ಅಹಮದಾಬಾದ್: ಅಹ್ಮದಾಬಾದ್ನಲ್ಲಿ ಅಕ್ಟೋಬರ್ 15ರಂದು ನಡೆಯಲಿರುವ 2023 ರ ಏಕ ದಿನ ವಿಶ್ವಕಪ್ ಪಂದ್ಯದಲ್ಲಿ ಭಾರತ ತಂಡ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಎದುರಿಸಲಿದೆ. ಬಿಸಿಸಿಐ ಸಿದ್ಧಪಡಿಸಿರುವ ಕರಡು ವೇಳಾಪಟ್ಟಿಯನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಟೂರ್ನಿಯಲ್ಲಿ ಪಾಲ್ಗೊಳ್ಳಲಿರುವ ಕ್ರಿಕೆಟ್ ಸಂಸ್ಥೆಗಳ ಜತೆ ಹಂಚಿಕೊಂಡಿದೆ ಎನ್ನಲಾಗಿದೆ. ಇದರ ಮೂಲಕ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಎಲ್ಲಿ ನಡೆಯಬಹುದು ಎಂಬ ಕೌತುಕ ಬಹುತೇಕ ಅಂತ್ಯಗೊಂಡಿದೆ.
ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಪಾಕಿಸ್ತಾನ ತಂಡ ಆಡುವುದಿಲ್ಲ. ಅಲ್ಲಿನ ಕ್ರೀಡಾಂಗಣ ನಮ್ಮ ತಂಡಕ್ಕೆ ಸೇಫ್ ಅಲ್ಲ ಎಂಬುದಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ ವಾದ ಮಂಡಿಸುತ್ತಿದೆ. ಅದಕ್ಕೆ ಕಿಮ್ಮತ್ತು ನೀಡದ ಬಿಸಿಸಿಐ ಕರಡು ವೇಳಾಪಟ್ಟಿಯನ್ನು ಹಂಚಿಕೊಂಡಿದೆ. ವಿಶ್ವದ ಅತಿ ದೊಡ್ಡ ಸ್ಟೇಡಿಯಮ್ನಲ್ಲಿ ವಿಶ್ವದ ಅತ್ಯಂತ ಜಿದ್ದಾಜಿದ್ದಿನ ಕ್ರಿಕೆಟ್ ಪಂದ್ಯ ನಡೆಯಲಿದೆ. ಇವೆಲ್ಲದರ ನಡುವೆ ಅಕ್ಟೋಬರ್ 8 ರಂದು ಚೆನ್ನೈನ ಎಂ ಚಿದಂಬರಂ ಸ್ಟೇಡಿಯಂನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ತನ್ನ ವಿಶ್ವ ಕಪ್ ಅಭಿಯಾನವನ್ನು ಪ್ರಾರಂಭಿಸಲಿದೆ ಎನ್ನಲಾಗಿದೆ.
ಇಎಸ್ಪಿಎನ್ ಕ್ರಿಕ್ಇನ್ಫೋ ವರದಿಯ ಪ್ರಕಾರ, ವಿಶ್ವದ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣವಾದ ಅಹಮದಾಬಾದ್ ನರೇಂದ್ರ ಮೋದಿ ಸ್ಟೇಡಿಯಮ್ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವಿನ ಪಂದ್ಯಕ್ಕೆ ಆತಿಥ್ಯ ವಹಿಸಲಿದೆ.
2019ರ ಏಕ ದಿನ ವಿಶ್ವ ಕಪ್ನ ಫೈನಲ್ ತಲುಪಿದ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ತಂಡಗಳ ನಡುವೆ ಅಕ್ಟೋಬರ್ 5ರಂದು ನರೇಂದ್ರ ಮೋದಿ ಸ್ಟೇಡಿಯಮ್ನಲ್ಲೇ ವಿಶ್ವ ಕಪ್ಗೆ ಚಾಲನೆ ಸಿಗಲಿದೆ. ಕರಡು ವೇಳಾಪಟ್ಟಿಯಲ್ಲಿ ಸೆಮಿಫೈನಲ್ನ ಸ್ಥಳಗಳನ್ನು ಬಹಿರಂಗಪಡಿಸಲಾಗಿಲ್ಲವಾದರೂ, ಈ ಎಲ್ಲ ಪಂದ್ಯಗಳೂ ನವೆಂಬರ್ 19ರ ಬಳಿಕ ನರೇಂದ್ರ ಮೋದಿ ಸ್ಟೇಡಿಯಂನಲ್ಲೇ ನಡೆಯಲಿದೆ ಎನ್ನಲಾಗಿದೆ.
ಪಾಕಿಸ್ತಾನವು ಅಹಮದಾಬಾದ್ನಲ್ಲಿ ಭಾರತ ತಂಡದ ವಿರುದ್ಧ, ಬೆಂಗಳೂರಿನಲ್ಲಿ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ವಿರುದ್ಧ, ಚೆನ್ನೈನಲ್ಲಿ ಅಫ್ಘಾನಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ವಿರುದ್ಧ, ಕೋಲ್ಕತಾದಲ್ಲಿ ಬಾಂಗ್ಲಾದೇಶ ವಿರುದ್ಧ ಸೇರಿದಂತೆ ಭಾರತದ ಐದು ಜಾಗಗಳಲ್ಲಿ ಆಡಲಿದೆ.
ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ಪಂದ್ಯದಲ್ಲಿ ಪಂದ್ಯಾವಳಿಯ ವೇಳಾಪಟ್ಟಿ ಬಹಿರಂಗವಾಗುವ ನಿರೀಕ್ಷೆಯಿತ್ತು. ಆದರೆ ಅದು ವಿಳಂಬವಾಗಿದೆ. ಐಸಿಸಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜೆಫ್ ಅಲ್ಲಾರ್ಡೈಸ್ ಇತ್ತೀಚೆಗೆ ಮಾತನಾಡುತ್ತಾ, ಪೂರ್ಣ ಪಂದ್ಯಗಳ ವೇಳಾಪಟ್ಟಿಯನ್ನು ಆದಷ್ಟು ಬೇಗ ಪ್ರಕಟಿಸಲಾಗುವುದು ಎಂದು ಹೇಳಿದ್ದರು.
ಇದನ್ನೂ ಓದಿ : World Cup 2023: ಈ ಸ್ಟೇಡಿಯಂನಲ್ಲಿ ಪಾಕ್ ತಂಡ ಭಾರತ ವಿರುದ್ಧ ವಿಶ್ವ ಕಪ್ ಆಡಲ್ಲವಂತೆ!
ಜೂನ್ 7ರಂದು ನಾವು ಆತಿಥೇಯ ಕ್ರಿಕೆಟ್ ಮಂಡಳಿ ಬಿಸಿಸಿಐಯಿಂದ ವೇಳಾಪಟ್ಟಿ ಸ್ವೀಕರಿಸುತ್ತಿದ್ದೇವೆ ಭಾಗವಹಿಸುವ ಎಲ್ಲಾ ತಂಡಗಳು ಮತ್ತು ಪ್ರಸಾರಕರೊಂದಿಗೆ ಸಮಾಲೋಚನೆ ನಡೆಸಬೇಕಾಗಿದೆ. ನಂತರ ನಾವು ವೇಳಾಪಟ್ಟಿಯನ್ನು ಪ್ರಕಟಿಸುತ್ತೇವೆ ಎಂದು ಅಲಾರ್ಡೈಸ್ ಹೇಳಿದ್ದರು.
ಕೆಲವು ಕ್ರಿಕೆಟ್ ಮಂಡಗಳಿಗಳು ಮತ್ತು ಅಲ್ಲಿನ ಸರ್ಕಾರಗಳೊಂದಿಗೆ ಸಮಾಲೋಚನೆಗಳು ನಡೆಸಬೇಕಾಗಿದೆ. ಉತ್ತಮವಾಗಿ ವಿಶ್ವ ಕಪ್ ಆಯೋಜಿಸಲು ಆತಿಥೇಯ ಬಿಸಿಸಿಐಗೆ ಒತ್ತಡವಿದೆ ಎಂದು ಅವರು ಹೇಳಿದರು.
ಭಾರತದ ಪೂರ್ಣ ವೇಳಾಪಟ್ಟಿ ಇಲ್ಲಿದೆ
ಅಕ್ಟೋಬರ್ 8: ಭಾರತ-ಆಸ್ಟ್ರೇಲಿಯಾ, ಚೆನ್ನೈ
ಅಕ್ಟೋಬರ್ 11: ಭಾರತ-ಅಫ್ಘಾನಿಸ್ತಾನ, ದೆಹಲಿ
ಅಕ್ಟೋಬರ್ 15: ಭಾರತ-ಪಾಕಿಸ್ತಾನ, ಅಹಮದಾಬಾದ್
ಅಕ್ಟೋಬರ್ 19: ಭಾರತ-ಬಾಂಗ್ಲಾದೇಶ, ಪುಣೆ
ಅಕ್ಟೋಬರ್ 22: ಭಾರತ-ನ್ಯೂಜಿಲೆಂಡ್, ಧರ್ಮಶಾಲಾ
ಅಕ್ಟೋಬರ್ 29: ಭಾರತ-ಇಂಗ್ಲೆಂಡ್, ಲಕ್ನೋ
ನವೆಂಬರ್ 2: ಭಾರತ ವಿರುದ್ಧ ಕ್ವಾಲಿಫೈಯರ್, ಮುಂಬೈ
ನವೆಂಬರ್ 5: ಭಾರತ-ದಕ್ಷಿಣ ಆಫ್ರಿಕಾ, ಕೋಲ್ಕತಾ
ನವೆಂಬರ್ 11: ಭಾರತ-ಕ್ವಾಲಿಫೈಯರ್, ಬೆಂಗಳೂರು