ಬೆಂಗಳೂರು: ಬರ್ಮಿಂಗ್‌ಹ್ಯಾಮ್‌ಗೆ ಕಾಮನ್ವೆಲ್ತ್ ಗೇಮ್ಸ್ ಸ್ಪರ್ಧೆಗೆ ತೆರಳಿರುವ ಮಹಿಳೆಯರ ಹಾಕಿ ತಂಡಕ್ಕೆ ಕೊಡಗು ಮೂಲದ ಅಂಕಿತಾ ಸುರೇಶ್ ಸಹಾಯಕ ಕೋಚ್ ಆಗಿ ನಿಯುಕ್ತಿಗೊಂಡಿದ್ದಾರೆ. ಅವರು ಈಗಾಗಲೇ ಬರ್ಮಿಂಗ್‌ಹ್ಯಾಮ್ ತಲುಪಿದ್ದು ಅಭ್ಯಾಸ ಆರಂಭಿಸಿದ್ದಾರೆ. ಅಂಕಿತಾ ಅವರು ಕಳೆದ ವರ್ಷ ನಡೆದ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡಿದ್ದ ಭಾರತ ಮಹಿಳೆಯರ ತಂಡದ ಸಹಾಯಕ ಕೋಚ್ ಅಗಿಯೂ ಕಾರ್ಯನಿರ್ವಹಿಸಿದ್ದರು. ಅಲ್ಲಿ ಭಾರತ ತಂಡ ನಾಲ್ಕನೇ ಸ್ಥಾನ ಪಡೆದು ಇತಿಹಾಸ ಸೃಷ್ಟಿಸಿತ್ತು.
ಬರ್ಮಿಂಗ್‌ಹ್ಯಾಮ್‌ನಲ್ಲಿ ಜು. 2೮ರಿಂದ ಆ.8ರವರೆಗೆ ನಡೆಯಲಿರುವ 22ನೇ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ನಾನಾ ದೇಶಗಳ ವಿರುದ್ಧ ಆಡಲಿರುವ ಭಾರತ ಮಹಿಳೆಯರ ತಂಡಕ್ಕೆ ಸಲಹೆಗಳನ್ನು ನೀಡಲಿದ್ದಾರೆ. ಅಂಕಿತಾ ಸುರೇಶ್ ಅವರು ಸಹಾಯಕ ಕೋಚ್ ಹೊಣೆಯೊಂದಿಗೆ ತಂಡದ ವ್ಯವಸ್ಥಾಪಕರಾಗಿಯೂ ಕೂಡ ಕಾರ್ಯ ನಿರ್ವಹಿಸಲಿದ್ದಾರೆ.
ಮೂಲತಃ ಮಡಿಕೇರಿಯವರಾಗಿರುವ ಅಂಕಿತಾ ಅವರು ಸುಂಟಿಕೊಪ್ಪ ಸಮೀಪದ ಕಂಬಿಬಾಣೆಯ ಉದ್ಯಮಿ ಹೊನ್ನಂಪಾಡಿ ಸುರೇಶ್ ಕುಶಾಲಪ್ಪ ಅವರ ಪತ್ನಿಯಾಗಿದ್ದಾರೆ. ಈಗಾಗಲೇ ಇಂಗ್ಲೆಂಡ್ ತಲುಪಿ ಅಭ್ಯಾಸದಲ್ಲಿ ತೊಡಗಿರುವ ಭಾರತ ಮಹಿಳಾ ಹಾಕಿ ತಂಡವು ಮೊದಲ ಪಂದ್ಯದಲ್ಲಿ ಘಾನ ತಂಡವನ್ನು ಎದುರಿಸಲಿದೆ.