ತಿರುವನಂತಪುರ : ಅನಾರೋಗ್ಯದ ಕಾರಣಕ್ಕೆ ಕೋಲ್ಕೊತಾದಿಂದ ಬೆಂಗಳೂರಿಗೆ ವಾಪಸಾಗಿದ್ದ ಟೀಮ್ ಇಂಡಿಯಾದ ಹೆಡ್ ಕೋಚ್ ರಾಹುಲ್ ದ್ರಾವಿಡ್ (rahul dravid) ತಂಡಕ್ಕೆ ಮರಳಿದ್ದಾರೆ. ಬೆಂಗಳೂರಿನಿಂದ ಅವರು ಕೇರಳದ ತಿರುವನಂತಪುರಕ್ಕೆ ತೆರಳಿದ್ದು, ಶನಿವಾರ ಸಂಜೆ ಭಾರತ ತಂಡದ ಆಟಗಾರರ ಅಭ್ಯಾಸದ ವೇಳೆ ಅವರು ಜತೆಗಿದ್ದರು.
ಕೋಲ್ಕೊತಾದಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಎರಡನೇ ಏಕ ದಿನ ಪಂದ್ಯದ ಬಳಿಕ ರಾಹುಲ್ ದ್ರಾವಿಡ್ ಅವರ ರಕ್ತದೊತ್ತಡದಲ್ಲಿ ಏರುಪೇರು ಉಂಟಾಗಿತ್ತು. ಹೀಗಾಗಿ ಅವರು ತಂಡದ ಜತೆ ತಿರುವನಂತಪುರಕ್ಕೆ ಪ್ರಯಾಣ ಮಾಡದೇ ಬೆಂಗಳೂರಿಗೆ ಬಂದಿದ್ದರು. ಇಲ್ಲಿ ಅವರು ತಮ್ಮ ವೈದ್ಯರ ಜತೆ ಸಮಾಲೋಚನೆ ನಡೆಸಿದ ಬಳಿಕ ತಿರುವನಂತಪುರಕ್ಕೆ ವಾಪಸಾಗಿದ್ದಾರೆ.
ಜನವರಿ 15ರಂದು ನಡೆಯಲಿರುವ ಶ್ರೀಲಂಕಾ ವಿರುದ್ಧದ ಏಕ ದಿನ ಸರಣಿಯ ಕೊನೇ ಪಂದ್ಯಕ್ಕಾಗಿ ಟೀಮ್ ಇಂಡಿಯಾದ ಆಟಗಾರರು ಶನಿವಾರ ಅಭ್ಯಾಸ ನಡೆಸಿದರು. ಶುಭ್ಮನ್ ಗಿಲ್, ವಾಷಿಂಗ್ಟನ್ ಸುಂದರ್, ಇಶಾನ್ ಕಿಶನ್ ಬ್ಯಾಟಿಂಗ್ ಅಭ್ಯಾಸ ನಡೆಸುವ ಹಾಗೂ ಅರ್ಶ್ದೀಪ್ ಸಿಂಗ್, ಕುಲ್ದೀಪ್ ಯಾದವ್ ಮತ್ತು ಯಜ್ವೇಂದ್ರ ಚಹಲ್ ಬೌಲಿಂಗ್ ಅಭ್ಯಾಸ ನಡೆಸುವ ಚಿತ್ರಗಳನ್ನು ಬಿಸಿಸಿಐ ಪೋಸ್ಟ್ ಮಾಡಿದೆ.
ಮೂರು ಪಂದ್ಯಗಳ ಸರಣಿಯಲ್ಲಿ ಮೊದಲೆರಡು ಪಂದ್ಯಗಳನ್ನು ಗೆದ್ದಿರುವ ಭಾರತ ತಂಡ ಸರಣಿಯನ್ನು ಕೈವಶ ಮಾಡಿಕೊಂಡಿದೆ. ಹೀಗಾಗಿ ಮೂರನೇ ಪಂದ್ಯ ಭಾರತ ಪಾಲಿಗೆ ಲೆಕ್ಕಕ್ಕಿಲ್ಲ. ಆದಾಗ್ಯೂ ಯುವ ಆಟಗಾರರಿಗೆ ತಮ್ಮ ಸಾಮರ್ಥ್ಯ ಪ್ರದರ್ಶನಕ್ಕೆ ಉತ್ತಮ ವೇದಿಕೆಯಾಗಲಿದೆ.
ಇದನ್ನೂ ಓದಿ | IND VS AUS | ಆಸ್ಟ್ರೇಲಿಯಾ ವಿರುದ್ಧದ ಮೊದಲ 2 ಟೆಸ್ಟ್ ಪಂದ್ಯಕ್ಕೆ ಭಾರತ ತಂಡ