ಮುಂಬಯಿ: ಭಾರತ ಟಿ20 ತಂಡದಲ್ಲಿ ರೋಹಿತ್ ಶರ್ಮಾ(Rohit Sharma) ಮತ್ತು ವಿರಾಟ್ ಕೊಹ್ಲಿ(virat kohli) ಅವರ ಆಟ ಬಹುತೇಕ ಮುಕ್ತಾಯಗೊಂಡಿದೆ ಎಂದು ಭಾರತ ಕ್ರಿಕೆಟ್ ತಂಡದ ಪ್ರಧಾನ ಆಯ್ಕೆಗಾರ ಚೇತನ್ ಶರ್ಮಾ(Chetan Sharma) ಅವರು ಖಾಸಗಿ ವಾಹಿನಿಯೊಂದು ನಡೆಸಿದ ರಹಸ್ಯ ಕಾರ್ಯಾಚರಣೆಯಲ್ಲಿ ಹೇಳಿದ್ದಾರೆ.
ರಹಸ್ಯ ಕಾರ್ಯಾಚರಣೆಯಲ್ಲಿ ಮಾತನಾಡಿದ ಚೇತನ್ ಶರ್ಮಾ, ರೋಹಿತ್ ಶರ್ಮಾ ಟಿ20 ತಂಡಕ್ಕೆ ಇನ್ನು ವಾಪಸ್ ಆಗುವುದಿಲ್ಲ. ಹಾರ್ದಿಕ್ ಪಾಂಡ್ಯ (Hardik Pandya) ನಾಯಕನಾಗಿ ನೇಮಕಗೊಳ್ಳಲಿದ್ದಾರೆ. ರೋಹಿತ್ ಹಾಗೂ ಹಾರ್ದಿಕ್ ನನ್ನ ಮೇಲೆ ಭಾರೀ ನಂಬಿಕೆ ಇಟ್ಟಿದ್ದಾರೆ. ಅವರಿಬ್ಬರೂ ನಾನು ಏನು ಹೇಳಿದರೂ ಹಿಂದೆ ಮುಂದೆ ವಿಚಾರಿಸದೆ ನಂಬುತ್ತಾರೆ. ಇಬ್ಬರೂ ನನ್ನ ಮನೆಗೆ ಆಗಾಗ ಭೇಟಿ ನೀಡುತ್ತಾರೆ ಎಂದು ತಿಳಿಸಿದ್ದಾರೆ.
ರೋಹಿತ್ ಅನುಪಸ್ಥಿತಿಯಲ್ಲಿ ಟಿ20 ನಾಯಕತ್ವ ವಹಿಸಿದ ಮೇಲೆ ಹಾರ್ದಿಕ್ ಪಾಂಡ್ಯ ಹೆಚ್ಚಾಗಿ ನನ್ನ ಮನೆಗೆ ಬರುತ್ತಿರುತ್ತಾರೆ. ನನ್ನ ಮನೆಯ ಒಂದು ಸೋಫಾ ಎಂದಿಗೂ ಪಾಂಡ್ಯ ಅವರಿಗೆ ಮೀಸಲಿರುತ್ತದೆ. ಪಾಂಡ್ಯ ನಾಯಕತ್ವದಲ್ಲಿ ಆಡಲಾದ ಎಲ್ಲ ಟಿ20 ಸರಣಿಗೂ ಮುನ್ನ ಅವರು ನನ್ನ ಮನೆಗೆ ಭೀಟಿ ನೀಡಿ ತಂಡದಲ್ಲಿ ಯಾವ ಆಟಗಾರ ಇರಬೇಕೆಂದು ನಿರ್ಧರಿಸುತ್ತಿದ್ದರು ಎಂದು ಚೇತನ್ ಶರ್ಮಾ ಹೇಳಿದ್ದಾರೆ.
ಇದನ್ನೂ ಓದಿ Chetan Sharma: ವಿವಾದಾತ್ಮಕ ಹೇಳಿಕೆ ನೀಡಿದ ಚೇತನ್ ಶರ್ಮಾ ತಲೆದಂಡ ಸಾಧ್ಯತೆ; ಸಭೆ ಕರೆದ ಬಿಸಿಸಿಐ
ಟಿ20 ತಂಡದಲ್ಲಿ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ ಎನ್ನುವುದು ಕೇಲವ ಸುದ್ದಿ ಮಾತ್ರ. ಆದರೆ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಮೊಹಮ್ಮದ್ ಶಮಿ ಅವರಂತಹ ಅನೇಕ ಹಿರಿಯ ಆಟಗಾರರ ಆಟ ಬಹುತೇಕ ಮುಕ್ತಾಯ ಕಂಡಿದೆ. ಈ ವಿಚಾರ ಈ ಆಟಗಾರರಿಗೂ ತಿಳಿದಿದೆ. ಆದರೆ ಎಲ್ಲಿಯೂ ಬಹಿರಂಗಪಡಿಸಿಲ್ಲ. ಇನ್ನು ಟಿ20 ಕ್ರಿಕೆಟ್ಗೆ ಹಾರ್ದಿಕ್ ಪಾಂಡ್ಯ ಅವರೇ ನಾಯಕನಾಗಿ ಮುಂದುವರಿಯಲಿದ್ದಾರೆ ಇದು ಕೆಲ ದಿನಗಳಲ್ಲಿ ಅಧಿಕೃತಗೊಳ್ಳಲಿದೆ. ಈ ವಿಚಾರ ರೋಹಿತ್ ಶರ್ಮಾ ಅವರಿಗೂ ತಿಳಿದಿದೆ ಎಂದು ಅವರು ಹೇಳಿದ್ದಾರೆ. ಇದೀಗ ಚೇತನ್ ಶರ್ಮಾ ಅವರ ಈ ಹೇಳಿಕೆ ಕ್ರಿಕೆಟ್ ಜಗತ್ತಿನಲ್ಲಿ ಭಾರಿ ಸಂಚಲನ ಮೂಡಿಸಿದೆ.