ಲಂಡನ್ : ಭಾರತದ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ ಪೂಜಾರ ಲಂಡನ್‌ನಲ್ಲಿ ಸ್ಫೋಟಕ ಬ್ಯಾಟರ್ ಆಗಿ ಪರಿವರ್ತನೆಗೊಂಡಿದ್ದಾರೆ. ರಾಯಲ್ ಲಂಡನ್ ಕಪ್-೨೦೨೨ (Royal London Cup) ಟೂರ್ನಿಯಲ್ಲಿ ಆಡುತ್ತಿರುವ ಅವರು ಶತಕಗಳ ಮೇಲೆ ಶತಕ ಬಾರಿಸುತ್ತಿದ್ದಾರೆ. ಮಂಗಳವಾರ ಮಿಡ್ಲ್‌ಸೆಕ್ಸ್ ವಿರುದ್ಧ ಶತಕ ಬಾರಿಸಿದ್ದು, ಕಳೆದ 11 ದಿನಗಳಲ್ಲಿ ಮೂರು ಶತಕಗಳನ್ನು ಬಾರಿಸಿದಂತಾಗಿದೆ. ಈ ಬಾರಿ ಅವರು ೭೫ ಎಸೆತಗಳಲ್ಲಿ ಶತಕ ಬಾರಿಸಿದ್ದು, ೯೦ ಎಸೆತಗಳನ್ನು ಎದುರಿಸಿ ೧೩೨ ರನ್ ಬಾರಿಸಿದ್ದಾರೆ. ಜತೆಗೆ ಪ್ರಸ್ತುತ ನಡೆಯುತ್ತಿರುವ ರಾಯಲ್ ಲಂಡನ್ ಕಪ್‌ನಲ್ಲಿ ಈಗಲೇ ಒಟ್ಟು ೫೦೦ ರನ್‌ಗಳನ್ನು ಗಳಿಸಿದ್ದಾರೆ.
ಪೂಜಾರ ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಸಸೆಕ್ಸ್ ತಂಡ 50 ಓವರ್‌ಗಳಲ್ಲಿ ೪ ವಿಕೆಟ್ ನಷ್ಟಕ್ಕೆ ೪೦೦ ರನ್ ಬಾರಿಸಿದೆ. ಬ್ಯಾಟಿಂಗ್ ಆರಂಭಿಸಿದ ಸಸೆಕ್ಸ್ ತಂಡದ ಆರಂಭಿಕ ಬ್ಯಾಟರ್ ೧೮೯ ರನ್ ಬಾರಿಸಿದರೆ, ಚೇತೇಶ್ವರ್ ಪೂಜಾರ ೧೩೨ ರನ್ ಕಲೆಹಾಕಿದರು. ಇವರಿಬ್ಬರ ಬ್ಯಾಟಿಂಗ್‌ನಿಂದಲೇ ಸಸೆಕ್ಸ್ ತಂಡ ಎದುರಾಳಿ ಮಿಡ್ಲ್‌ಸೆಕ್ಸ್ ತಂಡಕ್ಕೆ ದೊಡ್ಡ ಮೊತ್ತದ ಗುರಿಯನ್ನು ಒಡ್ಡಿತು.