ಲಂಡನ್: ಟೀಮ್ ಇಂಡಿಯಾದ ಟೆಸ್ಟ್ ಸ್ಪೆಷಲಿಸ್ಟ್, ಚೇತೇಶ್ವರ ಪೂಜಾರ(Cheteshwar Pujara) ಅವರ ಸಸೆಕ್ಸ್ ಕೌಂಟಿ(Sussex stint) ಕ್ರಿಕೆಟ್ ಕ್ಲಬ್ ಜತೆಗಿನ ಪಯಣ ಅಂತ್ಯ ಕಂಡಿದೆ. ಆಸ್ಟ್ರೇಲಿಯಾದ ಡೇನಿಯಲ್ ಹ್ಯೂಸ್(Daniel Hughes) ಅವರ ಸೇವೆ ಉಳಿಸಿಕೊಳ್ಳುವುದಕ್ಕಾಗಿ ಸಸೆಕ್ಸ್ ಕೌಂಟಿ ಕ್ರಿಕೆಟ್ ಕ್ಲಬ್ ತಂಡವು ಪೂಜಾರ ಅವರನ್ನು ಕೈಬಿಡಲು ನಿರ್ಧರಿಸಿದೆ.
ಎಡಗೈ ಬ್ಯಾಟರ್ ಹ್ಯೂಸ್ ಅವರು ಮುಂದಿನ ಋತುವಿನಲ್ಲಿ ಕೌಂಟಿ ಕ್ರಿಕೆಟ್‌ನ ಎಲ್ಲ ಚಾಂಪಿಯನ್‌ಷಿಪ್ ಮತ್ತು ಟಿ20 ವಿಟಾಲಿಟಿ ಬ್ಲಾಸ್ಟ್ ಪಂದ್ಯಗಳಿಗೆ ಲಭ್ಯವಿರುವ ಕಾರಣ ಚೇತೇಶ್ವರ ಪೂಜಾರ ಅವರನ್ನು ಕೈಬಿಡಲಾಗುವುದು ಎಂದು ಸಸೆಕ್ಸ್ ಕೌಂಟಿ ಕ್ಲಬ್ ತಿಳಿಸಿದೆ.
ಪೂಜಾರ 2024ರಲ್ಲಿ ಸತತ ಮೂರನೇ ಬಾರಿಗೆ ಸಸೆಕ್ಸ್ ತಂಡಕ್ಕೆ ಮರಳಿದ್ದರು. ಹ್ಯೂಸ್ ತಂಡಕ್ಕೆ ಬರುವ ಮೊದಲು ಅವರು ಮೊದಲ ಏಳು ಚಾಂಪಿಯನ್‌ಷಿಪ್ ಪಂದ್ಯಗಳನ್ನು ಆಡಿದ್ದರು. ಹ್ಯೂಸ್ ಈ ವರ್ಷದ ಬ್ಲಾಸ್ಟ್‌ನ ಗುಂಪು ಹಂತಗಳಲ್ಲಿ ಐದು ಅರ್ಧಶತಕಗಳು ಸೇರಿದಂತೆ 43.07 ಸರಾಸರಿಯಲ್ಲಿ 560 ರನ್ ಗಳಿಸಿ ಗಮನ ಸೆಳೆದಿದ್ದರು. ಪೂಜಾರ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದರು. ಇದೇ ಕಾರಣಕ್ಕೆ ಅವರನ್ನು ಕೈ ಬಿಟ್ಟು ಹ್ಯೂಸ್ ಅವರನ್ನು ತಂಡದಲ್ಲಿ ಉಳಿಸಿಕೊಳ್ಳಲು ಕ್ಲಬ್ ನಿರ್ಧರಿಸಿದೆ. ರಾಷ್ಟ್ರೀಯ ತಂಡದ ಪರ ರನ್ ಕಲೆ ಹಾಕುವಲ್ಲಿ ವಿಫಲರಾದ ಕಾರಣ ಪೂಜಾರ ಅವರು ಟೀಮ್ ಇಂಡಿಯಾದಿಂದ ದೂರ ಉಳಿದಿದ್ದಾರೆ.
ಇದನ್ನೂ ಓದಿ ತಾಯಿ ಕುಸಿದು ಬಿದ್ದ ಕೂಡಲೇ ಅಶ್ವಿನ್ ನೆರವಿಗೆ ಬಂದದ್ದು ಚೇತೇಶ್ವರ ಪೂಜಾರ
35 ವರ್ಷದ ಪೂಜಾರ ಕೊನೆಯ ಬಾರಿ ಭಾರತ ಪರ ಆಡಿದ್ದು ಜುಲೈ 2023 ರಲ್ಲಿ ನಡೆದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ. ಕಳಪೆ ಬ್ಯಾಟಿಂಗ್ ಫಾರ್ಮ್ನಿಂದಾಗಿ ಅವರು ತಂಡದಿಂದ ಹೊರಬಿದ್ದಿದ್ದರು. ಪೂಜಾರ ಎರಡೂ ಇನಿಂಗ್ಸ್ನಲ್ಲಿ ಕಳಪೆ ಬ್ಯಾಟಿಂಗ್ ಪ್ರದರ್ಶನ ತೋರಿದ್ದರು. ಅದರಲ್ಲೂ ಮೊದಲ ಇನಿಂಗ್ಸ್ನಲ್ಲಿ ವಿಕೆಟ್ಗೆ ಬಂದ ಚೆಂಡನ್ನು ಬ್ಯಾಟ್ ಎತ್ತಿ ಹಿಡಿದು ಕ್ಲೀನ್ ಬೌಲ್ಡ್ ಆಗಿದ್ದರು. ಪೂಜಾರ ಈ ರೀತಿ ವಿಕೆಟ್ ಒಪ್ಪಿಸಿದ್ದನ್ನು ಕಂಡು ಅನೇಕ ಮಾಜಿ ಕ್ರಿಕೆಟಿಗರು ಟೀಕೆ ವ್ಯಕ್ತಪಡಿಸಿದ್ದರು. ಪೂಜಾರ ಇದುವರೆಗೆ ಭಾರತ ಪರ 103 ಟೆಸ್ಟ್ ಪಂದ್ಯ ಆಡಿ 7195 ರನ್ ಬಾರಿಸಿದ್ದಾರೆ. ಇದರಲ್ಲಿ 19 ಶತಕ ಮತ್ತು 35 ಅರ್ಧಶತಕ ಒಳಗೊಂಡಿದೆ.
ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಅತ್ಯಧಿಕ ದ್ವಿಶತಕ ಬಾರಿಸಿದ ಮೊದಲ ಭಾರತೀಯ ಎಂಬ ದಾಖಲೆ ಚೇತೇಶ್ವರ ಹೆಸರಿನಲ್ಲಿದೆ. ಅವರು ಒಟ್ಟು 17* ದ್ವಿಶತಕ ಬಾರಿಸಿದ್ದಾರೆ. 61 ಶತಕಗಳು ಹಾಗೂ 78 ಅರ್ಧಶತಕಗಳು ಕೂಡ ಬಾರಿಸಿದ್ದಾರೆ. ಇನ್ನು ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ 20 ಸಾವಿರ ರನ್ ಪೂರೈಸಿದ ಭಾರತದ 4ನೇ ಬ್ಯಾಟರ್ ಎಂಬ ಹೆಗ್ಗಳಿಕೆಯೂ ಪೂಜಾರ ಅವರದ್ದಾಗಿದೆ.