Site icon Vistara News

Cheteshwar Pujara: ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ ವಿಶೇಷ ದಾಖಲೆ ಬರೆದ ಚೇತೇಶ್ವರ್​ ಪೂಜಾರ

Cheteshwar Pujara

ನಾಗ್ಪುರ: ಟೀಮ್​ ಇಂಡಿಯಾದ ಹಿರಿಯ ಆಟಗಾರ ಚೇತೇಶ್ವರ್​ ಪೂಜಾರ(Cheteshwar Pujara) ಅವರು ದೇಶೀ ಕ್ರಿಕೆಟ್​ ಟೂರ್ನಿಯಲ್ಲಿ ದಾಖಲೆಯೊಂದನ್ನು ಬರೆದಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ 20 ಸಾವಿರ ರನ್ ಪೂರೈಸಿದ ಭಾರತದ 4ನೇ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ರಣಜಿ ಟ್ರೋಫಿಯ ಸೌರಾಷ್ಟ್ರ ವಿರುದ್ಧದ ಪಂದ್ಯದಲ್ಲಿ ವಿದರ್ಭ ಪರ ಕಣಕ್ಕಿಳಿದ ಪೂಜಾರ ದ್ವಿತೀಯ ಇನಿಂಗ್ಸ್​ನಲ್ಲಿ 43 ರನ್ ಬಾರಿಸಿದ ವೇಳೆ 20 ಸಾವಿರ ರನ್​ಗಳ ಮೇಲುಗಲ್ಲು ತಲುಪಿದರು. ಇದಕ್ಕೂ ಮುನ್ನ ಸುನಿಲ್ ಗವಾಸ್ಕರ್ (25,834), ಸಚಿನ್ ತೆಂಡೂಲ್ಕರ್ (25,396), ಮತ್ತು ರಾಹುಲ್ ದ್ರಾವಿಡ್ (23,794) ಈ ಸಾಧನೆ ಮಾಡಿದ್ದರು. ಇದೀಗ 260 ಪ್ರಥಮ ದರ್ಜೆ ಪಂದ್ಯಗಳ ಮೂಲಕ ಪೂಜಾರ ಕೂಡ ಈ ಎಲೈಟ್​ ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ. ಸದ್ಯ ಪೂಜಾರ 20,013* ರನ್ ಕಲೆಹಾಕಿದ್ದಾರೆ.

ದ್ವಿಶತಕದ ದಾಖಲೆ


ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ ಅತ್ಯಧಿಕ ದ್ವಿಶತಕ ಬಾರಿಸಿದ ಮೊದಲ ಭಾರತೀಯ ಎಂಬ ದಾಖಲೆ ಚೇತೇಶ್ವರ ಹೆಸರಿನಲ್ಲಿದೆ. ಅವರು ಒಟ್ಟು 17* ದ್ವಿಶತಕ ಬಾರಿಸಿದ್ದಾರೆ. 61 ಶತಕಗಳು ಹಾಗೂ 78 ಅರ್ಧಶತಕಗಳು ಕೂಡ ಬಾರಿಸಿದ್ದಾರೆ.

35 ವರ್ಷದ ಪೂಜಾರ ಕೊನೆಯ ಬಾರಿ ಭಾರತ ಪರ ಆಡಿದ್ದು ಜುಲೈ 2023 ರಲ್ಲಿ ನಡೆದ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ ಫೈನಲ್​ನಲ್ಲಿ. ಕಳಪೆ ಬ್ಯಾಟಿಂಗ್​ ಫಾರ್ಮ್​ನಿಂದಾಗಿ ಅವರು ತಂಡದಿಂದ ಹೊರಬಿದ್ದಿದ್ದರು. ಪೂಜಾರ ಎರಡೂ ಇನಿಂಗ್ಸ್​ನಲ್ಲಿ ಕಳಪೆ ಬ್ಯಾಟಿಂಗ್​ ಪ್ರದರ್ಶನ ತೋರಿದ್ದರು. ಅದರಲ್ಲೂ ಮೊದಲ ಇನಿಂಗ್ಸ್​ನಲ್ಲಿ ವಿಕೆಟ್​ಗೆ ಬಂದ ಚೆಂಡನ್ನು ಬ್ಯಾಟ್​ ಎತ್ತಿ ಹಿಡಿದು ಕ್ಲೀನ್​ ಬೌಲ್ಡ್​ ಆಗಿದ್ದರು. ಪೂಜಾರ ಈ ರೀತಿ ವಿಕೆಟ್​ ಒಪ್ಪಿಸಿದ್ದನ್ನು ಕಂಡು ಅನೇಕ ಮಾಜಿ ಕ್ರಿಕೆಟಿಗರು ಟೀಕೆ ವ್ಯಕ್ತಪಡಿಸಿದ್ದರು. ಸದ್ಯ ರಣಜಿಯಲ್ಲಿ ಆಡಿ ಮತ್ತೆ ಗಮನ ಸೆಳೆಯುತ್ತಿರುವ ಪೂಜಾರ ಇಂಗ್ಲೆಂಡ್​ ವಿರುದ್ಧದ ತವರಿನ ಮೂರನೇ ಟೆಸ್ಟ್​ ಪಂದ್ಯಕ್ಕೆ ಆಯ್ಕೆಯಾಗುವ ಸಾಧ್ಯತೆ ಇದೆ.

ಇದನ್ನೂ ಓದಿ Ranji Trophy 2024 : ಲಕ್ಷ್ಮಣ್​ ದಾಖಲೆ ಮುರಿದ ಚೇತೇಶ್ವರ್​ ಪೂಜಾರ


ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ 20 ಸಾವಿರ ರನ್ ಪೂರೈಸಿದ ಪೂಜಾರ ಅವರಿಗೆ ಬಿಸಿಸಿಐ ಅಭಿನಂದನೆ ಸಲ್ಲಿಸಿದೆ. ಪೂಜಾರ ಇದುವರೆಗೆ ಭಾರತ ಪರ 103 ಟೆಸ್ಟ್​ ಪಂದ್ಯ ಆಡಿ 7195 ರನ್​ ಬಾರಿಸಿದ್ದಾರೆ. ಇದರಲ್ಲಿ 19 ಶತಕ ಮತ್ತು 35 ಅರ್ಧಶತಕ ಒಳಗೊಂಡಿದೆ.

Exit mobile version