ಬೆಂಗಳೂರು : ಸಂಜು ಸ್ಯಾಮ್ಸನ್ ವರ್ಸಸ್ ರಿಷಭ್ ಪಂತ್ (SanjuvsRishabh) ಪ್ರಸ್ತುತ ಭಾರತೀಯ ಕ್ರಿಕೆಟ್ ಕ್ಷೇತ್ರದ ಬಹು ಚರ್ಚಿತ ವಿಕೆಟ್‌ಕೀಪರ್‌ಗಳು. ಅದರಲ್ಲೂ ಸಂಜು ಸ್ಯಾಮ್ಸನ್ ಅವರ ಅಭಿಮಾನಿಗಳು ಕಂಡ ಕಂಡಲ್ಲಿ ಬ್ಯಾನರ್ ಹಿಡಿದು ಟೀಮ್ ಇಂಡಿಯಾಗೆ ಸೇರಿಸಿಕೊಳ್ಳಬೇಕು ಎಂದು ಒತ್ತಾಯ ಮಾಡುತ್ತಿದ್ದಾರೆ. ಅಲ್ಲದೆ, ಬಿಸಿಸಿಐ ಸಂಜು ಅವರ ವಿರುದ್ಧವಾಗಿದೆ ಎಂಬುದಾಗಿಯೂ ಬಿಂಬಿಸುತ್ತಿದ್ದಾರೆ. ಆದರೆ, ಸಂಜು ಸ್ಯಾಮ್ಸನ್ ಅವರ ಬಾಲ್ಯದ ಕೋಚ್ ಬಿಜು ಅವರು ಈ ಎಲ್ಲ ಆರೋಪಗಳನ್ನು ನಿರಾಕರಿಸಿದ್ದಾರೆ. ಇವೆಲ್ಲವೂ ಕೇರಳದ ಅಭಿಮಾನಿಗಳು ಸೃಷ್ಟಿ ಮಾಡುತ್ತಿರುವ ಗೊಂದಲ ಎಂಬುದಾಗಿ ಹೇಳಿದ್ದಾರೆ.
ಸಂಜು ಸ್ಯಾಮ್ಸನ್ ಅವರನ್ನು ಟೀಮ್ ಇಂಡಿಯಾದಲ್ಲಿ ಅನಗತ್ಯವಾಗಿ ತಿರಸ್ಕರಿಸಲಾಗುತ್ತಿದೆ. ಅವರು ಉತ್ತಮ ಪ್ರದರ್ಶನ ನೀಡುತ್ತಿರುವ ಹೊರತಾಗಿಯೂ ಅವಕಾಶ ನೀಡುತ್ತಿಲ್ಲ. ರಿಷಭ್ ಪಂತ್ ಬ್ಯಾಟಿಂಗ್‌ನಲ್ಲಿ ವೈಫಲ್ಯ ಕಾಣುತ್ತಿದ್ದರೂ ತಂಡದಲ್ಲಿ ಅವಕಾಶ ನೀಡಲಾಗುತ್ತಿದೆ ಎಂದೆಲ್ಲ ಆರೋಪಿಸಲಾಗುತ್ತಿದೆ. ಕತಾರ್‌ನಲ್ಲಿ ನಡೆಯುತ್ತಿರುವ ಫುಟ್ಬಾಲ್ ವಿಶ್ವ ಕಪ್‌ನಲ್ಲೂ ಅವರ ಅಭಿಮಾನಿಗಳು ಬ್ಯಾನರ್ ತೋರಿಸಿ ಸಂಜುವನ್ನು ತಂಡಕ್ಕೆ ಸೇರಿಸಿಕೊಳ್ಳಿ ಎಂದು ಒತ್ತಡ ಹೇರಿದ್ದರು.
ಈ ವಿಚಾರವನ್ನು ಇಟ್ಟುಕೊಂಡು ಮಾತನಾಡಿದ ಬಿಜು, “ಸಾಮಾಜಿಕ ಜಾಲತಾಣಗಳಲ್ಲಿ ರಿಷಭ್ ಪಂತ್ ವಿರುದ್ಧ ಅಭಿಯಾನ ಆರಂಭಿಸಿರುವುದರಲ್ಲಿ ಯಾವುದೇ ಅರ್ಥವಿಲ್ಲ. ಪಂತ್ ಹಲವು ವರ್ಷಗಳಿಂದ ಟೀಮ್ ಇಂಡಿಯಾದಲ್ಲಿರುವ ಕಾರಣ ಅವಕಾಶ ಪಡೆಯುತ್ತಿದ್ದಾರೆ. ಹಾಗೆಂದು ಸಂಜು ಮತ್ತು ಪಂತ್ ನಡುವೆ ಯಾವುದೇ ಸಂಘರ್ಷಗಳು ಇಲ್ಲ. ಸಂಜು ಉತ್ತಮ ಆಟಗಾರ ಹಾಗೂ ಪೂರ್ಣ ಪ್ರಮಾಣದ ಬ್ಯಾಟರ್ ಆಗಿ ಟೀಮ್ ಇಂಡಿಯಾದಲ್ಲಿ ಆಡಬಹುದು. ಕಳೆದ ಹಲವು ವರ್ಷಗಳಿಂದ ನೋಡಿದರೆ ಪಂತ್ ಅವರ ವಿಕೆಟ್‌ಕೀಪಿಂಗ್ ಕೌಶಲ ಚೆನ್ನಾಗಿದೆ. ಟೆಸ್ಟ್ ಹಾಗೂ ಚುಟುಕು ಕ್ರಿಕೆಟ್‌ನಲ್ಲಿ ಅವರು ಉತ್ತಮ ಪ್ರದರ್ಶನ ನೀಡಿದ್ದಾರೆ,” ಎಂದು ಬಿಜು ಹೇಳಿದ್ದಾರೆ.
“ಕೇರಳದ ಅಭಿಮಾನಿಗಳು ಬಿಸಿಸಿಐ ಸಂಜು ಸ್ಯಾಮ್ಸನ್ ವಿರುದ್ಧವಾಗಿದೆ ಎಂದು ಬಿಂಬಿಸುತ್ತಿದ್ದು, ರಿಷಭ್ ಗುಣಮಟ್ಟವನ್ನು ಅಳೆಯುತ್ತಿದ್ದಾರೆ. ಇದು ತಪ್ಪು ಕೆಲಸ. ಕೇರಳದ ರಾಜಕಾರಣಿಗಳು ಕ್ರಿಕೆಟ್ ಅನ್ನೂ ತಮ್ಮ ರಾಜಕೀಯ ದಾಳವಾಗಿ ಬಳಸುತ್ತಿದ್ದಾರೆ. ಇದಕ್ಕೆ ಸಂಜು ಬಲಿಪಶು. ಇವೆಲ್ಲದನ್ನೂ ನಾನು ಒಪ್ಪುವುದಿಲ್ಲ. ಸದ್ಯದ ಪರಿಸ್ಥಿತಿ ಸಂಜುಗೆ ಪೂರಕವಾಗಿಲ್ಲ. ಬಿಸಿಸಿಐ ಆ ರೀತಿಯ ಮನೋಭಾವ ಹೊಂದಿಲ್ಲ. ಸಂಜುಗೆ ಅವಕಾಶ ಸಿಗದಿರುವುದಕ್ಕೆ ಎಡಗೈ- ಬಲಗೈ ಬ್ಯಾಟಿಂಗ್ ಹೊಂದಾಣಿಕೆಯೇ ಕಾರಣ. ಲಕ್ಷ್ಮಣ್ ಅವರಂಥ ಕೋಚ್‌ಗಳು ಇರುವೆಡೆ ಅಭಿಮಾನಿಗಳು ಅಂದಾಜು ಮಾಡಿದಂತೆ ತಾರತಮ್ಯ ನಡೆಯಲು ಸಾಧ್ಯವೇ ಇಲ್ಲ,” ಎಂಬುದಾಗಿ ಅವರು ಹೇಳಿದ್ದಾರೆ.
ಇದನ್ನೂ ಓದಿ | IND VS NZ | ಸಂಜು ಸ್ಯಾಮ್ಸನ್ಗೆ ಟೀಮ್ ಇಂಡಿಯಾದಲ್ಲಿ ಅವಕಾಶ ನೀಡುವಂತೆ ನ್ಯೂಜಿಲ್ಯಾಂಡ್ನಲ್ಲೂ ಅಭಿಯಾನ