ಮುಂಬಯಿ: ಏಷ್ಯಾಕಪ್ಗೆ(Asia Cup) ಭಾರತದ(Team India) ಸಂಭಾವ್ಯ ಆಟಗಾರರ ಪಟ್ಟಿ ಸೋಮವಾರ ಪ್ರಕಟಗೊಳ್ಳುವುದು ಬಹುತೇಕ ಖಚಿತವಾಗಿದೆ. ಆದರೆ ಇದೀಗ ಈ ಟೂರ್ನಿ ಮತ್ತು ವಿಶ್ವಕಪ್ಗೆ ತಂಡದ ಉಪನಾಯಕ(vice captain) ಸ್ಥಾನಕ್ಕೆ ಇಬ್ಬರು ಆಟಗಾರರ ಮಧ್ಯೆ ಭಾರಿ ಪೈಪೋಟಿಯೊಂದು ಏರ್ಪಟ್ಟಿದೆ. ಆದರೆ ಬಿಸಿಸಿಐ ಮಾತ್ರ 11 ತಿಂಗಳ ಬಳಿಕ ಭಾರತ ತಂಡಕ್ಕೆ ಆಗಮಿಸಿದ ಜಸ್ಪ್ರೀತ್ ಬುಮ್ರಾಗೆ(Jasprit Bumrah) ಮಣೆ ಹಾಕುವ ಸಾಧ್ಯತೆ ಇದೆ.
ಖಾಯಂ ನಾಯಕ ರೋಹಿತ್ ಶರ್ಮ(rohit sharma) ಅವರ ಅನುಪಸ್ಥಿತಿಯಲ್ಲಿ ಮೊದಲು ಕೆ.ಎಲ್. ರಾಹುಲ್(kl rahul) ಅವರು ತಂಡವನ್ನು ಮುನ್ನಡೆಸುತ್ತಿದ್ದರು. ಬಳಿಕ ಉಪನಾಯಕನಾಗಿ ಆಯ್ಕೆಗೊಂಡಿದ್ದರು. ಆದರೆ ಸತತ ಕಳಪೆ ಪ್ರದರ್ಶನ ತೋರತ್ತಿದ್ದ ಕಾರಣ ರಾಹುಲ್ ಅವರನ್ನು ಉಪನಾಯಕನ ಸ್ಥಾನದಿಂದ ಮಾತ್ರವಲ್ಲದೆ ತಂಡದಿಂದಲೂ ಕೈಬಿಡಲಾಯಿತು. ಈ ವೇಳೆ ಹಾರ್ದಿಕ್ ಪಾಂಡ್ಯಗೆ(hardik pandya) ಈ ಜವಾಬ್ದಾರಿ ನೀಡಲಾಯಿತು. ಇದೀಗ ಪಾಂಡ್ಯ ಸ್ಥಾನಕ್ಕೆ ಕುತ್ತು ಬಂದಿದೆ. ಇದಕ್ಕೆ ಕಾರಣ ಬುಮ್ರಾ ಪುನರಾಗಮನ.
ಅಸ್ಥಿರ ಪ್ರದರ್ಶನವೇ ಕಾರಣ
ಹಾರ್ದಿಕ್ ಪಾಂಡ್ಯ ಅವರು ತಂಡವನ್ನು ಮುನ್ನಡೆಸಿ ತಂಡಕ್ಕೆ ಗೆಲುವು ತಂದುಕೊಡುವಲ್ಲಿ ಯಶಸ್ವಿಯಾದರೂ, ಅವರ ಪ್ರದರ್ಶನ ಮಾತ್ರ ಕಳಪೆ ಮಟ್ಟದಿಂದ ಕೂಡಿದೆ. ಹೀಗಾಗಿ ಅವರನ್ನು ಮಹತ್ವದ ಏಷ್ಯಾಕಪ್ ಮತ್ತು ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಉಪನಾಯಕ ಸ್ಥಾನದಿಂದ ಕೈಬಿಡುವ ನಿರ್ಧಾರ ಮಾಡಲಾಗಿದೆ ಎಂದು ಬಿಸಿಸಿಐ ಮೂಲವೊಂದು ತಿಳಿಸಿರುವುದಾಗಿ ಇನ್ಸೈಡ್ ಸ್ಪೋರ್ಟ್ಸ್ ವರದಿ ಮಾಡಿದೆ.
ಬುಮ್ರಾ ಸೂಕ್ತ
ನಾಯಕತ್ವದ ವಿಷಯದಲ್ಲಿ ಅನುಭವವನ್ನು ನೋಡಿದರೆ, ಬುಮ್ರಾ ಪಾಂಡ್ಯಗಿಂತ ಮುಂದಿದ್ದಾರೆ. 2022ರಲ್ಲಿ ಟೆಸ್ಟ್ ತಂಡದ ನಾಯಕರಾಗಿದ್ದರು. ದಕ್ಷಿಣ ಆಫ್ರಿಕಾದ ಏಕದಿನ ಪ್ರವಾಸದ ಸಮಯದಲ್ಲಿ ಪಾಂಡ್ಯಗಿಂತ ಮೊದಲು ಬುಮ್ರಾ ಏಕದಿನ ತಂಡದ ಉಪನಾಯಕರಾಗಿದ್ದರು. ಜತೆಗೆ ಅವರ ತಂಡದ ಪ್ರಧಾನ ಬೌಲರ್ ಕೂಡ ಆಗಿದ್ದಾರೆ. ಹೀಗಾಗಿ ಅವರು ಸೂಕ್ತ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಮಾಹಿತಿ ನೀಡಿರುವುದಾಗಿ ವರದಿಯಾಗಿದೆ.
ಶಾಂತ ಸ್ವಭಾವದ ನಾಯಕತ್ವ
ಕಠಿಣ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕು ಎಂಬುದನ್ನು ಬುಮ್ರಾ ಈಗಾಗಲೇ ಸಾಬೀತುಪಡಿಸಿದ್ದಾರೆ. ಇಂಗ್ಲೆಂಡ್ ವಿರುದ್ಧ ಕಳೆದ ವರ್ಷ ಮ್ಯಾಂಚೆಸ್ಟರ್ನಲ್ಲಿ ನಡೆದ ಟೆಸ್ಟ್ ಪಂದ್ಯದ ವೇಳೆ ವಿರಾಟ್ ಕೊಹ್ಲಿ ಅವರು ಜಾಕ್ ಲೀಚ್ ಅವರ ಕ್ಯಾಚ್ ಕೈಬಿಟ್ಟ ಕ್ಷಣದಲ್ಲಿ ಅದು ಅರಿವಿಗೆ ಬಂದಿತ್ತು. ನಾಯಕತ್ವ ವಹಿಸಿದ್ದ ಬುಮ್ರಾಗೆ ಹತಾಶೆಗೊಳ್ಳಲು ಅವಕಾಶವಿತ್ತು, ಆದರೆ ಬುಮ್ರಾ ನಗುವಿನೊಂದಿಗೆ ಕೊಹ್ಲಿ ಅವರ ಪ್ರಯತ್ನವನ್ನು ಶ್ಲಾಘಿಸಿದರು. ಸದ್ಯ ಐರ್ಲೆಂಡ್ ಸರಣಿಯಲ್ಲಿ ತಮಡವನ್ನು ಮುನ್ನಡೆಸುತ್ತಿರುವ ಅವರು ಇಲ್ಲಿ ಯಶಸ್ಸು ಕಂಡರೆ ಮುಂದಿನ ದಿನಗಳಲ್ಲಿ ಭಾರತ ರೋಹಿತ್ ಬಳಿಕ ತಂಡದ ನಾಯಕನಾದರೂ ಅಚ್ಚರಿಯಿಲ್ಲ.
ಇದನ್ನೂ ಓದಿ Jasprit Bumrah: ಹಾರ್ದಿಕ್ ಪಾಂಡ್ಯ ದಾಖಲೆ ಮೇಲೆ ಕಣ್ಣಿಟ್ಟ ಜಸ್ಪ್ರೀತ್ ಬುಮ್ರಾ
ನಾಯಕತ್ವದಲ್ಲಿ ದಾಖಲೆ
ತೀವ್ರ ಸ್ವರೂಪದ ಬೆನ್ನು ನೋವಿನ ಸಮಸ್ಯೆಗೆ ಶಸ್ತ್ರಚಿಕಿತ್ಸೆಗೆ ಒಳಗಾಗಿ, ಸುಮಾರು 11 ತಿಂಗಳ ಬಳಿಕ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ವಾಪಸಾದದ ಬುಮ್ರಾ ಐರ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಟಿ20 ಮಾದರಿಯಲ್ಲಿ ಭಾರತ ತಂಡವನ್ನು ಮುನ್ನಡೆಸಿದ 11ನೇ ನಾಯಕ ಎನ್ನುವ ಹಿರಿಮೆಗೆ ಪಾತ್ರರಾದರು. ಇದರ ಜತೆಗೆ ನಾಯಕತ್ವ ಪಡೆದ ಮೊದಲ ವೇಗದ ಬೌಲರ್ ಎನ್ನುವ ದಾಖಲೆಯನ್ನೂ ಬರೆದಿದ್ದರು. ಬುಮ್ರಾ ಅವರಿಗಿಂತ ಮೊದಲು ವೀರೇಂದ್ರ ಸೆಹ್ವಾಗ್, ಎಂ.ಎಸ್.ಧೋನಿ, ವಿರಾಟ್ ಕೊಹ್ಲಿ, ಗೌತಮ್ ಗಂಭೀರ್, ಸುರೇಶ್ ರೈನಾ, ಶಿಖರ್ ಧವನ್, ಅಜಿಂಕ್ಯ ರಹಾನೆ, ಕೆ.ಎಲ್.ರಾಹುಲ್, ರಿಷಭ್ ಪಂತ್ ಹಾಗೂ ಹಾರ್ದಿಕ್ ಪಾಂಡ್ಯ ಭಾರತ ತಂಡವನ್ನು ಮುನ್ನಡೆಸಿದ್ದರು. ಆದರೆ ಬೌಲರ್ ಓರ್ವ ಭಾರತ ತಂಡವನ್ನು ಮುನ್ನಡೆಸಿದ್ದು ಇದೇ ಮೊದಲು.