Site icon Vistara News

CWG- 2022 | ಪುರುಷರ ರಿಲೇ ತಂಡ ಫೈನಲ್‌ಗೆ ಪ್ರವೇಶ

CWG- 2022

ಬರ್ಮಿಂಗ್ಹಮ್‌ : ಕಾಮನ್ವೆಲ್ತ್‌ ಗೇಮ್ಸ್‌ನ (CWG- 2022) ಅಥ್ಲೆಟಿಕ್ಸ್‌ನಲ್ಲಿ ಭಾರತದ ರಿಲೇ ತಂಡ ೪‍X400 ಮೀಟರ್‌ ಸ್ಪರ್ಧೆಯಲ್ಲಿ ಶುಕ್ರವಾರ ಫೈನಲ್‌ಗೆ ಪ್ರವೇಶ ಪಡೆದಿದೆ. ೨ನೇ ಹೀಟ್ಸ್‌ನಲ್ಲಿ ಮುಹಮ್ಮದ್ ಅನಸ್‌, ನೋಹಾ ನಿರ್ಮಲ್‌, ಮುಹಮ್ಮದ್‌ ಅಜ್ಮಲ್‌ ಮತ್ತು ಅಮೋಲ್‌ ಜಾಕೊಬ್‌ ಅವರಿದ್ದ ತಂಡ ಎರಡನೇ ಸ್ಥಾನ ಗಳಿಸುವ ಮೂಲಕ ಪ್ರಶಸ್ತಿ ಹೋರಾಟದ ಹಂತಕ್ಕೆ ಪ್ರವೇಶ ಪಡೆಯಿತು.

ಒಟ್ಟಾರೆ ೩ ನಿಮಿಷ, ೦೬ ಸೆಕೆಂಡ್‌ ಹಾಗೂ ೯೭ ಮಿಲಿ ಸೆಕೆಂಡ್‌ಗಳಲ್ಲಿ ಗುರಿ ಮುಟ್ಟಿದ ಭಾರತ ರಿಲೇ ತಂಡ ಫೈನಲ್‌ಗೆ ಪ್ರವೇಶ ಪಡೆದುಕೊಂಡಿತು. ಟ್ರಿನಿಡಾಡ್ ಮತ್ತು ಟೊಬಾಗೊ ತಂಡ (೩: ೦೭. ೧೨ ನಿಮಿಷ) ಮೂರನೇ ಸ್ಥಾನ ಪಡೆದುಕೊಂಡರೆ, ಕೀನ್ಯಾ ತಂಡ ೩: ೦೬.೭೬ ನಿಮಿಷಗಳಲ್ಲಿ ಗುರಿ ಮುಟ್ಟಿ ಮೊದಲ ಸ್ಥಾನ ಪಡೆದುಕೊಂಡಿತು.

ಸೋಜನ್ ಫೈನಲ್‌ಗೆ

ಭಾರತದ ಮಹಿಳಾ ಲಾಂಗ್‌ಜಂಪ್‌ ಸ್ಪರ್ಧಿ ಸೋಜನ್‌ ಎಡಪಳ್ಳಿ ಫೈನಲ್‌ಗೆ ಪ್ರವೇಶ ಪಡೆಯಲು ವಿಫಲಗೊಂಡರು. ಎ ಗುಂಪಿನಲ್ಲಿದ್ದ ಅವರು ಅರ್ಹತಾ ಸುತ್ತಿನಲ್ಲಿ ಏಳನೆ ಸ್ಥಾನ ಹಾಗೂ ಒಟ್ಟಾರೆ ೧೩ನೇ ಸ್ಥಾನ ಪಡೆಯುವ ಮೂಲಕ ಪ್ರಶಸ್ತಿ ಹಂತಕ್ಕೇರುವ ಅವಕಾಶ ನಷ್ಟಮಾಡಿಕೊಂಡರು. ಅರ್ಹತಾ ಸುತ್ತಿನಲ್ಲಿ ಅವರು ತಮ್ಮ ಎರಡನೇ ಪ್ರಯತ್ನದಲ್ಲಿ ೬.೨೫ ಮೀಟರ್‌ ಗರಿಷ್ಠ ದೂರಕ್ಕೆ ಜಿಗಿದಿದ್ದರು. ಎರಡು ಗುಂಪಿನ ತಲಾ ಆರು ಅಗ್ರ ಆರು ಸ್ಪರ್ಧಿಗಳು ಫೈನಲ್‌ಗೆ ಪ್ರವೇಶ ಪಡೆದುಕೊಂಡರು.

ಜ್ಯೋತಿಗೂ ನಿರಾಸೆ

ಅದಕ್ಕಿಂತ ಮೊದಲು ನಡೆದ ೧೦೦ ಮೀಟರ್‌ ಹರ್ಡಲ್ಸ್‌ನಲ್ಲಿ ಭಾರತದ ಮಹಿಳಾ ಸ್ಪರ್ಧಿ ಜ್ಯೋತಿ ಯರಾಜಿಯೂ ಮೊದಲ ಸುತ್ತಿನ ಸ್ಪರ್ಧೆಯಲ್ಲಿ ಹೀಟ್‌ ೨ರಲ್ಲಿ ನಾಲ್ಕನೇ ಸ್ಥಾನ ಪಡೆಯುವ ಮೂಲಕ ಫೈನಲ್‌ಗೆ ಪ್ರವೇಶ ಪಡೆಯಲು ವಿಫಲಗೊಂಡರು. ೧೩.೧೮ ಸೆಕೆಂಡ್‌ಗಳಲ್ಲಿ ಓಟ ಮುಗಿಸಿದ ಅವರು ಒಟ್ಟಾರೆಯಾಗಿ ೧೦ನೇ ಸ್ಥಾನ ಪಡೆದುಕೊಂಡರು.

ಶುಕ್ರವಾರ ರಾತ್ರಿ ೧೨.೪೫ಕ್ಕೆ ಹಿಮಾದಾಸ್‌ ೨೦೦ ಮೀಟರ್‌ ಓಟದ ಸೆಮಿಫೈನಲ್‌ನಲ್ಲಿ ಸ್ಪರ್ಧಿಸಲಿದ್ದಾರೆ.

ಇದನ್ನೂ ಓದಿ | CWG- 2022 | ಮತ್ತೊಂದು ಪದಕ ಖಾತರಿಗೊಳಿಸಿದ ಭಾವಿನಾ ಪಟೇಲ್‌

Exit mobile version