳೆ ಆಗಿರುವ ಕೆಟ್ಟ ಅನುಭವದ ಬಗ್ಗೆ ಟ್ವೀಟ್‌ ಮಾಡಿ ಬೇಸರ ವ್ಯಕ್ತಪಡಿಸಿದ್ದಾರೆ. “ಮಲೇಷ್ಯಾ ಏರ್‌ಲೈನ್ಸ್‌ ವಿಮಾನದಲ್ಲಿ ಪ್ರಯಾಣ ಮಾಡುವಾಗ ಕೆಟ್ಟ ಅನುಭವ ಉಂಟಾಯಿತು. ಮೊದಲಿಗೆ ಅವರು ಯಾವುದೇ ಮಾಹಿತಿ ನೀಡದೇ ವಿಮಾನವನ್ನು ಬದಲಿಸಿದರು. ಬ್ಯುಸಿನೆಸ್‌ ಕ್ಲಾಸ್ ವಿಮಾನದಲ್ಲಿ ಪ್ರಯಾಣ ಮಾಡಿದ್ದರೂ ಆಹಾರ ನೀಡಿಲ್ಲ. ಇನ್ನೀಗ ಪಂದ್ಯಕ್ಕೆ ೨೪ ಗಂಟೆಗಳು ಮಾತ್ರ ಬಾಕಿ ಉಳಿದಿದೆ. ನನ್ನ ಲಗೇಜ್‌ ಕೂಡ ತಲುಪಿಸಿಲ್ಲ. ನಾಳೆ ನಾನು ಪಂದ್ಯಕ್ಕಾಗಿ ಕಣಕ್ಕೆ ಇಳಿಯಬೇಕಾಗಿದೆ,” ಎಂದು ಬರೆದುಕೊಂಡಿದ್ದಾರೆ.

ಮಲೇಷ್ಯಾ ಏರ್‌ಲೈನ್ಸ್‌ ಸಂಸ್ಥೆಯವರು ಆಗಿರುವ ತಪ್ಪಿನ ಬಗ್ಗೆ ಕ್ಷಮೆ ಕೋರಿದ್ದಾರೆ. ಅಲ್ಲದೆ, ತಮ್ಮ ಸಿಬ್ಬಂದಿ ನಿಮ್ಮೊಂದಿಗೆ ಸಂಪರ್ಕದಲ್ಲಿದ್ದು ಎಲ್ಲ ವ್ಯವಸ್ಥೆಗಳನ್ನು ಮಾಡಲಿದ್ದಾರೆ. ನಿಮ್ಮ ಪ್ರತಿಕ್ರಿಯೆಯನ್ನು ತಿಳಿಸಿ, ಎಂದು ಬರೆದುಕೊಂಡಿದ್ದಾರೆ. ಅದಕ್ಕೂ ಚಾಹರ್‌ ಸರಿಯಾಗಿ ಪ್ರತಿಕ್ರಿಯಿಸದೇ ‘ಉಪಯೋಗ ಇಲ್ಲ’ ಎಂದಷ್ಟೇ ಬರೆದುಕೊಂಡಿದ್ದಾರೆ.

ಚಾಹರ್‌ ಅವರು ಮೊದಲ ಪಂದ್ಯದಲ್ಲಿ ಕಣಕ್ಕೆ ಇಳಿಯಲಿದ್ದು, ಮೊಹಮ್ಮದ್ ಸಿರಾಜ್‌ ಜತೆ ಬೌಲಿಂಗ್‌ ವಿಭಾಗದ ಅಸ್ತ್ರ ಎನಿಸಿಕೊಳ್ಳಲಿದ್ದಾರೆ. ಮೊಹಮ್ಮದ್ ಶಮಿ ಅಲಭ್ಯರಾಗಿರುವ ಕಾರಣ ಉಮ್ರಾನ್‌ ಮಲಿಕ್‌ ಕೂಡ ಅವಕಾಶ ಪಡೆಯಲಿದ್ದಾರೆ.

ಇದನ್ನೂ ಓದಿ | IND VS BANGLA | ಬಾಂಗ್ಲಾ ವಿರುದ್ಧದ ಏಕದಿನ ಸರಣಿಯಿಂದ ಶಮಿ ಔಟ್​; ಉಮ್ರಾನ್ ಮಲಿಕ್​ಗೆ ಅವಕಾಶ

Exit mobile version