ಚೆನ್ನೈ: ಬ್ಲೂಟೂತ್ ಸೇರಿದಂತೆ ನಾನಾ ಮಾದರಿಯ ಗ್ಯಾಜೆಟ್‌ಗಳನ್ನು ಬಳಸಿಕೊಂಡು ಗೆಲ್ಲುವ ಮೂಲಕ ಚೆಸ್ ಆಟಗಾರರು ಮೋಸ ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿರುವ ಹಿನ್ನೆಲೆಯಲ್ಲಿ, ಅಂತಾರಾಷ್ಟ್ರೀಯ ಮಟ್ಟದ ಚೆಸ್ ಟೂರ್ನಿಗಳಲ್ಲಿ ಆಟಗಾರರ ತಪಾಸಣೆಯನ್ನು ಹೆಚ್ಚಿಸಲಾಗಿದೆ. ಇದರಿಂದ ಆಟಗಾರರಿಗೆ ಅವಮಾನಗಳಾಗುತ್ತಿವೆ. ಅಂತೆಯೇ ಭಾರತದ ಗ್ರ್ಯಾಂಡ್ ಮಾಸ್ಟರ್ ಎಸ್‌ಎಲ್ ನಾರಾಯಣನ್ ಅವರಿಗೂ ಜರ್ಮನಿಯಲ್ಲಿ ನಡೆಯುತ್ತಿರುವ ಬಂಡೆಸ್ಲಿಗಾ ಚೆಸ್ ಲೀಗ್ ವೇಳೆ ಮುಜುಗರ ಉಂಟು ಮಾಡಲಾಗಿದೆ. ಈ ಬಗ್ಗೆ ಟ್ವೀಟರ್ ಮೂಲಕ ಬೇಸರ ವ್ಯಕ್ತಪಡಿಸಿದ್ದಾರೆ.
ಎಸ್‌ಎಲ್ ನಾರಾಯಣನ್ ಅವರು ಮೊದಲ ಸುತ್ತಿನ ಪಂದ್ಯವನ್ನು ಆಡಲು ಟೂರ್ನಮೆಂಟ್ ನಡೆಯುವ ಹಾಲ್‌ಗೆ ಹೊರಟಿದ್ದರು. ಈ ವೇಳೆ ಮೆಟಲ್ ಡಿಟೆಕ್ಟರ್‌ನಲ್ಲಿ ಸದ್ದು ಬಂದಿದೆ. ತಕ್ಷಣ ಅವರನ್ನು ತಡೆದ ಸಿಬ್ಬಂದಿ ನಾನಾ ರೀತಿಯಲ್ಲಿ ತಪಾಸಣೆಗೆ ಒಳಪಡಿಸಿದ್ದಾರೆ. ಅವರ ಬಳಿ ಏನೂ ಪತ್ತೆಯಾಗದ ಕಾರಣ ಶೂ ಹಾಗೂ ಸಾಕ್ಸ್ ಬಿಚ್ಚಿಸಿ ಬರಿಗಾಲಿನಲ್ಲಿ ಸುಮಾರು ಹೊತ್ತು ನಿಲ್ಲಿಸಿದ್ದಾರೆ. ಆದಾಗ್ಯೂ ಏನೂ ಪತ್ತೆಯಾಗದ ಹಿನ್ನೆಲೆಯಲ್ಲಿ ಸ್ಥಳದಲ್ಲೆಲ್ಲ ಹುಡುಕಾಟ ನಡೆಸಿದ್ದಾರೆ. ಈ ವೇಳೆ ನೆಲ ಹಾಸಿನಲ್ಲಿದ್ದ ಲೋಹದ ತುಣುಕಿನಿಂದ ಸದ್ದು ಬಂದಿದೆ ಎಂಬುದು ಗೊತ್ತಾಗಿದೆ. ಬಳಿಕ ಅವರನ್ನು ಆಡಲು ಒಳಕ್ಕೆ ಬಿಟ್ಟಿದ್ದರು.
ನನಗೆ ಇಂದು ಇರಸು ಮುರಸು ಉಂಟಾಯಿತು. ಮೆಟಲ್ ಡಿಟೆಕ್ಟರ್‌ನಲ್ಲಿ ಸದ್ದು ಬರುತ್ತಿದೆ ಎಂದು ಮೊದಲಿಗೆ ನನ್ನ ಶೂ ಬಿಚ್ಚಿಸಿ ಬಳಿಕ ಸಾಕ್ಸ್ ಬಿಚ್ಚಿಸಿದರು. ನನ್ನನ್ನು ನಿಲ್ಲಿಸಿ ಬೇರೆ ಆಟಗಾರನನ್ನು ಮುಂದಕ್ಕೆ ಹೋಗಲು ಹೇಳಿದರು. ಇವೆಲ್ಲವೂ ಟೂರ್ನಮೆಂಟ್ ನಡೆಯುವ ಹಾಲ್‌ನಲ್ಲಿ ಘಟಿಸಿತು. ಮತ್ತೊಬ್ಬ ಆಟಗಾರನೂ ಹೋಗುವಾಗ ಮತ್ತೆ ಸದ್ದು ಬಂದ ಕಾರಣ ಪ್ಲೋರ್ ಮ್ಯಾಟ್ ಪರೀಕ್ಷೆ ಮಾಡಲಾಯಿತು. ಈ ವೇಳೆ ಏನೂ ವಸ್ತು ಸಿಕ್ಕಿತು. ಬಳಿಕ ಅಲ್ಲಿನ ಆರ್ಬಿಟರ್‌ಗಳು ನನ್ನ ಕ್ಷಮೆ ಕೋರಿದರು. ಆದರೆ, ನನಗೆ ಅವಮಾನ ಮಾಡುವ ಮೊದಲು ಫ್ಲೋರ್ ಮ್ಯಾಚ್ ಪರೀಕ್ಷೆ ಮಾಡಿದ್ದರೆ ಅನುಕೂಲ ಆಗಿರುತ್ತಿತ್ತು. ಇದನ್ನು ನಾನು ಇಂದು ಹೇಳದೆ ಹೋದರೆ ಭವಿಷ್ಯದಲ್ಲಿ ಬೇರೆ ಆಟಗಾರರೂ ಇದೇ ಮಾದರಿಯ ಅವಮಾನಗಳನ್ನು ಎದುರಿಸುವ ಸಾಧ್ಯತೆಗಳು ಇವೆ,” ಎಂಬುದಾಗಿ ನಾರಾಯಣನ್ ಅವರು ಬರೆದುಕೊಂಡಿದ್ದಾರೆ.
ಇದನ್ನೂ ಓದಿ | Grandmaster | ಭಾರತದ 76ನೇ ಗ್ರ್ಯಾಂಡ್ ಮಾಸ್ಟರ್ ಆಗಿ ಹೊರಹೊಮ್ಮಿದ ಬೆಂಗಳೂರಿನ ತರುಣ ಪ್ರಣವ್