Site icon Vistara News

ದಕ್ಷಿಣ ಆಫ್ರಿಕಾ ತಂಡಕ್ಕೆ ಗಾಯದ ಬರೆ; ದ್ವಿತೀಯ ಟೆಸ್ಟ್​ನಿಂದ ಹೊರಬಿದ್ದ ಸ್ಟಾರ್​ ವೇಗಿ

Coetzee

ಕೇಪ್​ಟೌನ್​: ಭಾರತ ವಿರುದ್ಧದ ಮೊದಲ ಟೆಸ್ಟ್​ ಪಂದ್ಯ ಗೆದ್ದು ದ್ವಿತೀಯ ಪಂದ್ಯವಾನ್ನಾಡಲು ಸಜ್ಜಾಗಿ ನಿಂತಿರುವ ದಕ್ಷಿಣ ಆಫ್ರಿಕಾ ತಂಡಕ್ಕೆ ಗಾಯದ ಆಘಾತ ಎದುರಾಗಿದೆ. ನಾಯಕ ಟೆಂಬ ಬವುಮಾ ಗಾಯಗೊಂಡು ಟೂರ್ನಿಯಿಂದ ಹೊರಬಿದ್ದ ಬೆನ್ನಲ್ಲೇ ಇದೀಗ ಸ್ಟಾರ್​ ವೇಗಿ ಜೆರಾಲ್ಡ್ ಕೋಟ್ಜಿ(Gerald Coetzee) ಕೂಡ ಗಾಯದಿಂದಾಗಿ ಹೊರಬಿದ್ದಿದ್ದಾರೆ.(Coetzee ruled out) ಆದರೆ ಕೋಟ್ಜಿ ಬದಲಿಗೆ ಬೇರೆ ಆಟಗಾರನನ್ನು ಆಯ್ಕೆ ಮಾಡದಿರಲು ಕ್ರಿಕೆಟ್ ದಕ್ಷಿಣ ಆಫ್ರಿಕಾ ನಿರ್ಧರಿಸಿದೆ.

ಜೆರಾಲ್ಡ್ ಕೋಟ್ಜಿ ಗಾಯಗೊಂಡು ಭಾರತ ವಿರುದ್ಧದ ದ್ವಿತೀಯ ಹಾಗೂ ಅಂತಿಮ ಟೆಸ್ಟ್​ ಪಂದ್ಯದಿಂದ ಹೊರಬಿದ್ದಿರುವ ವಿಚಾರವನ್ನು ದಕ್ಷಿಣ ಆಫ್ರಿಕಾ ಕ್ರಿಕೆಟ್​ ಮಂಡಳಿ ಶನಿವಾರ ಖಚಿತಪಡಿಸಿದೆ. ಲುಂಗಿ ಎನ್‌ಗಿಡಿ ಮತ್ತು ವಿಯಾನ್ ಮುಲ್ಡರ್ ತಂಡಕ್ಕೆ ಪರ್ಯಾಯ ಬೌಲಿಂಗ್ ಆಯ್ಕೆಯಾಗಿರುವ ಕಾರಣ ಬದಲಿ ಆಟಗಾರನ ಆಯ್ಕೆ ಮಾಡಿಲ್ಲ. ಕೋಟ್ಜಿ ಸ್ಥಾನದಲ್ಲಿ ದ್ವಿತೀಯ ಪಂದ್ಯದಲ್ಲಿ ಲುಂಗಿ ಎನ್​ಗಿಡಿ ಕಣಕ್ಕಿಳಿಯಬಹುದು. ವಿಶ್ವಕಪ್​ನಲ್ಲಿ ಜೆರಾಲ್ಡ್ ಕೋಟ್ಜಿ 20 ವಿಕೆಟ್​ ಕಿತ್ತು ಅತ್ಯಧಿಕ ವಿಕೆಟ್​ ಕಿತ್ತ ಬೌಲರ್​ಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದರು.

ಮೊದಲ ಪಂದ್ಯದ ಫೀಲ್ಡಿಂಗ್​ ವೇಳೆ ನಾಯಕ ಟೆಂಬ ಬುವುಮಾ ಅವರು ಫೀಲ್ಡಿಂಗ್​ ನಡೆಸುವ ವೇಳೆ ಮಂಡಿರಜ್ಜು ಗಾಯದಿಂದಾಗಿ ಸಂಪೂರ್ಣವಾಗಿ ಪಂದ್ಯದಿಂದ ಹೊರಗುಳಿದಿದ್ದರು. ಬ್ಯಾಟಿಂಗ್​ ಕೂಡ ನಡೆಸಿರಲಿಲ್ಲ. ದ್ವಿತೀಯ ಪಂದ್ಯದಿಂದ ಅವರು ಕೂಡ ಹೊರಬಿದ್ದಿದ್ದಾರೆ. ಹೀಗಾಗಿ ವಿದಾಯ ಸರಣಿ ಆಡುತ್ತಿರುವ ಡೀನ್ ಎಲ್ಗರ್​ ಅವರಿಗೆ ದ್ವಿತೀಯ ಪಂದ್ಯದಲ್ಲಿ ತಂಡದ ನಾಯಕತ್ವ ನೀಡಲಾಗಿದೆ. ದ್ವಿತೀಯ ಟೆಸ್ಟ್ ಪಂದ್ಯ ಜನವರಿ ಮೂರದಿಂದ ಆರಂಭಗೊಳ್ಳಲಿದೆ.

ಇದನ್ನೂ ಓದಿ IND vs SA: ದ್ವಿತೀಯ ಪಂದ್ಯಕ್ಕೆ ಜಡೇಜಾ ಲಭ್ಯ; ಆಡುವ ಬಳಗದಲ್ಲಿ ಬದಲಾವಣೆ

ಅಂತಿಮ ಪಂದ್ಯಕ್ಕೆ ಡೀನ್ ಎಲ್ಗರ್ ಅವರನ್ನೇ ನಾಯಕರನ್ನಾಗಿ ಮಾಡಲು ದಕ್ಷಿಣ ಆಫ್ರಿಕಾ ಕ್ರಿಕೆಟ್​ ಮಂಡಳಿ ಈ ಮೊದಲೇ ನಿರ್ಧರಿಸಿತ್ತು. ವಿದಾಯದ ಪಂದ್ಯದಲ್ಲಿ ವಿಶೇಷ ಗೌರವ ಸೂಚಿಸಲು ಸಿದ್ಧತೆ ಮಾಡಿತ್ತು. 36ರ ಹರೆಯದ ಎಲ್ಗರ್ ಭಾರತ ವಿರುದ್ಧದ ಸರಣಿ ಆರಂಭಕ್ಕೂ ಮುನ್ನವೇ ತಮ್ಮ ಕ್ರಿಕೆಟ್​ ನಿವೃತ್ತಿಯನ್ನು ಘೋಷಿಸಿದ್ದರು. ಈ ಹಿಂದೆ ಅವರು ನಾಯಕನಾಗಿ ದಕ್ಷಿಣ ಆಫ್ರಿಕಾ ತಂಡವನ್ನು ಮುನ್ನಡೆಸಿ ಹಲವು ಸರಣಿಗಳನ್ನು ಗೆದ್ದು ಕೊಟ್ಟಿದ್ದರು. ಮೊದಲ ಟೆಸ್ಟ್​ನಲ್ಲಿ ಅಮೋಘ ಬ್ಯಾಟಿಂಗ್​ ಪ್ರದರ್ಶನ ತೋರಿದ ಎಲ್ಗರ್​ ಬರೋಬ್ಬರಿ 185 ರನ್​ ಗಳಿಸಿ ಭಾರತದ ಸೋಲಿಗೆ ಕಾರಣರಾಗಿದ್ದರು. ಅವರ ಈ ಬ್ಯಾಟಿಂಗ್​ ಸಾಹಸಕ್ಕೆ ಪಂದ್ಯಶ್ರೇಷ್ಠ ಪ್ರಶಸ್ತಿ ಕೂಡ ಒಲಿದಿತ್ತು.

ಎಲ್ಗರ್ ಅವರು 2012ರ ಪರ್ತ್ ಟೆಸ್ಟ್‌ನಲ್ಲಿ ಆಡುವ ಮೂಲಕ ದಕ್ಷಿಣ ಆಫ್ರಿಕಾ ಟೆಸ್ಟ್​ ತಂಡಕ್ಕೆ ಪದಾರ್ಪಣೆ ಮಾಡಿದ್ದರು. ಮಧ್ಯಮ ಕ್ರಮಾಂಕದಲ್ಲಿ ಆಡುವ ಮೂಲಕ ಅವರು ತಮ್ಮ ಇನಿಂಗ್ಸ್​ ಆರಂಭಿಸಿದ್ದರು. ಆ ಬಳಿಕ ಅವರು ಆರಂಭಿಕ ಆಟಗಾರನಾಗಿ ಭಡ್ತಿ ಪಡೆದರು. ನಾಯಕನಾಗಿ 17 ಬಾರಿ ತಂಡವನ್ನು ಮುನ್ನಡೆಸಿದ್ದಾರೆ. ಭಾರತ ವಿರುದ್ಧ ಅಂತಿಮ ಟೆಸ್ಟ್​ ಆಟುವ ಮೂಲಕ ಅವರ 12 ವರ್ಷಗಳ ಕ್ರಿಕೆಟ್​ ವೃತ್ತಿಜೀವನಕ್ಕೆ ತೆರೆ ಬೀಳಲಿದೆ.

Exit mobile version