ಕುವೈಟ್: ಕೊರೊನಾ ಕಾರಣಕ್ಕೆ ಮುಂದೂಡಿಕೆಯಾಗಿದ್ದ (Asian games) ಏಷ್ಯನ್ ಗೇಮ್ಸ್ 2023ರ ಸೆಪ್ಟೆಂಬರ್ 23ರಿಂದ ಅಕ್ಟೋಬರ್ 8ರವರೆಗೆ ನಡೆಯಲಿದೆ. ಏಷ್ಯಾ ಒಲಿಂಪಿಕ್ಸ್ ಕೌನ್ಸಿಲ್ (OCA) ಸಭೆಯಲ್ಲಿ ದಿನಾಂಕ ಪ್ರಕಟಗೊಂಡಿದ್ದು, ಹಿಂದೆ ನಿಗದಿಯಾಗಿದ್ದ ಹ್ಯಾಂಗ್ಝೌನಲ್ಲೇ ನಡೆಸಲು ತೀರ್ಮಾನಿಸಲಾಗಿದೆ.
2022ರ ಸೆಪ್ಟೆಂಬರ್ 10ರಿಂದ 25ರವರೆಗೆ ಏಷ್ಯನ್ ಗೇಮ್ಸ್ ಆಯೋಜಿಸಲು ಈ ಹಿಂದೆ ತೀರ್ಮಾನಿಸಲಾಗಿತ್ತು. ಆದರೆ, ಶಾಂಘೈ ಪಟ್ಟಣಕ್ಕೆ ಸಮೀಪದಲ್ಲಿರುವ ಹ್ಯಾಂಗ್ಝೌನಲ್ಲಿ ಕೊರೊನಾ ಪ್ರಕರಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಅಲ್ಲಿನ ಕಮ್ಯುನಿಸ್ಟ್ ಸರಕಾರ ಆ ಲಾಕ್ಡೌನ್ ಹೇರಿದೆ. ಇದರ ಪರಿಣಾಮವಾಗಿ ಹಾಲಿ ಆವೃತ್ತಿಯಲ್ಲಿ ಟೂರ್ನಮೆಂಟ್ ನಡೆಸಲು ಸಾಧ್ಯವಾಗಿಲ್ಲ. ಹೀಗಾಗಿ ಏಷ್ಯಾ ಒಲಿಂಪಿಕ್ಸ್ ಕೌನ್ಸಿಲ್ ಸಭೆ ಸೇರಿ ಮುಂದಿನ ವರ್ಷದ ದಿನಾಂಕವನ್ನು ಪ್ರಕಟ ಮಾಡಿದೆ.
ಬೇರೆ ಕ್ರೀಡಾಕೂಟಗಳಿಗೆ ತೊಂದರೆಯಾಗದಂತೆ ಹೊಸ ದಿನಾಂಕವನ್ನು ಪ್ರಕಟಿಸಲಾಗಿದೆ ಎಂದು ಏಷ್ಯಾ ಒಲಿಂಪಿಕ್ಸ್ ಕೌನ್ಸಿಲ್ ಹೇಳಿದೆ. ಏಷ್ಯಾ ಗೇಮ್ಸ್ನಲ್ಲಿ ಸುಮಾರು 10 ಸಾವಿರ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ ಎಂದು ಆಯೋಜಕರು ತಿಳಿಸಿದ್ದಾರೆ.
ಚೀನಾದಲ್ಲಿ ಎಲ್ಲವೂ ಮುಂದೂಡಿಕೆ
ಚೀನಾದ ಕಮ್ಯುನಿಷ್ಟ್ ಸರಕಾರ ಕೊರೊನಾ ಬಗ್ಗೆ ಸಂಪೂರ್ಣ ಅಸಹಿಷ್ಣುತೆ ಹೊಂದಿದೆ. ಹೀಗಾಗಿ ಒಂದು ಪ್ರಕರಣ ಕಂಡು ಬಂದರೂ ಇಡೀ ನಗರವನ್ನು ಲಾಕ್ಡೌನ್ಗೆ ಒಳಪಡಿಸುತ್ತಾರೆ. ಇದರಿಂದಾಗಿ ಅಲ್ಲಿ ನಡೆಯಬೇಕಾಗಿದ್ದ ಹಲವಾರ ಕ್ರೀಡಾಕೂಟಗಳು ಮುಂದೂಡಿಕೆಯಾಗಿವೆ. ಏಷ್ಯನ್ ಗೇಮ್ಸ್ ಈ ಪಟ್ಟಿಯಲ್ಲಿ ಮೊದಲ ಬೃಹತ್ ಕ್ರೀಡಾಕೂಟ. ವರ್ಲ್ಡ್ ಯೂನಿವರ್ಸಿಟಿ ಗೇಮ್ಸ್ ಜೂನ್ನಲ್ಲಿ ನಡೆಯಬೇಕಾಗಿತ್ತು. ಅದನ್ನೂ ಮುಂದಕ್ಕೆ ಹಾಕಲಾಗಿದ್ದು, 2023ರಲ್ಲೇ ನಡೆಯುವ ಸಾಧ್ಯತೆಗಳಿವೆ.
ಇದನ್ನೂ ಓದಿ | ಕಾಮನ್ವೆಲ್ತ್ ಗೇಮ್ಸ್ ನಿಯೋಗವನ್ನು ಹುರಿದುಂಬಿಸಲಿದ್ದಾರೆ Narendra Modi , ಬುಧವಾರ ಸಂವಾದ