ನವ ದೆಹಲಿ: ಟೀಮ್ ಇಂಡಿಯಾದ ಆರಂಭಿಕ ಬ್ಯಾಟರ್ ಹಾಗೂ ಕನ್ನಡಿಗ ಕೆ. ಎಲ್ ರಾಹುಲ್ ಫಾರ್ಮ್ ಕಳೆದುಕೊಂಡಿದ್ದಾರೆ. ಬಾಹ್ಯ ಒತ್ತಡದಿಂದಲೂ ಬಳಲಿರುವ ಅವರು ಏಕಾಗ್ರತೆ ನಷ್ಟಮಾಡಿಕೊಂಡಿದ್ದು ಕಳಪೆ ಮಟ್ಟದ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದಾರೆ. ಏತನ್ಮಧ್ಯೆ ಅವರನ್ನು ತಂಡದಿಂದ ಕೈಬಿಡಬೇಕು ಎಂಬ ಒತ್ತಾಯ ಕೇಳಿ ಬರುತ್ತಿದೆ. ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿಯ ಕೊನೇ ಎರಡು (INDvsAUS ) ಪಂದ್ಯಗಳಿಗೆ ಅವರನ್ನು ನಾಯಕತ್ವದ ಪಟ್ಟದಿಂದಲೂ ಕೆಳಕ್ಕೆ ಇಳಿಸಲಾಗಿದೆ. ಆದಾಗ್ಯೂ ಭಾರತ ತಂಡದ ಹೆಡ್ ಕೋಚ್ ರಾಹುಲ್ ದ್ರಾವಿಡ್ ಅವರು ತಂಡದ ಬೆಂಬಲಕ್ಕೆ ನಿಂತಿದ್ದಾರೆ. ಪಂದ್ಯದ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ಮಾತನ್ನು ಉಚ್ಛರಿಸಿದ್ದಾರೆ.
ಟೀಮ್ ಇಂಡಿಯಾದ ಮ್ಯಾನೇಜ್ಮೆಂಟ್ಗೆ ರಾಹುಲ್ ಅವರ ಮೇಲೆ ಭರವಸೆಯಿದೆ. ಇದೊಂದು ಕಾಲಘಟ್ಟವಷ್ಟೇ. ಅವರು ವಿದೇಶಿ ನೆಲದಲ್ಲಿ ಅತ್ಯಂತ ಯಶಸ್ವಿ ಆರಂಭಿಕ ಬ್ಯಾಟರ್. ಅವರು ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್ ನೆಲದಲ್ಲಿ ಶತಕ ಬಾರಿಸಿದವರು. ಅದಕ್ಕಾಗಿ ಅವರ ಬೆಂಬಲಕ್ಕೆ ನಿಲ್ಲಲೇಬೇಕಾಗಿದೆ. ಅವರೊಬ್ಬರ ಅತ್ಯುತ್ತಮ ಗುಣಮಟ್ಟದ ಬ್ಯಾಟರ್ ಎಂಬುದೇ ನನ್ನ ನಂಬಿಕೆ ಎಂಬುದಾಗಿ ದ್ರಾವಿಡ್ ಹೇಳಿದ್ದಾರೆ.
ಕೆ. ಎಲ್ ರಾಹುಲ್ ಉತ್ತಮ ಬ್ಯಾಟರ್ ಆಗಿರುವ ಕಾರಣ ಅವರಿಗೆ ಹೆಚ್ಚಿನ ಬೆಂಬಲದ ಅಗತ್ಯ ಇರುವುದಿಲ್ಲ. ಅವರ ತಾಂತ್ರಿಕ ನೈಪುಣ್ಯ ಹೆಚ್ಚಿಸುವ ಅಗತ್ಯವೂ ಇಲ್ಲ. ಅವರ ಬೆಂಬಲಕ್ಕೆ ನಿಲ್ಲುವ ಮೂಲಕ ಪ್ರದರ್ಶನ ಕಂಡುಕೊಳ್ಳುವುದಕ್ಕೆ ನೆರವಾಗಬಹುದು ಎಂಬುದಾಗಿ ರಾಹುಲ್ ದ್ರಾವಿಡ್ ಅವರು ಹೇಳಿದ್ದಾರೆ.
ಇದನ್ನೂ ಓದಿ : KL Rahul : ನಿಮ್ಮಷ್ಟು ಅವಕಾಶ ಇನ್ಯಾರಿಗೂ ಸಿಗದು ಎಂದು ಕೆ. ಎಲ್ ರಾಹುಲ್ ತರಾಟೆಗೆ ತೆಗೆದುಕೊಂಡ ವೆಂಕಟೇಶ್ ಪ್ರಸಾದ್
ಅಕ್ಷರ್, ಅಶ್ವಿನ್ಗೆ ಬೆಂಬಲ
ಭಾರತ ತಂಡ ಗೆಲುವಿಗೆ ಅಕ್ಷರ್ ಪಟೇಲ್ ಹಾಗೂ ಅಶ್ವಿನ್ ಅವರ ಬ್ಯಾಟಿಂಗ್ ನೆರವಾಯಿತು ಎಂಬುದಾಗಿಯೂ ಅವರೂ ಹೇಳಿದರು. ಮೊದಲ ಇನಿಂಗ್ಸ್ನಲ್ಲಿ ಭಾರತ ತಂಡದ ಕನಿಷ್ಠ ಮೊತ್ತಕ್ಕೆ ಆಲ್ಔಟ್ ಆಗುವ ಅವಕಾಶಗಳಿದ್ದವು. ಆದರೆ, ಆರ್. ಅಶ್ವಿನ್ ಮತ್ತು ಅಕ್ಷರ್ ಪಟೇಲ್ ಜೋಡಿ ಶತಕದ ಜತೆಯಾಟವಾಡಿದರು. ಅವರ ಬ್ಯಾಟಿಂಗ್ ನೆರವಿನಿಂದ ಭಾರತ ತಂಡದಲ್ಲಿ ಉತ್ತಮ ಮೊತ್ತ ಪೇರಿಸಲು ಸಾಧ್ಯವಾಯಿತು ಎಂಬುದಾಗಿ ದ್ರಾವಿಡ್ ಹೇಳಿದರು. ಇದೇ ವೇಳೆ ಅವರು ಟೀಮ್ ಇಂಡಿಯಾದ ಬೌಲರ್ಗಳ ಶ್ರಮವನ್ನೂ ಕೊಂಡಾಡಿದರು.