ಮುಂಬಯಿ: ಚೀನಾದ ಚೀನದ ಹ್ಯಾಂಗ್‌ಝೂನಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್(Asian Games) ಕ್ರೀಡಾಕೂಟಕ್ಕೆ ಭಾರತದ ಪುರುಷರ ಫುಟ್ಬಾಲ್ ತಂಡ(indian football team) ಈಗಾಗಲೇ ಪ್ರಕಟಗೊಂಡಿದೆ. ಆದರೆ ತಂಡದಲ್ಲಿ ಸುನೀಲ್ ಚೆಟ್ರಿ(Sunil Chhetri) ಮಾತ್ರ ಅನುಭವಿ, ಉಳಿದ ಎಲ್ಲ ಆಟಗಾರರು ಅನನುಭವಿಗಳು. ಸ್ಟಾರ್ ಆಟಗಾರರು ತಂಡಕ್ಕೆ ಆಯ್ಕೆಯಾಗದಿರಲು ಪ್ರಮುಖ ಕಾರಣ ಐಎಸ್‌ಎಲ್ ಕ್ಲಬ್‌ಗಳು ಆಟಗಾರರನ್ನು ಬಿಡುಗಡೆಗೊಳಿಸದಿರುವುದು. ಆದರೆ ಚೆಟ್ರಿ ಅವರು ತನಗೆ ರಾಷ್ಟ್ರೀಯ ತಂಡ ಮುಖ್ಯ ಎಂದು ಕ್ಲಬ್ ತೊರೆದು ತಂಡವನ್ನು ಮುನ್ನಡೆಸಲಿದ್ದಾರೆ. ಅವರ ಈ ನಿರ್ಧಾರಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
ಅನುಭವಿ ಹಾಗೂ ಹಿರಿಯ ಗೋಲ್ ಕೀಪರ್ ಗುರ್‌ಪ್ರೀತ್ ಸಿಂಗ್(Gurpreet Singh Sandhu) ಮತ್ತು ಡಿಫೆಂಡರ್ ಸಂದೇಶ ಝಿಂಗನ್(Sandesh Jhingan) ಏಷ್ಯಾಕಪ್ನಲ್ಲಿ ಸ್ಥಾನ ಪಡೆಯದ ವೇಳೆ ಎಲ್ಲರಿಗೂ ಅಚ್ಚರಿಯಾಗಿತ್ತು. ಅವರನ್ನು ಏಕೆ ತಂಡಕ್ಕೆ ಆಯ್ಕೆ ಮಾಡಲಿಲ್ಲ ಎಂಬ ಪ್ರಶ್ನೆಯೂ ಅಭಿಮಾನಿಗಳಲ್ಲಿ ಮೂಡಿತ್ತು. ಇದೀಗ ಅಸಲಿ ಕಾರಣ ಬಯಲಾಗಿದೆ. ಇವರೆಲ್ಲ ಕ್ಲಬ್ ಪರ ಆಡುತ್ತಿದ್ದಾರೆ. ಅವರು ಪ್ರತಿನಿಧಿಸುವ ಕ್ಲಬ್‌ಗಳು ರಾಷ್ಟ್ರೀಯ ತಂಡದ ಪರ ಆಡಲು ಇವರಿಗೆ ಅವಕಾಶ ನೀಡದ ಕಾರಣ ತಂಡಕ್ಕೆ ಆಯ್ಕೆಯಾಗಿಲ್ಲ ಎನ್ನುವುದು ತಿಳಿದುಬಂದಿದೆ.
ತಂಡವೇ ಮುಖ್ಯ
ಸುನೀಲ್ ಚೆಟ್ರಿ ಕ್ಲಬ್ ಫುಟ್ಬಾಲ್‍ನಿಂದ ಹೊರಬಂದು ರಾಷ್ಟ್ರೀಯ ತಂಡದ ಕರ್ತವ್ಯಕ್ಕೆ ಧಾವಿಸಿದ್ದಾರೆ. ಅಲ್ಲದೆ ತನಗೆ ಕ್ಲಬ್ಗಿಂತ ದೇಶ ಮುಖ್ಯ ಎನ್ನುವ ದಿಟ್ಟ ನಿಲುವನ್ನು ತೆಗೆದುಕೊಂಡಿದ್ದಾರೆ. ಅವರ ಈ ಗಟ್ಟಿ ನಿರ್ಧಾರಕ್ಕೆ ಎಲ್ಲಡೆ ಪ್ರಶಂಸೆ ವ್ಯಕ್ತವಾಗಿದೆ. ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ ಕೂಡ ಚೆಟ್ರಿ ನಿರ್ಧಾರಕ್ಕೆ ಮೆಚ್ಚುಗೆ ಸೂಚಿಸಿದೆ.
“ಚೆಟ್ರಿ ಅತ್ಯಂತ ಪ್ರತಿಷ್ಠಿತ ಆಟಗಾರ. ಆದರೆ, ಏಷ್ಯಾನ್ ಗೇಮ್ಸ್ಗೆ ಆಯ್ಕೆಯಾದ ಭಾರತೀಯ ತಂಡ ಪರಿಪೂರ್ಣ ತಂಡವಲ್ಲ. ಹೀಗಿದ್ದರೂ ಅವರು ದೇಶಕ್ಕಾಗಿ ಆಡಲು ಮುಂದೆ ಬಂದಿರುವುದು ಅವರ ದೇಶ ಪ್ರೇಮವನ್ನು ಇಲ್ಲಿ ತೋರಿಸುತ್ತದೆ. ಅವರ ಈ ನಿರ್ಧಾರಕ್ಕೆ ಅಭಿನಂದನೆಗಳು’’ ಎಂದು ಎಐಎಫ್‍ಎಫ್ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.
‘ಎ’ ಗುಂಪಿನಲ್ಲಿ ಭಾರತ
ಏಷ್ಯನ್ ಗೇಮ್ಸ್ನಲ್ಲಿ ಭಾರತ ಪುರುಷರ ಫುಟ್ಬಾಲ್ ತಂಡ ‘ಎ’ ಗುಂಪಿನಲ್ಲಿ ಸ್ಥಾನ ಪಡೆದಿದೆ. ಈ ಗುಂಪಿನಲ್ಲಿ ಚೀನಾ, ಬಾಂಗ್ಲಾದೇಶ ಹಾಗೂ ಮ್ಯಾನ್ಮಾರ್ ಕೂಡ ಕಾಣಿಸಿಕೊಂಡಿದೆ. ಫಿಫಾ ರ್‍ಯಾಂಕಿಂಗ್‌ನಲ್ಲಿ ಬಾಂಗ್ಲಾ ಹಾಗೂ ಮ್ಯಾನ್ಮಾರ್ ತಂಡಕ್ಕಿಂತ ಮೇಲಿರುವ ಭಾರತ ತಂಡ ಅಂತಿಮ 16ರ ಸುತ್ತು ಪ್ರವೇಶಿಸುವ ನಿರೀಕ್ಷೆ ಇದೆ. ಭಾರತ ತನ್ನ ಮೊದಲ ಪಂದ್ಯವನ್ನು ಚೀನಾ ವಿರುದ್ಧ ಆಡಲಿದೆ. ಈ ಪಂದ್ಯ ಸೆಪ್ಟೆಂಬರ್ 19 ರಂದು ನಡೆಯಲಿದೆ. ಇದಾದ ಎರಡು ದಿನಗಳ ಬಳಿಕ ಬಾಂಗ್ಲಾದೇಶ ಮತ್ತು ಸೆಪ್ಟೆಂಬರ್ 24 ರಂದು ಮ್ಯಾನ್ಮಾರ್ ವಿರುದ್ಧ ಆಡಲಿದೆ.
ಇದನ್ನೂ ಓದಿ Sunil Chhetri: ತಂದೆಯಾದ ಸುನೀಲ್ ಚೆಟ್ರಿ; ಗಂಡು ಮಗುವಿಗೆ ಜನ್ಮ ನೀಡಿದ ಸೋನಮ್
ಕಳೆದ ಒಂದು ವರ್ಷಗಳಿಂದ ಭಾರತದ ಫುಟ್ಬಾಲ್ ತಂಡ ಆಡಿದ ಎಲ್ಲ ಟೂರ್ನಿಗಳಲ್ಲಿಯೂ ಉತ್ತಮ ಪ್ರದರ್ಶನ ತೋರುತ್ತಲೇ ಬಂದಿದೆ. ಇಚ್ಚೀಚೆಗಷ್ಟೇ ಸ್ಯಾಫ್ ಟೂರ್ನಿಯಲ್ಲಿಯೂ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ತಂಡದ ಗೆಲುವಿನಲ್ಲಿ ನಾಯಕ ಸುನೀಲ್ ಚೆಟ್ರಿ ಶ್ರೇಷ್ಠ ಸಾಧನೆ ತೋರಿದ್ದರು. ಅಲ್ಲದೆ ಪ್ರತಿ ಪಂದ್ಯದಲ್ಲೂ ಗೋಲು ಬಾರಿ ತಂಡಕ್ಕೆ ಆಸರೆಯಾಗುತ್ತಿರುವ ಅವರ ಮೇಲೆ ತಂಡ ಬೆಟ್ಟದಷ್ಟು ನಿರೀಕ್ಷೆ ಇರಿಸಿದೆ.