Site icon Vistara News

ಮೀಸಲಾತಿ ಇರುತ್ತಿದ್ದರೆ ಭಾರತ ವಿಶ್ವಕಪ್​ ಗೆಲ್ಲುತ್ತಿತ್ತು ಎಂದ ಚೇತನ್; ಮತ್ತೆ ವಿವಾದ

Chetan

ಬೆಂಗಳೂರು: ಐಸಿಸಿ ಏಕದಿನ ವಿಶ್ವಕಪ್​ ಕ್ರಿಕೆಟ್​ನಲ್ಲಿ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಸೋಲು ಕಂಡು ಕಪ್​ ಗೆಲ್ಲುವಲ್ಲಿ ಎಡವಿದೆ. ಕ್ರಿಕೆಟ್ ಅಭಿಮಾನಿಗಳು ಭಾರತದ ಸೋಲಿನ ನೋವಿನಲ್ಲಿದ್ದರೆ, ನಟ ಚೇತನ್ ಅಹಿಂಸಾ(Chetan Ahimsa) ಅವರು ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿ ಟೀಕೆಗೆ ಗುರಿಯಾಗಿದ್ದಾರೆ.

ಭಾರತ ತಂಡ ಸೋಲು ಕಂಡ ಬೆನ್ನಲ್ಲೇ ಸಾಮಾಜಿಕ ಜಾಲತಾಣವಾದ ಟ್ವಿಟರ್​ ಎಕ್ಸ್​ನಲ್ಲಿ ಟ್ವೀಟ್ ಮಾಡಿರುವ ಚೇತನ್, ಭಾರತ ತಂಡದಲ್ಲಿ ಮೀಸಲಾತಿ ಅಗತ್ಯವಿದೆ. ಇದು ಸಾಧ್ಯವಾಗುತ್ತಿದ್ದರೆ ತಂಡ ಕಪ್​ ಗೆಲ್ಲುತ್ತಿತ್ತು ಎಂದು ಹೇಳಿದ್ದಾರೆ. ಅವರ ಈ ಟ್ವೀಟ್​ ಪರ ಮತ್ತು ವಿರೋಧದ ಚರ್ಚೆಗೆ ಕಾರಣವಾಗಿದೆ.

ಚೇತನ್ ಅವರ ಟ್ವೀಟ್​ ಪೋಸ್ಟ್​

“ನಾನು ಮತ್ತೆ ಹೇಳುತಿದ್ದೇನೆ, ಭಾರತಕ್ಕೆ ಕ್ರಿಕೆಟ್‌ನಲ್ಲಿ ಮೀಸಲಾತಿ ಅಗತ್ಯವಿದೆ. ಭಾರತಕ್ಕೆ ಕ್ರಿಕೆಟ್‌ನಲ್ಲಿ ಮೀಸಲಾತಿ ಇದ್ದಿದ್ದರೆ ಭಾರತ ಫೈನಲ್​ನಲ್ಲಿ ಸುಲಭವಾಗಿ ವಿಶ್ವಕಪ್​ ಗೆಲ್ಲುತ್ತಿತ್ತು” ಎಂದು ಚೇತನ್ ತಮ್ಮ ಟ್ವಿಟರ್​ ಎಕ್ಸ್​ನಲ್ಲಿ ಪೋಸ್ಟ್ ಮಾಡಿದ್ದಾರೆ.

ಚೇತನ್​ ಅವರು ಈ ರೀತಿಯ ಹೇಳಿಕೆ ನೀಡುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ಈ ರೀತಿಯ ಹೇಳಿಕೆಗಳನ್ನು ನೀಡಿದ್ದರು. ಅಲ್ಲದೆ ಭಾರತ ತಂಡದಲ್ಲಿ ಮೀಸಲಾತಿಯ ಅಗತ್ಯವಿದೆ ಎಂದು ಹಲವು ಬಾರಿ ಹೇಳಿಕೆ ನೀಡಿದ್ದರು. ಇದೇ ವೀಚಾರವಾಗಿ ಕೆಲ ಮಾಧ್ಯಮಗಳಲ್ಲಿ ಭಾರಿ ಚರ್ಚೆಯೂ ನಡೆದಿತ್ತು.

ಪಂದ್ಯ ಸೋತ ಭಾರತ

ನರೇಂದ್ರ ಮೋದಿ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತ ಭಾರತ ತಂಡ ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನ ಪಡೆಯಿತು. ಆದರೆ, ಬ್ಯಾಟಿಂಗ್ ವೈಫಲ್ಯ ಎದುರಿಸಿದ ಭಾರತ ತಂಡ ನಿಗದಿತ 50 ಓವರ್​ಗಳಲ್ಲಿ 240 ರನ್​ಗಳಿಗೆ ಆಲ್ಔಟ್ ಆಯಿತು. ಪ್ರತಿಯಾಗಿ ಬ್ಯಾಟ್​ ಮಾಡಿದ ಆಸ್ಟ್ರೇಲಿಯಾ ತಂಡ 43 ಓವರ್​ಗಳಲ್ಲಿ 4 ವಿಕೆಟ್ ಕಳೆದುಕೊಂಡು 241 ರನ್ ಬಾರಿಸಿ ನಿರಾಯಾಸ ವಿಜಯ ಕಂಡಿತು. ಆಸ್ಟ್ರೇಲಿಯಾ ತಂಡದ ಪರ ಆರಂಭಿಕ ಬ್ಯಾಟರ್​​ ಟ್ರಾವಿಸ್ ಹೆಡ್​ 137 ರನ್​ ಬಾರಿಸಿ ಗೆಲುವಿನ ರೂವಾರಿ ಎನಿಸಿಕೊಂಡರು.

ಇದನ್ನೂ ಓದಿ IND vs AUS Final: ಭಾರತಕ್ಕೆ ಮತ್ತೆ ಕಂಟಕವಾದ ಅಂಪೈರ್; ನಿರೀಕ್ಷೆಯಂತೆ ಈ ಬಾರಿಯೂ ಸೋಲು

ತವರು ನೆಲದಲ್ಲಿ ನಡೆದ ವಿಶ್ವ ಕಪ್ ಆವೃತ್ತಿಯಲ್ಲಿ ಟ್ರೋಫಿ ಗೆದ್ದೇ ಗೆಲ್ಲುತ್ತೇವೆ ಎಂಬ ಟೀಮ್​ ಇಂಡಿಯಾದ ಹುಮ್ಮಸ್ಸು ಬತ್ತಿ ಹೋಯಿತು. ನರೇಂದ್ರ ಮೋದಿ ಸ್ಟೇಡಿಯಮ್​ನಲ್ಲಿ ನಡೆದ ಏಕ ದಿನ ವಿಶ್ವ ಕಪ್​ನ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ತಲೆ ಬಾಗಿದ ಟೀಮ್ ಇಂಡಿಯಾದ ಪ್ರಯತ್ನಗಳು ಭಗ್ನವಾಗಿದೆ. 2003ರ ವಿಶ್ವ ಕಪ್​ನ ಫೈನಲ್ ಫಲಿತಾಂಶವು ಮತ್ತೊಂದು ಬಾರಿ ಪುನರಾವರ್ತನೆಯಾಗಿದೆ. ಅಂದು ಭಾರತ ತಂಡ ಆಸ್ಟ್ರೇಲಿಯಾ ತಂಡದ ವಿರುದ್ಧವೇ 125 ರನ್​ಗಳಿಂದ ಸೋಲು ಕಂಡಿತ್ತು.

Exit mobile version