Site icon Vistara News

Google Search | ಹುಡುಕಾಟದಲ್ಲಿ ಪಕ್ಷಪಾತ ಮಾಡಿದ ಗೂಗಲ್‌ಗೆ 136 ಕೋಟಿ ರೂಪಾಯಿ ದಂಡ

Google

ನವ ದೆಹಲಿ : ಮಾಹಿತಿ ಹುಡುಕಾಟದ ವೇಳೆ ಪಕ್ಷಪಾತ ಮಾಡಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಜಾಗತಿಕ ಟೆಕ್‌ ದೈತ್ಯ ಗೂಗಲ್‌ಗೆ (Google Search) ಭಾರತೀಯ ಸ್ಪರ್ಧಾ ಆಯೋಗ (ಸಿಸಿಐ) ೧೩೬ ಕೋಟಿ ರೂಪಾಯಿ ದಂಡ ವಿಧಿಸಿದೆ. ೨೦೧೨ರಲ್ಲಿ ದಾಖಲಾದ ದೂರಿನ ಆಧಾರದಲ್ಲಿ ಸಮಗ್ರ ತನಿಖೆ ನಡೆಸಿದ ಆಯೋಗ ದಂಡ ವಿಧಿಸಿದ್ದು, ಈ ಬಗ್ಗೆ ಗುರುವಾರ ಪ್ರಕಟಣೆ ಹೊರಡಿಸಿದೆ.

ಭಾರತ್‌ ಮ್ಯಾಟ್ರಿಮೊನಿ ಹಾಗೂ ಕನ್‌ಸ್ಯೂಮರ್‌ ಯುನಿಟಿ ಟ್ರಸ್ಟ್‌, ಗೂಗಲ್‌ ತನ್ನ ಜಾಹೀರಾತು ವಿಭಾಗದಲ್ಲಿ ತನಗೆ ಸೇರಿದ ಸಂಸ್ಥೆಗಳಿಗೆ ಅನಗತ್ಯ ಆದ್ಯತೆ ನೀಡುವ ಮೂಲಕ ಪಕ್ಷಪಾತ ಮಾಡುತ್ತಿದೆ ಎಂದು ಭಾರತೀಯ ಸ್ಪರ್ಧಾ ಆಯೋಗಕ್ಕೆ ದೂರು ನೀಡಿತ್ತು. ಸಂಸ್ಥೆಯು ಈ ಬಗ್ಗೆ ವಿಚಾರಣೆ ನಡೆಸಿ ೨೦೧೯ರಲ್ಲಿ ಸಮಗ್ರ ತನಿಖೆಗೆ ಆದೇಶಿಸಿತ್ತು. ಆ ವರದಿ ಆಧಾರದಲ್ಲಿ ದಂಡವನ್ನು ಪ್ರಕಟಿಸಲಾಗಿದೆ.

ವಿಷಯವೊಂದರ ಹುಡುಕಾಟದ ವೇಳೆ ಗೂಗಲ್‌ ಸರ್ಚ್‌ ತನ್ನ ಯೂಟ್ಯೂಬ್‌, ಗೂಗಲ್‌ ಮ್ಯಾಪ್ಸ್ ಮತ್ತು ಗೂಗಲ್ ನ್ಯೂಸ್ ಅನ್ನು ಜತೆಗೆ ಸೇರಿಸಿಕೊಳ್ಳುತ್ತಿತ್ತು. ಮಾಹಿತಿ ಕೇಳದ ಹೊರತಾಗಿಯೂ ತನ್ನ ಉದ್ಯಮಕ್ಕೆ ಸಂಬಂಧಿಸಿದ ವಿಷಯಗಳಿಗೆ ಆದ್ಯತೆ ನೀಡಿ ನಂಬಿಕೆ ದ್ರೋಹ ಮಾಡುತ್ತಿತ್ತು ಎಂದು ದೂರು ದಾಖಲಾಗಿತ್ತು.

“ಅನ್ಯಾಯ ಮತ್ತು ತಾರತಮ್ಯದ ಹುಡುಕಾಟ ಮತ್ತು ಹುಡುಕಾಟ ಜಾಹೀರಾತುಗಳನ್ನು ಗೂಗಲ್‌ ಪ್ರಕಟಿಸುತ್ತಿತ್ತು. ಪ್ರತಿಸ್ಪರ್ಧಿಗಳ ಸೇವೆಗಳಿಗಿಂತ ತನ್ನ ಸ್ವಂತ ಸೇವೆಗಳಿಗೆ ಅನುಚಿತ ಒಲವು ತೋರುವ ಮೂಲಕ ವೇದಿಕೆ ಸೃಷ್ಟಿ ಮಾಡುತ್ತಿತ್ತು ಎಂದು ಸಿಸಿಐ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಇದನ್ನೂ ಓದಿ | Bangalore Pothole | ಬೆಂಗಳೂರು ರಸ್ತೆ ಗುಂಡಿಗೂ ಬಂತು ಗೂಗಲ್‌ ಅಡ್ರೆಸ್‌

Exit mobile version